ADVERTISEMENT

ಹಿಂದೂಗಳಿಗೆ ಇರುವುದೊಂದೆ ದೇಶ ಭಾರತ: ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:55 IST
Last Updated 2 ಫೆಬ್ರುವರಿ 2026, 4:55 IST
ಪಿರಿಯಾಪಟ್ಟಣದಲ್ಲಿ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವ ಸಮಾರೋಪ ಸಮಾರಂಭದಲ್ಲಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿದರು. ಸೋಮನಾಥೇಶ್ವರ ಸ್ವಾಮೀಜಿ, ಮುರುಘ ರಾಜೇಂದ್ರ ಸ್ವಾಮೀಜಿ, ಗುರುಪ್ರಸಾದ್, ಮಂಜು ಕೋಗಿಲವಾಡಿ ಹಾಜರಿದ್ದರು
ಪಿರಿಯಾಪಟ್ಟಣದಲ್ಲಿ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವ ಸಮಾರೋಪ ಸಮಾರಂಭದಲ್ಲಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿದರು. ಸೋಮನಾಥೇಶ್ವರ ಸ್ವಾಮೀಜಿ, ಮುರುಘ ರಾಜೇಂದ್ರ ಸ್ವಾಮೀಜಿ, ಗುರುಪ್ರಸಾದ್, ಮಂಜು ಕೋಗಿಲವಾಡಿ ಹಾಜರಿದ್ದರು   

ಪಿರಿಯಾಪಟ್ಟಣ: ’ನಮ್ಮ ದೇಶ ಧರ್ಮ ಸಹಿಷ್ಣತೆ, ಸಹಬಾಳ್ವೆ, ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾಗಿದೆ’ ಎಂದು ಶ್ರೀರಂಗಪಟ್ಟಣ ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಈಚೆಗೆ ಹಿಂದೂ ಸಮಾಜೋತ್ಸವ ಸಮಿತಿಯಿಂದ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮುಸ್ಲಿಮರಿಗೆ ಮತ್ತು ಕ್ರೈಸ್ತರಿಗೆ ನೋವಾದರೆ ದುಃಖ ಪಡಲು ಬೇಕಾದಷ್ಟು ದೇಶಗಳಿವೆ, ಆದರೆ ಹಿಂದೂಗಳಿಗೆ ಇರುವುದೊಂದೆ ಭಾರತ ಎನ್ನುವುದನ್ನು ಸಮಸ್ತ ಹಿಂದೂಗಳು ಮನಗಾಣಬೇಕು’ ಎಂದರು.

ADVERTISEMENT

‘ವಿಜ್ಞಾನದ ಸವಾಲಿಗೂ ನಿಲುಕದ ದೇಶದಲ್ಲಿ ಸನಾತನ ಧರ್ಮ ಪರಿಪಾಲನೆಯಿಂದ ನಮ್ಮ ಸಂಸ್ಕೃತಿ ಉಳಿಯಲಿದೆ ಎಂಬುದನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಮಕ್ಕಳು ಸಂಸ್ಕಾರ ಹೀನರಾಗಿ ಅಧರ್ಮದ ಕೆಲಸ ಮಾಡುವ ಸಾಧ್ಯತೆ ಇದೆ’ ಎಂದು ಎಚ್ಚರಿಸಿದರು.

‘ಸಂಸ್ಕಾರವಿಲ್ಲದ ಶಿಕ್ಷಣದಿಂದ ಯಾವುದೇ ಪ್ರಯೋಜನವಿಲ್ಲ. ಕಾನ್ವೆಂಟ್ ಸಂಸ್ಕೃತಿ ಬೆಳೆಸುವ ಬದಲಿಗೆ ಗುರು ಹಿರಿಯರಿಗೆ ಗೌರವಿಸುವ, ತಂದೆ ತಾಯಿಯನ್ನು ಪೂಜಿಸುವ ಸಂಸ್ಕೃತಿ ಬೆಳೆಸುವ ಅಗತ್ಯವಿದೆ’ ಎಂದು ತಿಳಿಸಿದರು.

ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ಗುರುಪ್ರಸಾದ್, ಪಂಚ ಪರಿವರ್ತನೆಯಿಂದ ಮಾತ್ರ ದೇಶದ ಅಭಿವೃದ್ಧಿ ಹಾಗೂ ಹಿಂದೂ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಪ್ರತಿಯೊಬ್ಬರು ಜಾತಿ ಭೇದ ಎಲ್ಲವನ್ನು ಮರೆತು ಸಾಮರಸ್ಯದಿಂದ ಇರಬೇಕು. ವಿಶ್ವ ಗುರುವಾಗಿ ಮುನ್ನುಗ್ಗುತ್ತಿರುವ ದೇಶಕ್ಕೆ ನಮ್ಮದೇ ಕೊಡುಗೆಯನ್ನು ಭಾರತೀಯರು ನೀಡಬೇಕು ಎಂದರು.

ಸಮಾರಂಭಕ್ಕೂ ಮೊದಲು ಪಟ್ಟಣದ ಕನ್ನಂಬಾಡಿಯಮ್ಮ ದೇವಾಲಯದಿಂದ ಭಾರತ ಮಾತೆಯ ಭಾವಚಿತ್ರದೊಂದಿಗೆ ಹನುಮನ ವಿಗ್ರಹದ ಭವ್ಯ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಚಂಡಮದ್ದಳೆ, ನಗಾರಿ, ಡೊಳ್ಳು ಕುಣಿತ, ನಂದಿದ್ವಜ ಕುಣಿತ, ಪುಟ್ಟ ಮಕ್ಕಳಿಂದ ಕೃಷ್ಣ ರಾಧೆ ಗೋಪಿಕೆಯರ ವೇಷ ಭೂಷಣ, ಕಳಸ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು.

ಆದಿಚುಂಚನಗಿರಿ ಮೈಸೂರು ಶಾಖೆ ಮಠದ ಸೋಮೇಶ್ವರನಾಥ ಸ್ವಾಮೀಜಿ, ರಾವಂದೂರು ಮುರಘಾ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಮಾಜಿ ಶಾಸಕ ಕೆ.ಮಹದೇವ್, ಮಂಜಳಾರಾಜ್, ಹಿಂದೂ ಸಮಾಜ ಸಮಿತಿಯ ಸಂಚಾಲಕ ಮಂಜು ಕೋಗಿಲವಾಡಿ, ಅಧ್ಯಕ್ಷ ಎಂ.ಸಿ.ಹರೀಶ್ ಹಾಜರಿದ್ದರು.