ADVERTISEMENT

ಮೈಸೂರಲ್ಲಿ 3ನೇ ಬಾರಿಗೆ ತಂಗಲಿರುವ ಪ್ರಧಾನಿ ನರೇಂದ್ರ ಮೋದಿ: ಸಂಸದ ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 8:24 IST
Last Updated 17 ಜೂನ್ 2022, 8:24 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ 3ನೇ ಬಾರಿಗೆ ವಾಸ್ತವ್ಯ ಹೂಡಲಿದ್ದಾರೆ. ಇದು ಅವರು ಇಲ್ಲಿನ ಜನರ ಮೇಲೆ ಇಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

‘ಜೂನ್‌ 20ರಂದು ಸಂಜೆ 4.50ಕ್ಕೆ ವಿಮಾನನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ’ ಸಮಾರಂಭದಲ್ಲಿ ಭಾಗವಹಿಸಿ, ಭಾಷಣ ಮಾಡಲಿದ್ದಾರೆ. ಆಯುಷ್‌ನಲ್ಲಿ ಕೇಂದ್ರದ ಅನುದಾನ ₹ 150 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಉತ್ಕೃಷ್ಟ ಕೇಂದ್ರವನ್ನು ಅದೇ ವೇದಿಕೆಯಲ್ಲಿ ಉದ್ಘಾಟಿಸಲಿದ್ದಾರೆ’ ಎಂದು ಇಲ್ಲಿ ಪತ್ರಕರ್ತರಿಗೆ ಶುಕ್ರವಾರ ಮಾಹಿತಿ ನೀಡಿದರು.

‘₹ 500 ಕೋಟಿ ವೆಚ್ಚದ ರೈಲ್ವೆ ಯೋಜನೆಯೊಂದನ್ನು ಕೂಡ ಉದ್ಘಾಟಿಸಲಿದ್ದಾರೆ. ಅದು ಮೈಸೂರಿಗೆ ದೊಡ್ಡ ಕೊಡುಗೆಯಾಗಲಿದೆ. ಶೀಘ್ರವೇ ಆ ಯೋಜನೆ ಬಗ್ಗೆ ವಿವರ ನೀಡಲಿದ್ದೇನೆ’ ಎಂದರು.

ADVERTISEMENT

‘ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆಯಲಿದ್ದಾರೆ. ಅಲ್ಲಿ ಸಂಸ್ಕೃತ ಪಾಠಶಾಲೆ ಉದ್ಘಾಟಿಸಲಿದ್ದಾರೆ. ನಂತರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಅಂದು ನಗರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇದರೊಂದಿಗೆ ಅವರು 3 ಬಾರಿ ತಂಗಿದ್ದ ಕೆಲವೇ ನಗರಗಳ ಪೈಕಿ ಮೈಸೂರು ಸೇರಲಿದೆ’ ಎಂದು ತಿಳಿಸಿದರು.

‘ಜೂನ್‌ 21ರಂದು ಅಂಬಾವಿಲಾಸ ಅರಮನೆ ಆವರಣದಲ್ಲಿ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾವಿರಾರು ಮಂದಿ ಮೈಸೂರಿಗರೊಂದಿಗೆ ಯೋಗಾಸನಗಳನ್ನು ಮಾಡಲಿದ್ದಾರೆ. ವಸ್ತುಪ್ರದರ್ಶನ ವೀಕ್ಷಿಸಲಿದ್ದಾರೆ. ನಂತರ ಮೈಸೂರಿನಿಂದ ತೆರಳಲಿದ್ದಾರೆ. ಇದಕ್ಕಾಗಿ ರಸ್ತೆ ಅಭಿವೃದ್ಧಿ ಮೊದಲಾದ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.