ADVERTISEMENT

ದರ್ಬಾರ್‌ ಹಾಲ್‌ನಲ್ಲಿ ಕಳೆಗಟ್ಟಿದ ವೈಭವ

ಜಯಚಾಮರಾಜ ಒಡೆಯರ್‌ ಜನ್ಮಶತಮಾನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 6:05 IST
Last Updated 19 ಜುಲೈ 2019, 6:05 IST
ಜಯಚಾಮರಾಜ ಒಡೆಯರ್‌ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಗೋಪಾಲಕೃಷ್ಣ ಗಾಂಧಿ ಉದ್ಘಾಟಿಸಿದರು. ಕಾಮಾಕ್ಷಿದೇವಿ, ಇಂದ್ರಾಕ್ಷಿ ದೇವಿ ಮತ್ತು ಪ್ರಮೋದಾದೇವಿ ಒಡೆಯರ್‌ ಇದ್ದಾರೆ
ಜಯಚಾಮರಾಜ ಒಡೆಯರ್‌ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಗೋಪಾಲಕೃಷ್ಣ ಗಾಂಧಿ ಉದ್ಘಾಟಿಸಿದರು. ಕಾಮಾಕ್ಷಿದೇವಿ, ಇಂದ್ರಾಕ್ಷಿ ದೇವಿ ಮತ್ತು ಪ್ರಮೋದಾದೇವಿ ಒಡೆಯರ್‌ ಇದ್ದಾರೆ   

ಮೈಸೂರು: ಅಂಬಾ ವಿಲಾಸ ಅರಮನೆಯಲ್ಲಿ ಗುರುವಾರ ಸಂಭ್ರಮ ಮನೆಮಾಡಿತ್ತು. ಜಯಚಾಮರಾಜ ಒಡೆಯರ್‌ ಅವರ ಜನ್ಮಶತಮಾನೋತ್ಸವ ಅಂಗವಾಗಿ ದರ್ಬಾಲ್‌ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಅಲ್ಲಿ ನೆರೆದವರಿಗೆ ರಾಜವೈಭೋಗದ ದಿನಗಳನ್ನು ನೆನಪಿಸುವಂತೆ ಮಾಡಿತು.

ಜನ್ಮಶತಮಾನೋತ್ಸವ ಅಂಗವಾಗಿ ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಮೈಸೂರು ರಾಜವಂಶಸ್ಥರು ನಿರ್ಧರಿಸಿದ್ದಾರೆ. ಜನ್ಮಶತಮಾನೋತ್ಸವ ಸಂಭ್ರಮಕ್ಕೆ ಗುರುವಾರ ಬೆಳಿಗ್ಗೆ ಚಾಲನೆ ಲಭಿಸಿತು.

ರಾಜ್ಯಪಾಲ ವಜುಭಾಯಿ ವಾಲಾ ಅವರ ಅನುಪಸ್ಥಿತಿಯಲ್ಲಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ರಾಜಕುಟುಂಬದ ಹಲವು ಸದಸ್ಯರು ಪಾಲ್ಗೊಂಡು ಕಾರ್ಯಕ್ರಮದ ಕಳೆ ಹೆಚ್ಚಿಸಿದರು.

ADVERTISEMENT

ದಿಕ್ಸೂಚಿ ಭಾಷಣ ಮಾಡಿದ ಗೋಪಾಲಕೃಷ್ಣ ಗಾಂಧಿ, ನಮ್ಮ ದೇಶ ಹಲವು ರಾಜರು ಮತ್ತು ರಾಣಿಯರನ್ನು ಕಂಡಿದೆ. ಸಿಂಹಾಸನದಿಂದ ಇಳಿದ ಕೆಲವೇ ವರ್ಷಗಳಲ್ಲಿ ಅವರು ಜನರ ನೆನಪಿನಿಂದ ಮರೆಯಾಗಿದ್ದಾರೆ. ಆದರೆ ಜಯಚಾಮರಾಜ ಒಡೆಯರ್‌ ಅವರಂತಹ ಕೆಲವೇ ಮಂದಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ ಎಂದರು.

