ADVERTISEMENT

ಮೈಸೂರು: ಜೆಎಸ್‌ಎಸ್‌ ಕಾಲೇಜಿಗೆ ‘ಪ್ಲಾಸ್ಟಿನೇಷನ್‌’ ಹೃದಯ

1994-–95ರಲ್ಲಿ ಅಮೆರಿಕದಲ್ಲಿ ಡಾ.ಎಸ್‌.ಜೆ. ನಾಗಲೋಟಿಮಠರಿಂದ ಸಂಗ್ರಹ; ಇಂದು ಹಸ್ತಾಂತರ

ಮೋಹನ್ ಕುಮಾರ ಸಿ.
Published 13 ಜುಲೈ 2022, 7:29 IST
Last Updated 13 ಜುಲೈ 2022, 7:29 IST
‘ಪ್ಲಾಸ್ಟಿನೇಷನ್‌’ ಹೃದಯ
‘ಪ್ಲಾಸ್ಟಿನೇಷನ್‌’ ಹೃದಯ   

ಮೈಸೂರು: ‘ಪ್ಲಾಸ್ಟಿನೇಷನ್‌’ ಮಾಡಿದ ಹೃದಯವನ್ನು ನಗರದ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿಗೆ ಲಂಡನ್‌ ವೈದ್ಯ ಡಾ.ಉಮೇಶ್‌ ನಾಗಲೋಟಿಮಠ ಬುಧವಾರ ಹಸ್ತಾಂತರಿಸಲಿದ್ದಾರೆ. ಯಾವುದೇ ವಾಸನೆ ಇಲ್ಲದ, ನೂರಾರು ವರ್ಷ ಕೊಳೆಯದ ಈ ಹೃದಯವನ್ನು ಮುಟ್ಟಿ ನೋಡಿ ವಿದ್ಯಾರ್ಥಿಗಳು ಕಲಿಯಬಹುದು.

‘ಫಾರ್ಮಲಿನ್‌’ ದ್ರವವಿರುವ ಗಾಜಿನ ಬಾಟಲಿಗಳಲ್ಲಿರಿಸಿದ ಮಾನವ ಹಾಗೂ ಪ್ರಾಣಿಗಳ ಅಂಗಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವುದು ಇಂದಿಗೂ ಚಾಲ್ತಿಯಲ್ಲಿದೆ. ಆದರೆ, ‘ಪ್ಲಾಸ್ಟಿನೇಷನ್‌’ ತಂತ್ರದ ಮೂಲಕ ಶವದ ಹೃದಯವನ್ನು 1994-95ರಲ್ಲಿ ಡಾ.ಉಮೇಶ್‌ ತಂದೆ ಡಾ.ಎಸ್‌.ಜೆ.ನಾಗಲೋಟಿಮಠ ಅಮೆರಿಕದಲ್ಲಿ ಸಂಗ್ರಹಿಸಿ ಭಾರತಕ್ಕೆ ತಂದಿದ್ದರು.

ಏನಿದು ‘ಪ್ಲಾಸ್ಟಿನೇಷನ್‌’?: ಮಾನವನ ದೇಹವನ್ನು ಅಧ್ಯಯನ ಮಾಡಲು ಅಂಗಾಂಶ ಸಂಗ್ರಹಕ್ಕಾಗಿ 1977ರಲ್ಲಿ ಜರ್ಮನಿಯ ಡಾ.ಗುಂಥರ್ ವ್ಯಾನ್ ಹೇಗನ್ಸ್ ಸಂಶೋಧನೆಯ ಫಲ ‘ಪ್ಲಾಸ್ಟಿನೇಷನ್‌’. ಅಂಗದಲ್ಲಿರುವ ನೀರು ಹಾಗೂ ಕೊಬ್ಬಿನಾಂಶ ತೆಗೆದು ಸಿಲಿಕಾನ್‌– ಪ್ಲಾಸ್ಟಿಕ್‌ ಅಂಶವನ್ನು ಸೇರಿಸಲಾಗುತ್ತದೆ. ‘ಪ್ಲಾಸ್ಟಿನೇಷನ್‌’ ತಂತ್ರದಿಂದ ಸಂರಕ್ಷಿಸಿದ ಅಂಗಗಳು ಕೊಳೆಯುವುದಿಲ್ಲ. ಮೃದುತ್ವವನ್ನು ಉಳಿಸಿಕೊಳ್ಳುವುದಲ್ಲದೇ ನೈಜ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡುತ್ತವೆ. ಆದರೆ, ‘ಫಾರ್ಮಲಿನ್‌’ ದ್ರವದಲ್ಲಿರಿಸಿದ ಅಂಗಗಳು ಗಟ್ಟಿ ಹಾಗೂ ಕಪ್ಪಗಾಗುತ್ತವೆ.

