ಮೈಸೂರು: ‘ಪಹಲ್ಗಾಮ್ ದಾಳಿ ಹೀನ ಕೃತ್ಯ. ಉಗ್ರರನ್ನು ಹಿಮ್ಮೆಟ್ಟಿಸುವ ವಿಚಾರದಲ್ಲಿ ಐಕ್ಯತೆ ತೋರಬೇಕು ಎನ್ನುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಹಾಗೂ ಇಂಡಿಯಾ ಒಕ್ಕೂಟವು ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಂತಿರುವುದು ಸ್ವಾಗತಾರ್ಹ ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ‘ ಮೋದಿ ವಿಶ್ವ ನಾಯಕರಾಗಿ ಬೆಳೆದಿದ್ದಾರೆ. ಉಗ್ರರ ವಿಚಾರದಲ್ಲಿ ಅನೇಕ ರಾಷ್ಟ್ರಗಳು ಭಾರತವನ್ನು ಬೆಂಬಲಿಸಿದ್ದು, ಜೊತೆ ನಿಲ್ಲುವ ಭರವಸೆ ನೀಡಿವೆ. ಸರ್ಕಾರ ಕೂಡ ಉಗ್ರರ ಶೋಧವನ್ನು ಮುಂದುವರಿಸಿದ್ದು, ಯಾವ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಕೈಗೊಳ್ಳುತ್ತದೆ’ ಎಂದರು.
ಪೊಲೀಸ್ ಅಧಿಕಾರಿ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಎತ್ತಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ‘ ರಾಜ್ಯದ ರಾಜಕಾರಣದ ಬಗ್ಗೆ, ಮುಖ್ಯಮಂತ್ರಿ–ಉಪಮುಖ್ಯಮಂತ್ರಿ ಬಗ್ಗೆ ನಾನು ಮಾತನಾಡುವುದಿಲ್ಲ. ನಮ್ಮದು ಒಂದು ಪ್ರಾದೇಶಿಕ ಪಕ್ಷ. ರಾಜ್ಯದ ಆಡಳಿತದ ಬಗ್ಗೆ ಪ್ರತಿನಿತ್ಯ ಪತ್ರಿಕೆ ಓದಿ ತಿಳಿದುಕೊಂಡಿದ್ದೇನೆ. ಅಸತ್ಯ ಹೇಳಲಿಕ್ಕೆ ಹೋಗುವುದಿಲ್ಲ. ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.
‘ ಕುಮಾರಣ್ಣನ ನಾಯಕತ್ವಕ್ಕೆ ಭಗವಂತ ಎಷ್ಟು ದಿನ ಆಯಸ್ಸು ಕೊಡುತ್ತಾನೋ ಗೊತ್ತಿಲ್ಲ. ನಮ್ಮ ಪಕ್ಷಕ್ಕೆ ಅವರು ನಾಯಕರು. ನನ್ನ ಶಕ್ತಿ ಮೀರಿ ಅವರ ಕೈ ಬಲಪಡಿಸುವ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.