ಬಿ. ಚೈತ್ರಾ, ವಿಶ್ವಕಪ್ ಕೊಕ್ಕೊ ಆಟಗಾರ್ತಿ
ತಿ.ನರಸೀಪುರ: ಕೊಕ್ಕೊ ವಿಶ್ವಕಪ್‌ನಲ್ಲಿ ಆಡುವಂತಹ ಕ್ರೀಡಾಪಟುಗಳನ್ನು ಕೊಟ್ಟ ತಾಲ್ಲೂಕು ಕೇಂದ್ರದಲ್ಲಿ ಕ್ರೀಡಾಂಗಣ ನಿರ್ಮಿಸಬೇಕೆಂಬ ಕೂಗು ಈಗ ಹೋರಾಟ ರೂಪ ಪಡೆದಿದ್ದು, ಅದಕ್ಕಾಗಿ ಮ್ಯಾರಥಾನ್ ನಡಿಗೆಯೂ ನಡೆಯಲಿದೆ.
ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯ, ಕಲೆಯ ಹಿನ್ನೆಲೆ ಹೊಂದಿರುವ ತಾಲ್ಲೂಕು ಕ್ರೀಡೆಯಲ್ಲಿಯೂ ಮುಂದಿದೆ. ಹಲವಾರು ದಶಕಗಳಿಂದ ಅಥ್ಲೀಟ್, ಜಾವೆಲಿನ್ ಥ್ರೋ, ವಾಲಿವಾಲ್, ನೆಟ್‌ಬಾಲ್ ಹಾಗೂ ಕೊಕ್ಕೊ ಆಟಗಳಲ್ಲಿ ಪ್ರತಿಭಾವಂತ ಆಟಗಾರರು ಹೊರಹೊಮ್ಮಿದ್ದಾರೆ. ಆದರೆ, ಕ್ರೀಡಾಪಟುಗಳ ಅಭ್ಯಾಸಕ್ಕೆ ಪಟ್ಟಣದಲ್ಲಿ ಕ್ರೀಡಾಂಗಣವಿಲ್ಲದಿರುವುದು ವಿಷಾದನೀಯ. ಪ್ರಸ್ತುತ ಕ್ರೀಡಾಕೂಟಗಳಿಗೆ ಸಂಸ್ಥೆಗಳು ಖಾಸಗಿ ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿನ ಕ್ರೀಡಾಂಗಣದ ಮೇಲೆ ಅವಲಂಬಿತರಾಗಿದ್ದಾರೆ.
20 ವರ್ಷಗಳಿಂದ ಈ ಬೇಡಿಕೆ ಇದ್ದು, ಕೆಲ ವರ್ಷದ ಹಿಂದೆ ತಾಲ್ಲೂಕು ಕ್ರೀಡಾಂಗಣ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಹಿರಿಯ ಕ್ರೀಡಾಪಟುಗಳು ಸ್ಥಳೀಯ ಜನ ಪ್ರತಿನಿಧಿಗಳಿಗೆ, ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದಾರೆ. ಆದರೆ ಕ್ರೀಡಾಂಗಣ ಲಭ್ಯತೆಯ ಕನಸು ಇನ್ನೂ ಈಡೇರಿಲ್ಲ.
ಇತ್ತೀಚೆಗೆ ತಾಲ್ಲೂಕಿನ ಗ್ರಾಮೀಣ ಪ್ರತಿಭೆ ಕುರುಬೂರಿನ ಬಿ.ಚೈತ್ರಾ ಅವರು ಮೊದಲ ವಿಶ್ವಕಪ್ ಕೊಕ್ಕೊ ಟೂರ್ನಿಗೆ ಆಡಿ ಪಂದ್ಯ ಶ್ರೇಷ್ಟ ಪ್ರಶಸ್ತಿ ಜತೆಗೆ ಭಾರತ ವಿಶ್ವಕಪ್ ಪಡೆಯಲು ಕೊಡುಗೆ ನೀಡಿದ್ದರಿಂದ ಕ್ರೀಡಾಂಗಣ ಹೋರಾಟಕ್ಕೆ ಈಗೆ ಮತ್ತಷ್ಟು ಉತ್ಸಾಹ ತಂದಿದೆ. ಇದರ ನಡುವೆ ಈ ಭಾಗದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದು ಹಾಗೂ ಕ್ಷೇತ್ರದ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ಕ್ರೀಡಾಂಗಣ ಭರವಸೆ ಜೀವಂತವಾಗಿಸಿದೆ.
