ಹುಣಸೂರು: ಹನಗೋಡು ಹೋಬಳಿ ಐಯ್ಯನಕೆರೆ ಹಾಡಿಯಲ್ಲಿ ₹ 2.60 ಕೋಟಿ ವೆಚ್ಚದಲ್ಲಿ ಬಹೂಪಯೋಗಿ ಕಟ್ಟಡ ನಿರ್ಮಿಸಿ ವಾರ್ಷಿಕ 28 ಜೇನುಕುರುಬ ಸಮುದಾಯದ ವಿದ್ಯಾರ್ಥಿಗಳನ್ನು ದಾಖಲಿಸಿ ಗುಣಮಟ್ಟದ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಜನ್‌ಮನ್ ಯೋಜನೆ ಜಾರಿಗೊಳಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಸಿದ್ದಗಂಗಮ್ಮ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಕೇಂದ್ರ ಸರ್ಕಾರ ಪಿ.ಎಂ. ಜನ್‌ಮನ್ ಯೋಜನೆಯಲ್ಲಿ ಜೇನುಕುರುಬ ಸಮಾಜದ ಮಕ್ಕಳಿಗೆ ವಿಶೇಷವಾಗಿ ಶಿಕ್ಷಣ ನೀಡುವ ದೃಷ್ಟಿಯಿಂದ ಕ್ಷೇತ್ರದ ಐಯ್ಯನಕೆರೆ ಹಾಡಿಯಲ್ಲಿ ಸುಸಜ್ಜಿಜಿತ ಕಟ್ಟಡ ನಿರ್ಮಿಸುತ್ತಿದ್ದು, ಸಮುದಾಯದ 28 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗಿದೆ. ಗ್ರಂಥಾಲಯ, ಪ್ರಯೋಗಾಲಯ ಒಳಗೊಂಡಿದೆ ಎಂದರು.
ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ಗಂಗಾಧರ್ ಮಾತನಾಡಿ, ಐಟಿಡಿಪಿ ಯೋಜನೆಯಲ್ಲಿ ತಲಾ ₹ 60 ಲಕ್ಷ ಅನುದಾನದಲ್ಲಿ ತಾಲ್ಲೂಕಿಗೆ 9 ಬಹೂಪಯೋಗಿ ಕಟ್ಟಡ ಮಂಜೂರಾಗಿದ್ದು, ಪ್ರತಿ ಕಟ್ಟಡದಲ್ಲಿ 4 ಕೊಠಡಿ, ಸಭೆ ಸಮಾರಂಭಗಳಿಗೆ ಸಮುದಾಯ ಭವನ, ಶೌಚಾಲಯ ಒಳಗೊಂಡಿದ್ದು, ಗಿರಿಜನರ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಇಂಥ ಕಟ್ಟಡ ತಾಲ್ಲೂಕಿನ ಕೊಳವಿಗೆ, ಪೆಂಜಹಳ್ಳಿ, ಬಲ್ಲೇನಹಳ್ಳಿ, ನಾಗಾಪುರ ಬ್ಲಾಕ್ 1 ಮತ್ತು 5 , ವೀರನಹೊಸಹಳ್ಳಿ, ಕೊಟ್ಟಿಗೆಕಾವಲ್, ರಂಗಯ್ಯನಕೊಪ್ಪಲು ಮತ್ತು ತೆಕ್ಕಲಹಾಡಿಯಲ್ಲಿ ನಿರ್ಮಿಸಲಾಗುವುದು ಎಂದರು.
ರೇಷ್ಮೆ ವಿಸ್ತರಣೆ: ತಂಬಾಕಿಗೆ ಪರ್ಯಾಯ ವಾಣಿಜ್ಯ ಬೆಳೆ ರೇಷ್ಮೆಗೆ ಒಲವು ತೋರುತ್ತಿದ್ದು, ಕ್ಷೇತ್ರದಲ್ಲಿ 297 ಪ್ರಗತಿಪರ ರೈತರು 130 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆದು ರೇಷ್ಮೆ ಸಾಕಣೆಕೆ ನಡೆಸಿದ್ದಾರೆ ಎಂದು ಇಲಾಖೆ ಆಧಿಕಾರಿ ಶಂಕರ್ ಮಾಹಿತಿ ನೀಡಿದರು. ರೈತರಿಗೆ ಪ್ರೋತ್ಸಾಹ ಧನ ಸಹಾಯ ₹ 1.75 ಲಕ್ಷ ನೀಡಿದ್ದೇವೆ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಸಭೆಯಲ್ಲಿ ಇದ್ದರು.
ಜೂನ್ ಅಂತ್ಯಕ್ಕೆ 13 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 12 ಪ್ರಕರಣಗಳು ಮಕ್ಕಳ ಕಲ್ಯಾಣ ಸಮಿತಿಯ ತನಿಖೆ ಪ್ರಗತಿಯಲ್ಲಿದ್ದು ಒಂದು ಪ್ರಕರಣದಲ್ಲಿ ಎಫ್.ಐ.ಆರ್. ದಾಖಲಿಸಲಾಗಿದೆಹರೀಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.