ADVERTISEMENT

ಸಿಎಂ ತವರಲ್ಲೇ ಸಿಗದ ಸೌಲಭ್ಯ: ಪೌರಕಾರ್ಮಿಕರ ಅಳಲು

ಅಹವಾಲು ಆಲಿಸಿದ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ರಘು

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 4:41 IST
Last Updated 23 ಜನವರಿ 2026, 4:41 IST
<div class="paragraphs"><p>ಮೈಸೂರಿನ ಕಲಾಮಂದಿರದಲ್ಲಿ ಗುರುವಾರ ನಡೆದ ‘ಪೌರಕಾರ್ಮಿಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ&nbsp;ಅಧ್ಯಕ್ಷ ಪಿ. ರಘು ಮಾತನಾಡಿದರು </p></div>

ಮೈಸೂರಿನ ಕಲಾಮಂದಿರದಲ್ಲಿ ಗುರುವಾರ ನಡೆದ ‘ಪೌರಕಾರ್ಮಿಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ಮಾತನಾಡಿದರು

   

ಪ್ರಜಾವಾಣಿ ಚಿತ್ರ

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸವಲತ್ತುಗಳು ಸಮರ್ಪಕವಾಗಿ ಸಿಗದಿರುವುದು ಇಲ್ಲಿ ಬಹಿರಂಗಗೊಂಡಿತು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದ ಪೌರಕಾರ್ಮಿಕರು ಅಳಲುಗಳನ್ನು ತೋಡಿಕೊಂಡರು. ತಾವು ಅನುಭವಿಸುತ್ತಿರುವ ಸಂಕಷ್ಟ ಹಾಗೂ ಎದುರಿಸುತ್ತಿರುವ ತೊಂದರೆಗಳನ್ನು ಹೇಳಿಕೊಂಡರು. ಸಂಬಂಧಿಸಿದ ಅಧಿಕಾರಿಗಳಿಂದ ಸ್ಪಂದನೆ ಸಿಗದಿರುವ ಬಗ್ಗೆ ಕಣ್ಣೀರಿಟ್ಟರು.

‘ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಮಗೆ ಕನಿಷ್ಠ ಗುಣಮಟ್ಟದ ಉಪಾಹಾರವನ್ನೂ ಕೊಡುತ್ತಿಲ್ಲ. ಕೈ–ಕಾಲು ತೊಳೆಯಲು, ಉಪಾಹಾರ ಸೇವಿಸುವುದಕ್ಕೆ, ಶೌಚಕ್ಕೆ ಸರಿಯಾದ ಜಾಗದ ವ್ಯವಸ್ಥೆ ಇಲ್ಲ. ಎರಡು ವರ್ಷಗಳಿಂದ ಸಮವಸ್ತ್ರ ಮೊದಲಾದ ಪರಿಕರಗಳನ್ನು ನೀಡಿಲ್ಲ. ಸಕಾಲಕ್ಕೆ ವೇತನ ಕೊಡುವುದಿಲ್ಲ. ಜಾತಿ ತಾರತಮ್ಯದಿಂದ ನೊಂದಿದ್ದೇವೆ’ ಎಂಬಿತ್ಯಾದಿ ಸಮಸ್ಯೆಗಳನ್ನು ಹೇಳಿಕೊಂಡರು.

ಸಂಘಟನೆಯವರ ವಿರುದ್ಧ ಅಸಮಾಧಾನ: 

‘ಸಂಘಟನೆಗಳ ಮುಖಂಡರು ಬೆಳೆಯುತ್ತಿದ್ದಾರೆಯೇ ಹೊರತು, ನಮಗೆ ಪ್ರಯೋಜನ ಆಗುತ್ತಿಲ್ಲ’ ಎಂದು ದೂರಿದರು. ‘ಸಂಘಟನೆಗಳವರು ₹ 2 ಲಕ್ಷದಿಂದ ₹3 ಲಕ್ಷ ಲಂಚ ಪಡೆಯುತ್ತಾರೆ’ ಎಂದು ಪೌರಕಾರ್ಮಿಕರೊಬ್ಬರು ದೂರಿದರು. ‘ಈ ಹಾಳಾದ ಅಂಗಿಯನ್ನೇ ಹಾಕಿಕೊಳ್ಳಬೇಕಾದ ಸ್ಥಿತಿ ಇದೆ’ ಎಂದು ಪೌರಕಾರ್ಮಿಕ ಮಹಿಳೆಯೊಬ್ಬರು ಪ್ರದರ್ಶಿಸಿದರು. ಪಾಲಿಕೆಯಿಂದ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ನಡೆಸದಿರುವುದು ಕೂಡ ಬಹಿರಂಗವಾಯಿತು.

