ADVERTISEMENT

ಪಡಿತರ | ಸಿಎಂ ತವರಲ್ಲೂ ನಿಲ್ಲದ ‘ಅಕ್ರಮ’: 5 ತಿಂಗಳಲ್ಲಿ 24 ಪ್ರಕರಣ

5 ತಿಂಗಳಲ್ಲಿ 24 ಪ್ರಕರಣ, 9 ಬಂಧನ, ₹ 7.16 ಲಕ್ಷ ಮೌಲ್ಯದ ಅಕ್ಕಿ ವಶ

ಎಂ.ಮಹೇಶ್
Published 9 ಸೆಪ್ಟೆಂಬರ್ 2025, 4:16 IST
Last Updated 9 ಸೆಪ್ಟೆಂಬರ್ 2025, 4:16 IST
ಎಚ್.ಡಿ.ಕೋಟೆ ಪಟ್ಟಣದ ಹ್ಯಾಂಡ್‌ಪೋಸ್ಟ್‌ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ ಬೇರೆಡೆಗೆ ಸಾಗಣೆ ಮಾಡುತ್ತಿದ್ದ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯನ್ನು ತಹಶೀಲ್ದಾರ್‌ ಶ್ರೀನಿವಾಸ್, ಪಿಐ ಗಂಗಾಧರ್ ತಂಡ ದಾಳಿ ಮಾಡಿ ವಶಕ್ಕೆ ಪಡೆದ ಕ್ಷಣ
ಎಚ್.ಡಿ.ಕೋಟೆ ಪಟ್ಟಣದ ಹ್ಯಾಂಡ್‌ಪೋಸ್ಟ್‌ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ ಬೇರೆಡೆಗೆ ಸಾಗಣೆ ಮಾಡುತ್ತಿದ್ದ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯನ್ನು ತಹಶೀಲ್ದಾರ್‌ ಶ್ರೀನಿವಾಸ್, ಪಿಐ ಗಂಗಾಧರ್ ತಂಡ ದಾಳಿ ಮಾಡಿ ವಶಕ್ಕೆ ಪಡೆದ ಕ್ಷಣ   

ಮೈಸೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ‘ಸಾರ್ವಜನಿಕ ವಿತರಣಾ ವ್ಯವಸ್ಥೆ’ (ಪಿಡಿಎಸ್‌)ಯಲ್ಲಿ ವಿತರಿಸಲಾಗುವ ಪಡಿತರವನ್ನು ಅಕ್ರಮವಾಗಿ ಮಾರಾಟ ಮಾಡುವುದು ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಲೇ ಇದೆ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ನಿಗಾ ವಹಿಸಿ, ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸುತ್ತಿದ್ದರೂ ಅಕ್ರಮ ಮುಂದುವರಿಯುತ್ತಿರುವುದು ಕಂಡುಬರುತ್ತಿದೆ.

ಇಲಾಖೆಯಿಂದ ದೊರೆತ ಅಂಕಿ–ಅಂಶಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಾದ ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಆಗಸ್ಟ್‌ ಅಂತ್ಯದವರೆಗೆ ಅಂದರೆ ಐದೇ ತಿಂಗಳಲ್ಲಿ 24 ಪ್ರಕರಣಗಳನ್ನು ದಾಖಲಿಸಲಾಗಿದ್ದು, 9 ಮಂದಿಯನ್ನು ಬಂಧಿಸಲಾಗಿದೆ. ಬರೋಬ್ಬರಿ 271 ಕ್ವಿಂಟಲ್‌ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ₹ 7.16 ಲಕ್ಷ ಆಗುತ್ತದೆ ಎಂದು ಇಲಾಖೆ ಅಂದಾಜಿಸಿದೆ.

ADVERTISEMENT

ಅನ್ನಭಾಗ್ಯ ಅಕ್ಕಿ: ಬಡತನ ರೇಖೆಗಿಂತ ಕೆಳಗಿರುವವರು (ಬಿಪಿಎಲ್‌), ಅಂತ್ಯೋದಯ, ಎಪಿಎಲ್‌ ಕಾರ್ಡ್‌ದಾರರಿಗೆ ಸರ್ಕಾರದಿಂದ ಅಕ್ಕಿ, ರಾಗಿ ಮೊದಲಾದ ಪಡಿತರವನ್ನು ವಿತರಿಸಲಾಗುತ್ತಿದೆ. ಪ್ರಸ್ತುತ ‘ಅನ್ನಭಾಗ್ಯ’ ಯೋಜನೆಯಡಿ, ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇಲಾಖೆಯ ವಿಚಕ್ಷಣೆಯ ನಡುವೆಯೂ ಅಲ್ಲಲ್ಲಿ, ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ನಡೆಯುತ್ತಲೇ ಇದೆ. ಕೆಲವರು ಅನಧಿಕೃತವಾಗಿ ಹಾಗೂ ಅಕ್ರಮವಾಗಿ ಅಕ್ಕಿಯನ್ನು ಹಣಕ್ಕೆ ಮಾರಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇಲಾಖೆಯಿಂದ ಆಗಾಗ ಪರಿಶೀಲನೆ ಹಾಗೂ ದಾಳಿ ನಡೆಸುವ ಕೆಲಸ ಮಾಡಲಾಗುತ್ತಿದೆ. ಈ ನಡುವೆಯೂ ವಾಹನಗಳಲ್ಲಿ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುವುದನ್ನು ದಂಧೆಕೋರರು ನಿಲ್ಲಿಸುತ್ತಿಲ್ಲ. ಮುಖ್ಯವಾಗಿ ‘ಅನ್ನಭಾಗ್ಯ’ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ವರದಿಯಾಗುತ್ತಲೇ ಇದೆ.

