ADVERTISEMENT

ಸಂಚಾರ ಪೊಲೀಸರ ಜೊತೆ ಜಗಳ: ದೂರು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 4:30 IST
Last Updated 22 ಫೆಬ್ರುವರಿ 2021, 4:30 IST

ಮೈಸೂರು: ಸಂಚಾರ ಪೊಲೀಸ್ ಸಿಬ್ಬಂದಿ ಜೊತೆಗೆ ಜಗಳ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ದ್ವಿಚಕ್ರ ವಾಹನ ಸವಾರನ ಮೇಲೆ, ಪೊಲೀಸ್‌ ಸಿಬ್ಬಂದಿ ನಗರದ ದೇವರಾಜ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೈಕ್‌ ಸವಾರ ಪೊಲೀಸ್‌ ಸಿಬ್ಬಂದಿ ಜೊತೆ ನಡೆಸಿದ ಜಗಳದ ವಿಡಿಯೊ ತುಣುಕು ಈ ಭಾಗದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ದೇವರಾಜ ಮಾರುಕಟ್ಟೆಯ ನಿಂಬೆಹಣ್ಣು ಗಲ್ಲಿ ಬಳಿ, ದೇವರಾಜ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ವಾಹನ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿದ್ದರು.

ADVERTISEMENT

ಸಂಚಾರ ನಿಯಮ ಉಲ್ಲಂಘನೆಯಾಗಿದ್ದರಿಂದ ಸಂಚಾರ ಪೊಲೀಸರು ಬೈಕ್‌ ಸವಾರನಿಗೆ ₹ 1 ಸಾವಿರ ದಂಡ ಹಾಕಿದ್ದಾರೆ. ಇದಕ್ಕೆ ಕೋಪಗೊಂಡ ದ್ವಿಚಕ್ರ ವಾಹನದ ಸವಾರ ಸಂಚಾರ ಪೊಲೀಸರ ಜೊತೆ ತಕರಾರು ತೆಗೆದು ಜಗಳ ಮಾಡಿದ್ದ. ಈ ಜಗಳದ ದೃಶ್ಯಾವಳಿ ವ್ಯಕ್ತಿಯೊಬ್ಬರ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣಗೊಂಡಿತ್ತು. ಇದೀಗ ವೈರಲ್‌ ಆಗಿದೆ.

ನಿಯಮ ಉಲ್ಲಂಘಿಸುವ ಜೊತೆಗೆ, ಕರ್ತವ್ಯಕ್ಕೆ ಬೈಕ್‌ ಸವಾರ ಅಡ್ಡಿಪಡಿಸಿದ್ದಾನೆ ಎಂದು ದೇವರಾಜ ಪೊಲೀಸ್ ಠಾಣೆಗೆ ಸಂಚಾರ ಪೊಲೀಸ್‌ ಸಿಬ್ಬಂದಿ ದೂರು ನೀಡಿದೆ ಎಂಬುದು ಗೊತ್ತಾಗಿದೆ.

ಮೇಕೆ ಕೊಂದ ಚಿರತೆ

ಮೈಸೂರು ತಾಲ್ಲೂಕಿನ ವರುಣ ಹೋಬಳಿಯ ತುಕ್ಕಡಿಮಾದಯ್ಯನ ಹುಂಡಿಯಲ್ಲಿ ಶನಿವಾರ ರಾತ್ರಿ ಮೇಕೆ ಮರಿಯನ್ನು ಕೊಂದ ಚಿರತೆ, ನಾಯಿಯನ್ನು ಹೊತ್ತೊಯ್ದಿದೆ.

ತುಕ್ಕಡಿಮಾದಯ್ಯನ ಹುಂಡಿಯ ಕೃಪ್ಣಪ್ಪ ಮನೆಯ ಕಾಂಪೌಂಡ್‌ ಒಳಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಅಲ್ಲದೇ, ಮೇಕೆ ಮರಿಯನ್ನು ಕೊಂದಿದ್ದು, ಎಳೆದೊಯ್ಯಲು ಯತ್ನಿಸಿದೆ. ಪ್ರಯತ್ನ ಫಲಕಾರಿಯಾಗದಿದ್ದಾಗ ಸ್ಥಳದಲ್ಲೇ ಬಿಟ್ಟು ಹೋಗಿದೆ.

ಚಿರತೆಯ ದಾಳಿ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣವೇ ಚಿರತೆ ಸೆರೆಗೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.