ADVERTISEMENT

‘ಕಾರು ಅಪಘಾತದಲ್ಲಿ ಮೃತಪಟ್ಟ ಯುವಕನ ಶವದ ಹೃದಯವನ್ನು ಪ್ಲಾಸ್ಟಿನೇಷನ್‌ ತಂತ್ರದ ಮೂಲಕ ಎಸ್‌.ಜೆ.ನಾಗಲೋಟಿಮಠ ಸಂರಕ್ಷಿಸಿ ಭಾರತಕ್ಕೆ ತಂದಿದ್ದರು. ಅದು ದೇಶಕ್ಕೆ ತಂದ ಮೊದಲ ಅಂಗಾಂಶವಾಗಿದ್ದು, ಮೈಸೂರಿನಲ್ಲಿ ವಿವಿಧ ಅಂಗಾಂಶಗಳ ಮ್ಯೂಸಿಯಂ ಸ್ಥಾಪಿಸುವುದು ಅವರ ಕನಸಾಗಿತ್ತು’ ಎಂದು ಡಾ.ಉಮೇಶ್‌ ನಾಗಲೋಟಿಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೈಸೂರಿನಿಂದ ಹುಬ್ಬಳ್ಳಿಗೆ ತೆರಳಿದ ಅವರು ಅಲ್ಲಿಯೇ ವೈದ್ಯರಾದರು. ಬಿಜಾಪುರದ ಬಿಎಲ್‌ಡಿಇ ಕಾಲೇಜಿನಲ್ಲಿ ಮಾನವನ ದೇಹದ ಹರಳುಗಳ ವಸ್ತುಸಂಗ್ರಹಾಲಯ, ಬೆಳಗಾವಿಯ ಜೆ.ಎನ್‌.ವೈದ್ಯಕೀಯ ಕಾಲೇಜಿನಲ್ಲಿ ಪ್ಯಾಥೊಲಜಿ ಮ್ಯೂಸಿಯಂ ಅನ್ನು ನಾಗಲೋಟಿಮಠ ಸ್ಥಾಪಿಸಿದ್ದರು’ ಎಂದರು.

‘ಹೃದಯದೊಂದಿಗೆ ಶ್ವಾಸಕೋಶ, ನಾಗಲೋಟಿಮಠ ಅವರು ಉಪಯೋಗಿಸಿದ ಜರ್ಮನಿಯ ಅತ್ಯಂತ ಹಳೆಯ ಸೂಕ್ಷ್ಮದರ್ಶಕಗಳನ್ನು ಜೆಎಸ್‌ಎಸ್‌ ಕಾಲೇಜಿಗೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ಮಾಹಿತಿ ನೀಡಿದರು.

*
ಭಾರತಕ್ಕೆ ಬಂದ ಮೊದಲ ‘ಪ್ಲಾಸ್ಟಿನೇಷನ್’ ಅಂಗಾಂಶ ಇದಾಗಿದೆ. 1994ರಲ್ಲಿ ಅಮೆರಿಕದಲ್ಲಿ ಡಾ.ಎಸ್‌.ಜೆ.ನಾಗಲೋಟಿಮಠ ಸಂಗ್ರಹಿಸಿದ್ದರು
–ಡಾ.ಉಮೇಶ್‌ ನಾಗಲೋಟಿಮಠ, ವೈದ್ಯ, ಲಂಡನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.