‘ಇಲಾಖೆಯಿಂದ ನಿಗಾ ವಹಿಸಿರುವ ಕಾರಣದಿಂದಲೇ ದಾಳಿ ನಡೆಸುವುದು ಹಾಗೂ ಪ್ರಕರಣಗಳನ್ನು ದಾಖಲಿಸುವುದು ನಡೆಯುತ್ತಿದೆ. ಪಡಿತರ ಪಡೆದವರು ಮಾರಿಕೊಳ್ಳದಂತೆಯೂ ಕಣ್ಗಾವಲು ವಹಿಸಲಾಗುತ್ತಿದೆ. ಅಕ್ರಮ ಸಾಗಣೆ, ಮಾರಾಟ ಹಾಗೂ ದಾಸ್ತಾನು ಮಾಡುವವವರ ವಿರುದ್ಧ ಪ್ರಕರಣ ದಾಖಲಿಸುವುದು, ಅಕ್ಕಿ ಜಪ್ತಿ ಮಾಡುವುದು ಮೊದಲಾದ ಕಲಸ ಮಾಡುತ್ತಿದ್ದೇವೆ. ಜೆಎಂಎಫ್‌ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿವೆ’ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ಪಡಿತರ ಅಕ್ರಮ ಸಾಗಣೆ ಬಗ್ಗೆ ಮಾಹಿತಿ ಆಧರಿಸಿ ದಾಳಿಗಳನ್ನು ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ ಸಿಬ್ಬಂದಿಯೂ ನಿಗಾ ವಹಿಸುತ್ತಾರೆ
ಮಂಟೇಸ್ವಾಮಿ ಜಂಟಿ ನಿರ್ದೇಶಕ ಆಹಾರ ಇಲಾಖೆ ಮೈಸೂರು

ಮನೆಗಳ ಬಳಿಯೇ ಮಾರಾಟ!

ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ದ್ವಿಚಕ್ರವಾಹನಗಳಲ್ಲಿ ಮನೆಗಳ ಬಳಿಗೆ ಬರುವ ಕೆಲವರು ‘ಅಕ್ಕಿ ಮಾರುತ್ತೀರಾ?’ ಎಂದು ಕೇಳುತ್ತಾರೆ. ಬಿಪಿಎಲ್‌ ಪಡಿತರ ಚೀಟಿದಾರರಲ್ಲಿ ಕೆಲವರು ‘ಅನ್ನಭಾಗ್ಯ’ ಯೋಜನೆಯಲ್ಲಿ ಉಚಿತವಾಗಿ ಪಡೆದ ಅಕ್ಕಿಯನ್ನು ಕೆ.ಜಿ.ಗೆ ಸರಾಸರಿ ₹ 25ರಿಂದ ₹30ಕ್ಕೆ ಮಾರುತ್ತಾರೆ. ಹೀಗೆ ಪಡಿತರ ಸಂಗ್ರಹಿಸುವ ದಂಧೆಕೋರರು ಮತ್ತಷ್ಟು ಹೆಚ್ಚಿನ ದರಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡುವುದು ನಡೆಯುತ್ತಲೇ ಇದೆ!

ಏನೇನು ಜಪ್ತಿ?

ಐದು ತಿಂಗಳ ಅವಧಿಯಲ್ಲಿ ₹ 2.23 ಲಕ್ಷ ಮೌಲ್ಯದ 53 ಕ್ವಿಂಟಲ್‌ ರಾಗಿ ₹ 25545 ಮೌಲ್ಯದ 587 ಲೀಟರ್ ಸೀಮೆಎಣ್ಣೆ (ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳನ್ನು ಹೊಂದಿರುವ ಪಿರಿಯಾಪಟ್ಟಣ ಹುಣಸೂರು ಹಾಗೂ ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ ಮಾತ್ರ ಪಡಿತರ ಚೀಟಿದಾರರಿಗೆ ವಿತರಿಸಲಾಗುತ್ತಿದೆ) ಮನೆಯಲ್ಲಿ ಅಡುಗೆಯ ಉದ್ದೇಶದ ಬಳಕೆಗೆಂದು ನೀಡಲಾಗುವ (ಡೊಮೆಸ್ಟಿಕ್) ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದ ಪ್ರಕರಣದಲ್ಲಿ ₹ 25150 ಮೌಲ್ಯದ 12 ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದುಕೊಳ್ಳುವ ಕೆಲಸವನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಯ ತಂಡ ಮಾಡಿದೆ. ₹ 13.60 ಲಕ್ಷ ಮೌಲ್ಯದ ಒಟ್ಟು 16 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇವು ಹಾಗೂ ಅಕ್ಕಿ ಸೇರಿದಂತೆ ಎಲ್ಲದರ ಮೌಲ್ಯ ₹ 23.50 ಲಕ್ಷ ಆಗುತ್ತದೆ ಎಂದು ಇಲಾಖೆ ತಿಳಿಸಿದೆ. ಮೈಸೂರು ನಗರದಲ್ಲಿ ಹೆಚ್ಚಿನ ಪ್ರಕರಣ ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.