ADVERTISEMENT

‘ನಾದ ಸಂಜೆ – ಜುಗಲ್‌ಬಂದಿ’ಗೆ ಮನಸೋತ ಜನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 8:02 IST
Last Updated 19 ಡಿಸೆಂಬರ್ 2025, 8:02 IST
ನಗರದ ಕಿರುರಂಗಮಂದಿರದಲ್ಲಿ ನಡೆದಿರುವ ‘ನಿರಂತರ ರಂಗ ಉತ್ಸವ’ದಲ್ಲಿ ಗುರುವಾರ ರವಿಶಂಕರ್ ಮಿಶ್ರ ಕೊಳಲು ವಾದನ ಪ್ರಸ್ತುತಪಡಿಸಿದರು. ರಿಷಿ ಪ್ರಸಾದ್ ತಬಲಾದಲ್ಲಿ ಸಾಥ್‌ ನೀಡಿದರು –ಪ್ರಜಾವಾಣಿ ಚಿತ್ರ
ನಗರದ ಕಿರುರಂಗಮಂದಿರದಲ್ಲಿ ನಡೆದಿರುವ ‘ನಿರಂತರ ರಂಗ ಉತ್ಸವ’ದಲ್ಲಿ ಗುರುವಾರ ರವಿಶಂಕರ್ ಮಿಶ್ರ ಕೊಳಲು ವಾದನ ಪ್ರಸ್ತುತಪಡಿಸಿದರು. ರಿಷಿ ಪ್ರಸಾದ್ ತಬಲಾದಲ್ಲಿ ಸಾಥ್‌ ನೀಡಿದರು –ಪ್ರಜಾವಾಣಿ ಚಿತ್ರ   

ಮೈಸೂರು: ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿರುವ ನಿರಂತರ ರಂಗ ಉತ್ಸವದಲ್ಲಿ ಗುರುವಾರ ದೇವಾನಂದ ವರಪ್ರಸಾದ ಮತ್ತು ನಿರಂತರ ಗೆಳೆಯರು ಪ್ರಸ್ತುತ ಪಡಿಸಿದ ರಂಗಗೀತೆಗಳು ಕಿವಿಗೆ ಇಂಪು ನೀಡಿದವು.

ಸಭಾ ಕಾರ್ಯಕ್ರಮದಲ್ಲಿ ಪತ್ರಕರ್ತ ಜಿ.ಪಿ.ಬಸವರಾಜು ಮಾತನಾಡಿ, ‘ಮತ, ಧರ್ಮ, ಜಾತಿಯ ಭೇದವಿಲ್ಲದೆ ಸಮಾಜ ಕಟ್ಟುವ ಕಾರ್ಯದಲ್ಲಿ ಯುವಸಮೂಹ ತೊಡಗಿಕೊಳ್ಳಬೇಕಿದ್ದು, ನಿರಂತರ ತಂಡದ ಕಾರ್ಯ ಮಾದರಿ’ ಎಂದು ಹೇಳಿದರು.

‘ಈಚೆಗೆ ದೇಶ ಒಡೆಯುವ ಮಾತುಗಳೇ ಹೆಚ್ಚಾಗುತ್ತಿವೆ; ಆದರೆ ದೇಶ, ಸಮಾಜ ಹಾಗೂ ಜನರನ್ನು ಒಟ್ಟುಗೂಡಿಸುವ ಕೆಲಸ ಕಡಿಮೆಯಾಗುತ್ತಿದೆ. ರಂಗ ವೇದಿಕೆಗಳು ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿದೆ. ಸಂಗೀತ ಹಾಗೂ ನಾಟಕ ಕೇವಲ ಮನೋರಂಜನೆಯ ಭಾಗವೆಂದು ಭಾವಿಸುವುದು ತಪ್ಪು; ಅವು ಮಾನವನ ಚಿಂತನೆಗೆ ದಿಕ್ಕು ನೀಡುವ ಶಕ್ತಿಯುಳ್ಳ ಕಲಾರೂಪಗಳು’ ಎಂದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ ಮಾತನಾಡಿ, ‘ನಿರಂತರವು ರಂಗ ತರಬೇತಿ ಶಿಬಿರಗಳು, ನಾಟಕೋತ್ಸವಗಳು, ಜಾತ್ರೆಗಳು, ಕಾರ್ಯಾಗಾರಗಳು ಹಾಗೂ ವಿಚಾರ ಸಂಕೀರ್ಣಗಳನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮದ ನಂತರ ನಡೆದ ‘ನಾದ ಸಂಜೆ – ಜುಗಲ್‌ಬಂದಿ’ ಸಂಗೀತ ಕಾರ್ಯಕ್ರಮದಲ್ಲಿ ರವಿ ಶಂಕರ್ ಮಿಶ್ರಾ ಅವರ ಕೊಳಲ ನಾದಕ್ಕೆ ಪ್ರೇಕ್ಷಕರು ತಲೆದೂಗಿದರು. ಜುನೈನ್ ಖಾನ್ ಅವರು ಸಿತಾರ್‌ನಲ್ಲಿ, ತಬಲಾದಲ್ಲಿ ರಿಷಿ ಪ್ರಸಾದ್ ಸಾಥ್‌ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.