ADVERTISEMENT

12 ಗಂಟೆಗಳಲ್ಲೇ ದರೋಡೆಕೋರರನ್ನು ಹಿಡಿದ ಪೊಲೀಸರು

ಹುಣಸೂರು ಪಟ್ಟಣ ಪೊಲೀಸರ ಮಿಂಚಿನ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 9:57 IST
Last Updated 1 ಜನವರಿ 2020, 9:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಹುಣಸೂರು ಪಟ್ಟಣ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 20 ಗ್ರಾಂ ತೂಕದ ಚಿನ್ನದ ಸರ, ₹ 5,800 ನಗದು, ಬೈಕು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಬಾಗಲೂರಿನ ನಿವಾಸಿಗಳಾದ ಪ್ರದೀಪ ಹಾಗೂ ಸ್ನೇಹಿತರು ಹೊಸ ವರ್ಷಾಚರಣೆ ಸಂಭ್ರಮಾಚರಣೆಗಾಗಿ ಸೋಮವಾರ ರಾತ್ರಿ 11ರ ಸಮಯದಲ್ಲಿ ಮಡಿಕೇರಿಗೆ ತೆರಳುವಾಗ, ಹುಣಸೂರು–ಮೈಸೂರು ರಸ್ತೆಯ ರೊಟೆನಾ ಹೋಟೆಲ್‌ ಬಳಿ ಊಟಕ್ಕೆ ಹೋಟೆಲ್ ತೋರಿಸುವ ನೆವದಲ್ಲಿ ಈ ಆರೋಪಿಗಳು ಅವರನ್ನು ಪರಿಚಯಿಸಿಕೊಂಡು, ಬಳಿಕ ಚಾಕು ತೋರಿಸಿ 20 ಗ್ರಾಂ ತೂಕದ ಚಿನ್ನದ ಸರ ಹಾಗೂ ಕಾರು ಕೀ, ₹ 7 ಸಾವಿರವನ್ನು ದರೋಡೆ ಮಾಡಿದ್ದರು.

ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಹುಣಸೂರು ಉಪವಿಭಾಗದ ಡಿವೈಎಸ್‌ಪಿ ಸುಂದರ್‌ರಾಜ್ ನೇತೃತ್ವದ ತಂಡವು ಚೆಕ್‌ಪೋಸ್ಟ್‌ಗಳನ್ನು ರಚಿಸಿತು. ಈ ವೇಳೆ ಕಲ್ಕುಣಿಕೆ ವೃತ್ತದ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ ಬೆಳಿಗ್ಗೆ 11ರ ಸಮಯದಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

ADVERTISEMENT

ಹುಣಸೂರು ಇನ್‌ಸ್ಪೆಕ್ಟರ್ ಕೆ.ಸಿ.ಪೂವಯ್ಯ, ಗ್ರಾಮಾಂತರ ಠಾಣೆಯ ಪಿಎಸ್‌ಐ ಎಸ್.ಶಿವಪ್ರಕಾಶ್ ಸಿಬ್ಬಂದಿಯಾದ ಮೆಹರಾಜ್ ಪಾಷಾ, ಮಂಜುನಾಥ್, ರಾಜೇಗೌಡ, ನಾಗೇಶ, ಮನೋಹರ, ದಿನೇಶ್, ಅಲಿಂಪಾಷಾ, ಎಸ್.ಮಂಜುನಾಥ ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.