ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಮೈಸೂರು: ಮೈಸೂರು ಸಿನಿಮಾ ಸೊಸೈಟಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಫೆ.20ರಿಂದ 22ರವರೆಗೆ 4ನೇ ಆವೃತ್ತಿಯ ‘ಪರಿದೃಶ್ಯ ಅಂತರರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವ’ ಆಯೋಜಿಸಲಾಗಿದೆ ಎಂದು ಸೊಸೈಟಿ ಗೌರವಾಧ್ಯಕ್ಷ ಜಿ.ಆರ್.ಚಂದ್ರಶೇಖರ್ ತಿಳಿಸಿದರು.
‘ಜಗತ್ತಿನ 114 ದೇಶಗಳ ಸುಮಾರು 3,042 ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳು ಉತ್ಸವಕ್ಕೆ ನೋಂದಾಯಿಸಿದ್ದು, ಆಯ್ದ 65 ಚಿತ್ರಗಳ ಪ್ರದರ್ಶನ ನಡೆಯಲಿದೆ. ಫೆ.20ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನೆ ನಡೆಯಲಿದ್ದು, ನಟ ಜಗ್ಗೇಶ್, ನಿರ್ದೇಶಕ ಪ್ರಕಾಶ್ ಬೆಳವಾಡಿ, ಲೇಖಕ ಗಿರೀಶ್ ರಾವ್ ಹತ್ವಾರ್ (ಜೋಗಿ), ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್, ನಟಿಯರಾದ ಕಾರುಣ್ಯ ರಾಮ್‌ಗೌಡ, ಲಾಸ್ಯ ನಾಗರಾಜ್ ಪಾಲ್ಗೊಳ್ಳುವರು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಫೆ.20ರಂದು ಸಂಜೆ 7ಕ್ಕೆ ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ಎಂಡಿ.ಪಲ್ಲವಿ ಹಾಗೂ ಫೆ.21ರಂದು ಸಂಜೆ 7ಕ್ಕೆ ಗಾಯಕರಾದ ಹೇಮಂತ್ ಕುಮಾರ್, ಲಹರಿ ಮಹೇಶ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಮಾಸ್ಟರ್ ಕ್ಲಾಸ್, ಸಂವಾದಗಳೂ ನಡೆಯಲಿವೆ’ ಎಂದರು.
‘ಫೆ.22ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದೆ. ಸಂಸದ ಯದುವೀರ್ ಒಡೆಯರ್, ನಟ ಡಾಲಿ ಧನಂಜಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಉದ್ಯಮಿ ಜಿಯಾನಿ ಬಿನ್ಹಿಮ್ ಪಾಲ್ಗೊಳ್ಳುವರು. ಅತ್ಯುತ್ತಮ ಚಿತ್ರಗಳಿಗೆ 30 ವಿಭಾಗಗಳಲ್ಲಿ ವಿವಿಧ ಪ್ರಶಸ್ತಿ ನೀಡಲಾಗುವುದು’ ಎಂದು ವಿವರಿಸಿದರು.
ಸೊಸೈಟಿ ಅಧ್ಯಕ್ಷ ಎಂ. ಚೇತನ್, ಉಪಾಧ್ಯಕ್ಷ ಶೋಭಿತ್ ರಂಗಪ್ಪ, ಕಾರ್ಯದರ್ಶಿ ಪದ್ಮಾವತಿ ಎಸ್.ಭಟ್, ಜಯಶೇಖರ್, ಜೋಗಿ ಮಂಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.