ಮೈಸೂರು ಸಂಸ್ಥಾನ ಭಾರತದ ಒಕ್ಕೂಟದಲ್ಲಿ ವಿಲೀನಗೊಂಡು 69 ವರ್ಷಗಳು ಕಳೆದಿವೆ. ಜಯಚಾಮರಾಜ ಒಡೆಯರ್‌ ನಿಧನರಾಗಿ 45 ವರ್ಷಗಳು ಉರುಳಿವೆ. ಆದರೂ ಜನರು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ತತ್ವಶಾಸ್ತ್ರ, ಸಂಗೀತ ಒಳಗೊಂಡಂತೆ ವಿವಿಧ ಕ್ಷೇತ್ರಗಳಿಗೆ ಅವರು ನೀಡಿರುವ ಕೊಡುಗೆ ಅಪಾರ. ರಾಜನಾಗಿದ್ದರೂ ಸಾಮಾನ್ಯ ಪ್ರಜೆಗಳ ನಡುವೆ ಬಾಳಿದರು. ಮೈಸೂರು ಸಂಸ್ಥಾನವನ್ನು ಭಾರತದ ಒಕ್ಕೂಟದಲ್ಲಿ ಸೇರಿಸುವ ಸಂದರ್ಭದಲ್ಲಿ ಸ್ವಲ್ಪವೂ ತಡಮಾಡದೆ ಇತರರಿಗೆ ಮಾದರಿಯಾದರು ಎಂದು ಹೇಳಿದರು.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾತನಾಡಿ, ಈ ಕಾರ್ಯಕ್ರಮವನ್ನು ರಾಜ್ಯಪಾಲರು ಉದ್ಘಾಟಿಸಬೇಕಿತ್ತು. ಆದರೆ ರಾಜಕೀಯ ಬೆಳವಣಿಗೆಗಳಿಂದಾಗಿ ಅವರಿಗೆ ಬರಲು ಸಾಧ್ಯವಾಗಿಲ್ಲ. ಶುಭ ಸಂದೇಶ ಕಳುಹಿಸಿದ್ದಾರೆ ಎಂದರು.

ಜಯಚಾಮರಾಜ ಒಡೆಯರ್‌ ಅವರ ಕಾಲದಲ್ಲಿ ಆಯಿಷ್‌ ಸಂಸ್ಥೆಗೆ ಕುರುಬಾರಹಳ್ಳಿಯಲ್ಲಿ 22 ಎಕರೆ ಜಾಗ ನೀಡಲಾಗಿತ್ತು. ಆದರೆ ಆಯಿಷ್‌ ಸಂಸ್ಥೆಯನ್ನು ಬೇರೆ ಸ್ಥಳದಲ್ಲಿ ನಿರ್ಮಿಸಲಾಗಿದೆ. ಕುರುಬಾರಹಳ್ಳಿಯ ಜಾಗ ಮೈಸೂರು ವಿಶ್ವವಿದ್ಯಾಲಯದ ಒಡೆತನಲ್ಲಿದೆ. ವಿ.ವಿ ಅಲ್ಲಿ ಹೊಸ ಕ್ಯಾಂಪಸ್‌ ನಿರ್ಮಿಸಲಿದ್ದು, ಅದಕ್ಕೆ ಜಯಚಾಮರಾಜ ಒಡೆಯರ್ ಉನ್ನತ ಅಧ್ಯಯನ ಕೇಂದ್ರ ಎಂದು ಹೆಸರಿಡಲು ತೀರ್ಮಾನಿಸಿದೆ. ಇದು ಸಂತಸದ ವಿಷಯ ಎಂದು ತಿಳಿಸಿದರು.

ಜಯಚಾಮರಾಜ ಒಡೆಯರ್‌ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎ.ಎಲ್‌.ಶಿವರುದ್ರಪ್ಪ (ತತ್ವಶಾಸ್ತ್ರ), ಬಿ.ಎನ್‌.ಎಸ್‌.ಅಯ್ಯಂಗಾರ್ (ಯೋಗ), ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ (ಕನ್ನಡ ಸಾಹಿತ್ಯ), ಲಕ್ಷ್ಮಿತಾತಾಚಾರ್‌ ಮೇಲುಕೋಟೆ (ಸಂಸ್ಕೃತ ಸಾಹಿತ್ಯ), ಬಿ.ಸರೋಜಾದೇವಿ (ಚಲನಚಿತ್ರ), ಸುಧಾಮೂರ್ತಿ (ಸಮಾಜಸೇವೆ), ಸಯ್ಯದ್‌ ಘನಿ ಖಾನ್‌ (ಕೃಷಿ), ಡಾ.ಅಜಯ್‌ ದೇಸಾಯಿ (ವನ್ಯಜೀವಿ), ಪ್ರಣವಿ ಅರಸ್ (ಕ್ರೀಡೆ) ಅವರಿಗೆ ‘ಜಯಚಾಮರಾಜ ಒಡೆಯರ್‌ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಸಿ.ಡಿ. ಬಿಡುಗಡೆ: ಜಯಚಾಮರಾಜ ಒಡೆಯರ್‌ ಅವರು ರಚಿಸಿರುವ 94 ಕೃತಿಗಳನ್ನು ಒಳಗೊಂಡ ಸಿ.ಡಿಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 9 ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ತ್ರಿಷಿಕಾ ಕುಮಾರಿ, ಕಾಮಾಕ್ಷಿ ದೇವಿ, ಇಂದ್ರಾಕ್ಷಿ ದೇವಿ, ರಾಜ ಕುಟುಂಬದ ಸದಸ್ಯರು, ಗಣ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.