ADVERTISEMENT

ಮೈಸೂರು | ಬಾಲಕಿ ಕೊಲೆ: ಸರ್ಕಾರದ ಯಾರೊಬ್ಬರೂ ಮಾತನಾಡುತ್ತಿಲ್ಲವೇಕೆ? ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 7:53 IST
Last Updated 10 ಅಕ್ಟೋಬರ್ 2025, 7:53 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ನಗರದಲ್ಲಿ ಕೆಲವೇ ದಿನಗಳ ಅಂತರದಲ್ಲಿ ಎರಡು ಕೊಲೆ ನಡೆದಿವೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಂದ ಪ್ರಕರಣದ ಬಗ್ಗೆ ಸರ್ಕಾರದ ಯಾರೊಬ್ಬರೂ ಧ್ವನಿ ಎತ್ತಿಲ್ಲವೇಕೆ?’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಕೇಳಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರದಲ್ಲಿ ಕೂಗುಮಾರಿಗಳಿದ್ದಾರೆ. ಉಕ್ರೇನ್, ರಷ್ಯಾದ ಬಗ್ಗೆ ಪ್ರತಿಕ್ರಿಯೆ ಕೊಡುತ್ತಾರೆ. ಅಮೆರಿಕ ಅಧ್ಯಕ್ಷರ ಕುರಿತೂ ಮಾತನಾಡುತ್ತಾರೆ. ಆದರೆ, ಬಾಲಕಿ ಕೊಲೆ ಪ್ರಕರಣದ ಬಗ್ಗೆ ಏಕೆ ಮಾತನಾಡಿಲ್ಲ, ಸಿಎಂ ಹಾಗೂ ಡಿಸಿಎಂ ಸುಮ್ಮನಿದ್ದಾರೇಕೆ’ ಎಂದು ಪ್ರಶ್ನಿಸಿದರು.

‘ರಾಜ್ಯದ ಪೊಲೀಸರಿಗೆ ದಕ್ಷತೆ ಇದೆ. ಅದರೆ, ಕೆಲಸ ಮಾಡಲು ಮುಕ್ತ ವಾತಾವರಣವಿಲ್ಲ. ಮುಖ್ಯಮಂತ್ರಿಯು ಹೋಟೆಲ್‌ನಲ್ಲಿ ಕಾಫಿ ಕುಡಿಯುವಾಗ, ದೋಸೆ ತಿನ್ನುವಾಗ ಭದ್ರತೆಗೆ ಮಾತ್ರವೇ ಪೊಲೀಸರನ್ನು ಬಳಸಿಕೊಳ್ಳುತ್ತಿದ್ದಾರೆ. ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಅವರು ಸಂವಿಧಾನ ಪೀಠಿಕೆ ಓದಿಸುವುದು ಬಿಟ್ಟರೆ ಬೇರೇನು ಮಾಡುತ್ತಿದ್ದಾರೆ? ಸಿಎಂಗೆ ಅಂತಃಕರಣವಿಲ್ಲ; ಅವರ ಹೃದಯ ಕಲ್ಲಾಗಿದೆ’ ಎಂದು ದೂರಿದರು.

ADVERTISEMENT

‘ಆರೋಪಿ ಬಂಧನಕ್ಕೆ ಮುನ್ನ ಆತ ಯಾವ ಜಾತಿಯವನು ಎಂದು ನೋಡಬೇಕಾದ ಸ್ಥಿತಿ ಮೈಸೂರು ಪೊಲೀಸರಿಗೆ ಬಂದಿದೆ’ ಎಂದು ದೂರಿದರು.

‘ಮೈಸೂರು ಪೊಲೀಸರಿಗೆ ಮುಖ್ಯಮಂತ್ರಿ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಕಾಟ ಜಾಸ್ತಿಯಾಗಿದೆ. ಅವರು ವರ್ಗಾವಣೆ ಸಚಿವರಾಗಿದ್ದಾರೆ. ಯಾರದ್ದೇ ವರ್ಗಾವಣೆ ಆಗಬೇಕಾದರೂ ಅವರಿಗೆ ತೆರಿಗೆ ಕಟ್ಟಬೇಕು. ಕಲೆಕ್ಷನ್ ವಿಚಾರದಲ್ಲಿ ಸಿದ್ದರಾಮಯ್ಯ–ಡಿಕೆಶಿ ಪೈಪೋಟಿಗೆ ಬಿದ್ದಿದ್ದಾರೆ. ರಾಹುಲ್ ಗಾಂಧಿಗೆ ಯಾರು ಹೆಚ್ಚು ಕೊಡುತ್ತೇವೋ ಎಂಬ ಪೈಪೋಟಿ ಅವರಲ್ಲಿದೆ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿಗಳೇ ನಿಮಗೆ ಹೆಣ್ಣು ಮಕ್ಕಳು ಇಲ್ಲದಿರಬಹುದು. ನಿಮ್ಮ ಮನೆಯಲ್ಲಿ ಹೆಣ್ಮಕ್ಕಳಿಲ್ಲವೇ? ಆ ಬಾಲಕಿ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.