ಪ್ರಜಾವಾಣಿ ರಸಪ್ರಶ್ನೆ
ಮೈಸೂರು: ಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಕಾತರದಿಂದ ಕಾಯುತ್ತಿರುವ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್’ ಡಿ.12ರಂದು ಬೆಳಿಗ್ಗೆ 9ಕ್ಕೆ ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ವಿಜ್ಞಾನ ಭವನದಲ್ಲಿ ನಡೆಯಲಿದೆ.
ವಲಯಮಟ್ಟದ ಸ್ಪರ್ಧೆ ಇದಾಗಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳ ಶಾಲಾ ಮಕ್ಕಳು ಪಾಲ್ಗೊಳ್ಳಬಹುದಾಗಿದೆ. ಇದಕ್ಕಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದೆ. ಪ್ರವೇಶ ಉಚಿತ.
ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಹೊಸ ವಿಚಾರಗಳ ಕಲಿಕೆಯ, ಅದರಲ್ಲೂ ಸಾಮಾನ್ಯ ಜ್ಞಾನದ ಅಗತ್ಯ ಬಹಳಷ್ಟಿದೆ. ಇದನ್ನು ರೂಢಿಸಿಕೊಳ್ಳುವಂತೆ ಶಾಲಾ ಮಕ್ಕಳನ್ನು ಪ್ರೇರೇಪಿಸುವ ಆಶಯದಲ್ಲಿ ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ. ಯುವ ಪ್ರತಿಭೆಗಳ ಜ್ಞಾನಭಂಡಾರವನ್ನು ಮತ್ತಷ್ಟು ಹೆಚ್ಚಿಸುವ ಸದುದ್ದೇಶದ ಆರೋಗ್ಯಕರ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸುವ ಹಾಗೂ ಸ್ಪರ್ಧಾ ಮನೋಭಾವ ಬೆಳೆಸುವ ಕೆಲಸವನ್ನು ಪತ್ರಿಕೆ ಮಾಡುತ್ತಿದೆ. ಇದರ ಭಾಗವಾಗಿ ಕ್ವಿಜ್ ಆಯೋಜಿಸಲಾಗಿದೆ.
7ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಸ್ಪರ್ಧೆಯ ದಿನದಂದು ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳುವುದಕ್ಕೂ ಅವಕಾಶವಿದೆ. ಒಂದು ಶಾಲೆಯಿಂದ ಎಷ್ಟು ತಂಡಗಳು ಬೇಕಾದರೂ ಪಾಲ್ಗೊಳ್ಳಬಹುದು. ಒಂದು ತಂಡದಲ್ಲಿ ಇಬ್ಬರು ಇರಬೇಕು.
ಕಲಬುರಗಿ, ಮೈಸೂರು, ಧಾರವಾಡ, ಬಾಗಲಕೋಟೆ, ದಾವಣಗೆರೆ ಹಾಗೂ ಬೆಂಗಳೂರು ವಲಯಗಳಲ್ಲಿ ಮೊದಲ ಹಂತದ ಸ್ಪರ್ಧೆ ನಡೆಯಲಿದೆ. ವಲಯ ಮಟ್ಟದಲ್ಲಿ ಗೆಲುವು ಸಾಧಿಸಿದವರು ಬೆಂಗಳೂರಿನಲ್ಲಿ ನಡೆಯುವ ಫಿನಾಲೆಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ. ವಲಯಮಟ್ಟದ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ತಂಡಕ್ಕೆ ನಗದು ಬಹುಮಾನ ನೀಡಲಾಗುತ್ತದೆ.
ಪ್ರಕ್ರಿಯೆ ಹೇಗಿರಲಿದೆ?
ವಿದ್ಯಾರ್ಥಿಗಳು ಶಾಲೆಗಳ ಮೂಲಕ ತಂಡವಾಗಿ ನೋಂದಾಯಿಸಿಕೊಳ್ಳಬೇಕು. ತಂಡಗಳಿಗೆ ಪ್ರಾಥಮಿಕ ಹಂತದ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ವಲಯದಲ್ಲಿ 6 ಅಗ್ರ ತಂಡಗಳು ವಲಯ ಮಟ್ಟದ ಅಂತಿಮ ಹಂತಕ್ಕೆ ತಲುಪುತ್ತವೆ. ಆರು ವಲಯಗಳ ವಿಜೇತರು ರಾಜ್ಯಮಟ್ಟದ ಫಿನಾಲೆಗೆ ಅರ್ಹತೆ ಪಡೆಯುತ್ತಾರೆ.
ಅಂತಿಮ ಹಂತದ ಎಲ್ಲ ಸ್ಪರ್ಧಿಗಳಿಗಾಗಿ ‘ಅನ್ವೇಷಣಾ ಕಾರ್ಯಾಗಾರ’ ನಡೆಸಲಾಗುವುದು. ಈ ಕಾರ್ಯಾಗಾರದಲ್ಲಿ ಸಮೃದ್ಧ ಕಲಿಕೆಯ ಅನುಭವವನ್ನು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಹೊರಹೊಮ್ಮಲು ಈ ಕಾರ್ಯಾಗಾರವು ಹೊಸ ವೇದಿಕೆಯನ್ನು ಕಲ್ಪಿಸಲಿದೆ.
ಹೆಸರು ನೋಂದಾಯಿಸಿಕೊಳ್ಳಲು ಇಲ್ಲಿ ನೀಡಲಾಗಿರುವ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿ.
ಹೆಚ್ಚಿನ ಮಾಹಿತಿಗೆ www.prajavani.net ವೆಬ್‌ಸೈಟ್‌ಗೆ ಭೇಟಿ ನೀಡಿ. ಮೊ.ಸಂ.73380 18541 (ಸೋಮವಾರದಿಂದ ಶುಕ್ರವಾರ–ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ) ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.