ರದ್ದಾಗದ ಗುತ್ತಿಗೆ ಪದ್ಧತಿ: 

‘ಗುತ್ತಿಗೆ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ರೋಸ್ಟರ್ ಪದ್ಧತಿಯಲ್ಲಿ 436 ಮಂದಿ (ಇತರ ವರ್ಗದ) ಆಯ್ಕೆಯಾಗಿದ್ದಾರೆ. ಆದರೆ, ಅವರು ಕೆಲಸ ಮಾಡುತ್ತಿಲ್ಲ. ಹೀಗಾಗಿ ಆ ವ್ಯವಸ್ಥೆಯನ್ನೇ ರದ್ದುಪಡಿಸಬೇಕು.‌ ಹಿಂದಿನಿಂದಲೂ ಕೆಲಸ ಮಾಡಿದವರಿಗೆ ನ್ಯಾಯ ದೊರಕಿಸಬೇಕು’ ಎಂದು ಒತ್ತಾಯಿಸಿದರು.

‘ತಿಂಗಳ 5ನೇ ತಾರೀಖಿನೊಳಗೆ ವೇತನ ಕೊಡುತ್ತಿಲ್ಲ. ಜೇಷ್ಠತೆಯ ಪಟ್ಟಿ ಸಿದ್ಧಪಡಿಸಿಲ್ಲ’ ಎಂದು ತಿಳಿಸಿದರು.

‘ಮೈಸೂರು ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಹೊಸದಾಗಿ ಪರಿಕರಗಳನ್ನು ಕೊಟ್ಟಿಲ್ಲ. ಕಾಯಂ ಮಾಡಿಕೊಳ್ಳುತ್ತಿಲ್ಲ. 60 ವರ್ಷವಾದ ಮೇಲೆ ನಿವೃತ್ತರಾಗಿದ್ದೀರಿ ಎನ್ನುತ್ತಾರೆ. ಆಗ ಬರಿಗೈಯಲ್ಲಿ ಹೋಗಬೇಕಾದ ಸ್ಥಿತಿ ಇದೆ’ ಎಂದು ತಿಳಿಸಿದರು.

ನೇರ ಪಾವತಿಯಡಿ ಭರ್ತಿ ಮಾಡಿ: 

ಜಿಲ್ಲಾ ಸಫಾಯಿ ಕರ್ಮಚಾರಿ ಜಾಗೃತ ಸಮಿತಿ ಸದಸ್ಯ ಮಂಜುನಾಥ್, ‘ಜಿಲ್ಲೆಯಲ್ಲಿ 1,381 ಮ್ಯಾನುಯಲ್ ಸ್ಕ್ಯಾವೆಂಜರ್ ಗುರುತಿಸಲಾಗಿತ್ತು. ಆದರೆ ಐದು ವರ್ಷವಾದರೂ ಅವರಿಗೆ ವಸತಿಯಾಗಲಿ, ನಿವೇಶನವನ್ನಾಗಲಿ ಕಲ್ಪಿಸಿಲ್ಲ. ಗುರುತಿಸಿದವರನ್ನು ನಗರ ಸ್ಥಳೀಯ ಸಂಸ್ಥೆಯಲ್ಲಿ ಲೋಡರ್ಸ್, ಕ್ಲೀನರ್ಸ್ ಆಗಿ ನೇಮಕಕ್ಕೆ ಕ್ರಮ ಕೈಗೊಂಡಿಲ್ಲ. ನೇರಪಾವತಿಯಡಿ ಹುದ್ದೆ ಭರ್ತಿ ಮಾಡಬೇಕು’ ಎಂದು ಹೇಳಿದರು.

‘ಪೌರಕಾರ್ಮಿಕ ವೃತ್ತಿಯನ್ನೇ ಮಾಡದಿದ್ದರೂ ಪ್ರಭಾವ ಬಳಸಿ ಆ ಹುದ್ದೆ ಕಬಳಿಸಿರುವವರನ್ನು ಕೂಡಲೇ ವಜಾಗೊಳಿಸಬೇಕು. ಇಲ್ಲವೇ ಅವರಿಂದ ಸಫಾಯಿ ಕೆಲಸವನ್ನು ಮಾಡಿಸಬೇಕು’ ಎಂಬ ಒತ್ತಾಯ ಪೌರಕಾರ್ಮಿಕರಿಂದ ಕೇಳಿಬಂತು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರಿಯದರ್ಶಿನಿ, ಪೌರಕಾರ್ಮಿಕರ ಮುಖಂಡ ಮಾರ, ಹರೀಶ್, ಶಿವಣ್ಣ ಪಾಲ್ಗೊಂಡಿದ್ದರು.

ಪಾಲ್ಗೊಂಡಿದ್ದ ಪೌರಕಾರ್ಮಿಕರು

ಬೇಡಿಕೆಗಳೇನು?

* ಒಳಚರಂಡಿ ಸ್ವಚ್ಛಗೊಳಿಸುವವರನ್ನು ಕಾಯಂಗೊಳಿಸಬೇಕು.

* ಸ್ವಚ್ಛತಾ ವಾಹನ ಚಾಲಕರನ್ನು ನೇರ ನೇಮಕಾತಿ ಅಡಿಗೆ ಒಳಪಡಿಸಬೇಕು.

