
ಮೈಸೂರು: ‘ಪಿಂಚಣಿದಾರರು ತಮ್ಮ ಜೀವನ್ ಪ್ರಮಾಣಪತ್ರವನ್ನು ನೀಡಲು ಕಚೇರಿಗೆ ಬರಬೇಕಾಗಿಲ್ಲ. ಅಂಚೆ ಇಲಾಖೆಯು ಪಿಂಚಣಿದಾರರ ಮನೆ ಬಾಗಿಲಿನಲ್ಲಿಯೇ ಜೀವನ್ ಪ್ರಮಾಣಪತ್ರವನ್ನು ನೀಡುವ ವ್ಯವಸ್ಥೆ ಮಾಡಿದೆ’ ಎಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಕರ್ನಾಟಕ ವೃತ್ತದ ಉಪ ಪ್ರಧಾನ ವ್ಯವಸ್ಥಾಪಕ ರಾಜೀವ್ ಅವಾಸ್ಥಿ ತಿಳಿಸಿದರು.
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಜೀವನ್ ಪ್ರಮಾಣಪತ್ರ ಸಲ್ಲಿಸಲು ಪಿಂಚಣಿದಾರರಿಗೆ ನೆರವಾಗಲು ವ್ಯವಸ್ಥೆ ಮಾಡಿರುವ ವಿಶ್ರಾಂತಿ ಸ್ಥಳವನ್ನು ಬುಧವಾರ ಉದ್ಘಾಟಿಸಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅಭಿಯಾನ 4.0ಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಅಂಚೆ ಇಲಾಖೆ ಮೂಲಕ ಒದಗಿಸಲಾಗುತ್ತಿರುವ ಈ ಸೌಲಭ್ಯವನ್ನು ಪಿಂಚಣಿದಾರರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಕೋರಿದರು.
‘ಪಿಂಚಣಿದಾರರು ಪ್ರತಿ ವರ್ಷ ಜೀವನ್ ಪ್ರಮಾಣಪತ್ರವನ್ನು ಬರಹದ ರೂಪದಲ್ಲಿ ಕೊಡಬೇಕಾಗಿತ್ತು. ಈಗ ಕೇಂದ್ರ ಸರ್ಕಾರ ಡಿಜಿಟಲ್ ಪ್ರಮಾಣಪತ್ರ ನೀಡುವ ವ್ಯವಸ್ಥೆ ಜಾರಿಗೆ ತಂದಿದೆ. ಪಿಂಚಣಿದಾರರು ಮನೆಯಲ್ಲಿ ಇದ್ದುಕೊಂಡೇ ಪ್ರಮಾಣಪತ್ರವನ್ನು ಒದಗಿಸಬಹುದು’ ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಸೂಪರಿಂಟೆಂಡೆಂಟ್ ಜಿ. ಹರೀಶ್ ತಿಳಿಸಿದರು.
‘ನಮ್ಮ ಪೋಸ್ಟ್‌ಮ್ಯಾನ್‌ಗಳು ಪಿಂಚಣಿದಾರರು ಇರುವಲ್ಲಿಗೇ ತೆರಳಿ ಅಲ್ಲಿಯೇ ಡಿಜಿಟಲ್ ಜೀವನ್ ಪ್ರಮಾಣಪತ್ರ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಪ್ರತಿ ಬಾರಿ ಬಯೊಮೆಟ್ರಿಕ್ ಆಧಾರದ ಮೇಲೆ ಜೀವನ್ ಪ್ರಮಾಣಪತ್ರವನ್ನು ಮಾಡಲಾಗುತ್ತಿತ್ತು. ಆಗ ಹಲವು ತೊಂದರೆಗಳು ಉಂಟಾಗುತ್ತಿದ್ದವು. ಆದರೆ, ಈ ಬಾರಿ ಮುಖಚರ್ಯೆ ಆಧಾರದ ಮೇಲೆ ಮಾಡಲಾಗುತ್ತಿದೆ. ಇದರಿಂದ ಪಿಂಚಣಿದಾರರಿಗೆ ಸುಲಭವಾಗಿ ಪ್ರಮಾಣಪತ್ರ ಒದಗಿಸಬಹುದು’ ಎಂದರು.
ಪಿಂಚಣಿ ಮತ್ತು ಪಿಂಚಣಿದಾರರ ಕ್ಷೇಮಾಭಿವೃದ್ಧಿ ಇಲಾಖೆಯ ನಿರ್ದೇಶಕಿ ಎ.ಬಿ. ದಿವ್ಯಾ ಮಾತನಾಡಿ, ‘ಅಂಚೆ ಇಲಾಖೆಯ ಕ್ರಮದಿಂದ ಪಿಂಚಣಿದಾರರಿಗೆ ತುಂಬಾ ಅನೂಕೂಲ ಆಗಿದೆ’ ಎಂದು ಹೇಳಿದರು.
ಮೈಸೂರು ಅಂಚೆ ವಿಭಾಗದ ಉಪ ಅಧೀಕ್ಷಕ ವಿ.ಎಲ್. ನವೀನ್, ಮೈಸೂರು ಪ್ರಧಾನ ಅಂಚೆ ಕಚೇರಿಯ ಪಾಲಕ ವನಜಾಕ್ಷ, ಅಂಚೆ ಇಲಾಖೆ ಪೇಮೆಂಟ್ ಬ್ಯಾಂಕ್ ವ್ಯವಸ್ಥಾಪಕ ವಿನಯ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.