‘ಹೋರಾಟ ಸಮಿತಿಯ ನಿರಂತರ ಮನವಿಗಳ ಮೇರೆಗೆ ಸರ್ಕಾರ ಪಟ್ಟಣದ ಭೈರಾಪುರ ಸರ್ವೆ ನಂ. 46/2, 46/1ಎ, 46/1ಬಿಯಲ್ಲಿ ಸುಮಾರು 6 ಎಕರೆ ಮತ್ತು ಸರ್ವೆ ನಂ.52ರಲ್ಲಿ 3.20 ಎಕರೆ ಸೇರಿ ಒಟ್ಟು 9.20 ಎಕರೆ ಕ್ರೀಡಾಂಗಣಕ್ಕೆ ಯೋಗ್ಯ ಮತ್ತು ಸೂಕ್ತ ಪ್ರದೇಶವನ್ನು ಗುರುತಿಸಿದೆ ಎನ್ನಲಾಗಿದ್ದರೂ, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಳಂಬವಾಗಿದೆ’ ಎಂದು ದಸಂಸ ಹಾಗೂ ಹೋರಾಟ ಸಮಿತಿ ಮುಖಂಡ ಆಲಗೂಡು ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಟ್ಟಣದಲ್ಲಿ ಕ್ರೀಡಾಂಗಣಕ್ಕೆ ಒತ್ತಾಯಿಸಿ ಫೆ.16ರ, ಭಾನುವಾರ ಬೆಳಿಗ್ಗೆ ಕ್ರೀಡಾಂಗಣ ಹೋರಾಟ ಸಮಿತಿಯಿಂದ ವಿದ್ಯೋದಯ ಕಾಲೇಜು ವೃತ್ತದಿಂದ, ಕಾಲೇಜು ರಸ್ತೆ, ಲಿಂಕ್ ರಸ್ತೆ, ಕೆನರಾ ಬ್ಯಾಂಕ್ ರಸ್ತೆ ಮೂಲಕ ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ ಮನವಿ ಸಲ್ಲಿಸುವ ಮ್ಯಾರಥಾನ್ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ತಾಲ್ಲೂಕಿನ ಎಲ್ಲಾ ಕ್ರೀಡಾಪಟುಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಲು ನಾವು ಮನವಿ ಮಾಡುತ್ತೇವೆ’ ಎಂದರು.
ಗ್ರಾಮೀಣ ಕ್ರೀಡಾಪಟುಗಳ ಉತ್ತಮ ಅಭ್ಯಾಸಕ್ಕೆ ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ ಕ್ರೀಡಾಂಗಣದ ಅಗತ್ಯವಿದ್ದು ಸರ್ಕಾರ ಕ್ರಮವಹಿಸಬೇಕುಬಿ. ಚೈತ್ರಾ ವಿಶ್ವಕಪ್ ಕೊಕ್ಕೊ ಆಟಗಾರ್ತಿ
ಕ್ರೀಡಾಂಗಣಕ್ಕೆಂದು ₹5 ಕೋಟಿ ಅನುದಾನವೂ ಇದೆ. ಸರ್ಕಾರದ ಗಮನ ಸೆಳೆಯಲು ಮ್ಯಾರಥಾನ್ ನಡಿಗೆ ನಡೆಯಲಿದೆಎಂ. ರಮೇಶ್ ಕ್ರೀಡಾಂಗಣ ಹೋರಾಟ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.