* ಎಲ್ಲ ಪೌರಕಾರ್ಮಿಕರಿಗೂ ಗುರುತಿನ ಚೀಟಿ ನೀಡಬೇಕು.

* ತುಂಡು ಗುತ್ತಿಗೆ ನೀಡುತ್ತಿದ್ದು ಅದನ್ನು ತಡೆಯಬೇಕು. 

* ವೃಂದ ಮತ್ತು ನೇಮಕಾತಿ ನಿಮಯಾವಳಿ ಬದಲಾವಣೆ ಮಾಡಬೇಕು. 

* ಪ್ರತಿ ವಾರ್ಡ್‌ಗೆ 50 ಮಂದಿ ಪೌರಕಾರ್ಮಿಕರನ್ನು ನೇಮಿಸಬೇಕು. 

* ಕಾಯಂ ಪೌರಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ವಿತರಿಸಬೇಕು.

* ಎಪಿಎಂಸಿ ಸ್ವಚ್ಛತಾ ಸಿಬ್ಬಂದಿಗೂ ಪೌರಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಬೇಕು.

* ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವವರನ್ನು ಸ್ವಚ್ಛತಾಗಾರರು ಎಂದು ಕರೆಯಲಾಗುತ್ತಿದೆ. ಅವರನ್ನೂ ಪೌರಕಾರ್ಮಿಕರೆಂದು ಕರೆದು ಸಮಾನ ಕೆಲಸಕ್ಕೆ ಸಮಾನ ವೇತನ ಒದಗಿಸಬೇಕು. ಕಾಯಂ ಮಾಡಬೇಕು.

* ಸ್ವಂತ ನಿವೇಶನ ಕೊಟ್ಟು ಮನೆ ಕಟ್ಟಿಸಿಕೊಡಬೇಕು. 

ನೋಟಿಸ್ ಕೊಡಿ..

ಕಾರ್ಯಕ್ರಮಕ್ಕೆ ಪಾಲಿಕೆಯ ಅಧಿಕಾರಿ ಬಾರದಿದ್ದರಿಂದ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಅಧ್ಯಕ್ಷ ರಘು ಸೂಚಿಸಿದರು. ‘ಪೌರಕಾರ್ಮಿಕರ ಎಲ್ಲ ಸಂಕಷ್ಟಗಳನ್ನೂ ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆ’ ಎಂದು ತಿಳಿಸಿದರು. ರಂಗಸ್ವಾಮಿ ಎನ್ನುವವರು ‘ನಗರದ ಎಲ್ಲ ಆಸ್ಪತ್ರೆಗಳಲ್ಲೂ ನಮಗೆ ವೈದ್ಯಕೀಯ ಸೇವೆ ದೊರೆಯುವಂತೆ ಮಾಡಿಕೊಡಬೇಕು. ದಸರಾ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ವಿಶೇಷ ಯೋಜನೆ ಘೋಷಿಸಬೇಕು’ ಎಂದು ಒತ್ತಾಯಿಸಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದಲ್ಲಿಯೇ ಮನೆ ಇಲ್ಲದ ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿನ ಜನರು ಜಾತಿ ತಾರತಮ್ಯ ಮಾಡುತ್ತಾರೆ. ಬಾಡಿಗೆಗೆ ಮನೆ ಕೊಡುವುದಿಲ್ಲ’ ಎಂದು ಅಲ್ಲಿನ ಪೌರಕಾರ್ಮಿಕರು ತಿಳಿಸಿದರು.

ಕಣ್ಣೀರಿಟ್ಟ ಮಹಿಳೆ..

ವಸಂತ ರಾಮಯ್ಯ ಮಾತನಾಡಿ ‘ಅನುಕಂಪದ ಆಧಾರದ ಮೇಲೆ ಕೆಲಸ ಕೊಡಬೇಕು. ಕೊಡದಿದ್ದರಿಂದ ಅವರ ಮಕ್ಕಳು ಚಿಂದಿ ಆಯುವ ಸ್ಥಿತಿ ಬಂದಿದೆ. ಅತಂತ್ರವಾಗಿರುವ ಅವರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ನಮಗೆ ಬೋನಸ್ ದಸರಾ ವೇಳೆ ಅಡ್ವಾನ್ಸ್ ಕೊಡಲಿಲ್ಲ. ದಸರೆಯಲ್ಲೂ ಸಮವಸ್ತ್ರ ಕೊಡಲಿಲ್ಲ’ ಎಂದು ತಿಳಿಸಿದರು. ‘ನಿವೃತ್ತರಾದವರಿಗೆ ಯಾವ ಸೌಲಭ್ಯಗಳನ್ನೂ ಕೊಡುತ್ತಿಲ್ಲ. ಬರಿಗೈಯಲ್ಲಿ ಕಳುಹಿಸುತ್ತಾರೆ. ಅಂಥವರ ಸ್ಥಿತಿ ನೋಡಿದರೆ ನೋವಾಗುತ್ತದೆ’ ಎಂದು ಕಣ್ಣೀರಿಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.