ADVERTISEMENT

ಮೋದಿ ಆಗಮನ: ಕೇಸರಿಮಯವಾದ ಕೆ.ಆರ್‌. ವೃತ್ತ

ಮಹಾರಾಜ ಕಾಲೇಜು ಮೈದಾನ ಸಂಪರ್ಕಿಸುವ ರಸ್ತೆಗಳಲ್ಲಿ ರಾರಾಜಿಸುತ್ತಿರುವ ಬಿಜೆಪಿ ಬಂಟಿಂಗ್ಸ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 13:56 IST
Last Updated 19 ಜೂನ್ 2022, 13:56 IST
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಬಿಜೆಪಿ ಬಂಟಿಂಗ್‌ಗಳನ್ನು ಹಾಕಿರುವುದು
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಬಿಜೆಪಿ ಬಂಟಿಂಗ್‌ಗಳನ್ನು ಹಾಕಿರುವುದು   

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಜೂನ್‌ 20 ಹಾಗೂ 21ರಂದು ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಅವರ ಸ್ವಾಗತಕ್ಕಾಗಿ ನಗರವನ್ನು ಸಿಂಗರಿಸಲಾಗಿದೆ. ಅವರು ಸಂಚರಿಸುವ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದ್ದು, ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.

ಸಂಜೆ 6ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಆಯಿಷ್‌ನಲ್ಲಿ ನಿರ್ಮಿಸಿರುವ ಶ್ರೇಷ್ಠತೆಯ ಕೇಂದ್ರ ಉದ್ಘಾಟಿಸಲಿದ್ದಾರೆ. ನಗರ ಕೇಂದ್ರ ರೈಲು ನಿಲ್ದಾಣದ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಸುತ್ತೂರು ಮಠದಲ್ಲಿ ಸಂಸ್ಕೃತ ಪಾಠಶಾಲೆ ಉದ್ಘಾಟಿಸಿ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಇಂಗ್ಲಿಷ್‌ನಲ್ಲಿ ವ್ಯಾಖ್ಯಾನಿಸಿರುವ 3 ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ನಂತರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ತಂಗಲಿದ್ದಾರೆ.

21ರಂದು ಬೆಳಿಗ್ಗೆ 6ಕ್ಕೆ ಅರಮನೆ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ 51 ವರ್ಗದ 15ಸಾವಿರ ಮಂದಿ ಜೊತೆ ಯೋಗಾಸನ ಮಾಡಲಿದ್ದಾರೆ. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಆಹ್ವಾನದ ಮೇರೆಗೆ, ಅವರ ನಿವಾಸದಲ್ಲಿ ಉಪಾಹಾರ ಸೇವಿಸಲಿದ್ದಾರೆ. ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಕೇಂದ್ರ ಆಯುಷ್ ಇಲಾಖೆ ಆಯೋಜಿಸಿರುವ ಯೋಗದ ಮಹತ್ವ ಸಾರುವ ವಸ್ತುಪ್ರದರ್ಶನ ಉದ್ಘಾಟಿಸಿ, ವೀಕ್ಷಿಸಲಿದ್ದಾರೆ. ಬಳಿಕ ನಿರ್ಗಮಿಸಲಿದ್ದಾರೆ.

ADVERTISEMENT

ಅವರ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ನಡೆದಿದೆ. ಎಸ್‌ಪಿಜಿ, ಎನ್‌ಎಸ್‌ಜಿ ನೇತೃತ್ವದಲ್ಲಿ ಭದ್ರತೆ ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ ಅರಮನೆ ಹಾಗೂ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಹೃದಯ ಭಾಗವಾದ ಕೆ.ಆರ್. ವೃತ್ತವನ್ನು ಕೇಸರಿ ಬಣ್ಣದ ಬಂಟಿಂಗ್‌ಗಳನ್ನು ಕಟ್ಟಿ ಕೇಸರಿಮಯ ಮಾಡಲಾಗಿದೆ. ಮಹಾರಾಜ ಕಾಲೇಜು ಸುತ್ತಮುತ್ತ ಹಾಗೂ ಸಂಪರ್ಕಿಸುವ ರಸ್ತೆಗಳಲ್ಲಿ ಬಿಜೆಪಿ ಬಂಟಿಂಗ್‌ಗಳು ರಾರಾಜಿಸುತ್ತಿದ್ದು, ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಲಾಗಿದೆ. ಮತ್ತಷ್ಟು ಕಡೆಗಳಲ್ಲಿ ಕಟ್ಟುವ ಕೆಲಸ ನಡೆದಿದೆ.

ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆತರುವ ಜವಾಬ್ದಾರಿಯನ್ನು ಈ ಭಾಗದ ಜಿಲ್ಲಾಡಳಿತಗಳಿಗೆ ವಹಿಸಲಾಗಿದೆ. ಬಸ್‌ಗಳಲ್ಲಿ ಅವರನ್ನು ಕರೆತರಲಾಗುತ್ತಿದೆ. 20 ಮಂದಿಯೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ.

ಮೈಸೂರಿನ ಕೆ.ಆರ್. ವೃತ್ತದಲ್ಲಿ ಕೇಸರಿ ಬಂಟಿಂಗ್‌ಗಳನ್ನು ಕಟ್ಟಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.