ADVERTISEMENT

ಸುಮಲತಾ ಅವರಿಗೆ ‘ಜಲೀಲ’ ನೆನಪಾಗಿರಬೇಕು– ಪ್ರತಾಪಸಿಂಹ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 12:22 IST
Last Updated 17 ನವೆಂಬರ್ 2020, 12:22 IST
ಪ‍್ರತಾಪಸಿಂಹ
ಪ‍್ರತಾಪಸಿಂಹ   

ಮೈಸೂರು: ‘ಸಂಸದರಾದ ಸುಮಲತಾ ನನ್ನನ್ನು ಪೇಟೆರೌಡಿ ಎಂದು ಕರೆದಿರುವ ಕುರಿತು ನಂಬಿಕೆ ಬರುತ್ತಿಲ್ಲ. ಅವರಿಗೆ ನಾಗರಹಾವು ಸಿನಿಮಾದ ‘ಜಲೀಲ’ ನೆನಪಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಒಂದು ‘ಡೈಲಾಗ್‌’ ಹೊಡೆದಿರಬೇಕು’ ಎಂದು ಸಂಸದ ಪ್ರತಾಪಸಿಂಹ ಇಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಆಗಬಹುದು. ನಮ್ಮ ಕುಟುಂಬವಷ್ಟೇ ಅಧಿಕಾರಕ್ಕೆ ಬರಬೇಕು ಎನ್ನುವುದು ಪಾಳೇಗಾರಿಕೆ ಸಂಸ್ಕೃತಿ. ಇಂತಹ ಸಂಸ್ಕೃತಿಗೆ ಜನತಂತ್ರದಲ್ಲಿ ಜಾಗ ಇಲ್ಲ’ ಎಂದು ತಿರುಗೇಟು ನೀಡಿದರು.

ಮೈಸೂರು– ಬೆಂಗಳೂರು 10 ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಮಂಡ್ಯ ಕ್ಷೇತ್ರದ ಯಲಿಯೂರಿನ ಜನರು ತಮಗೆ ಒಂದು ಅಂಡರ್‌ಪಾಸ್ ಬೇಕು ಎಂದು ಕೇಳಿದರು. ಹೀಗಾಗಿ, ಮಂಡ್ಯ ಕ್ಷೇತ್ರದಲ್ಲಿ ಎಲ್ಲೆಲ್ಲಿ ಅಂಡರ್‌ಪಾಸ್, ಮೇಲ್ಸೇತುವೆ ಬೇಕು ಎಂಬ ಪ್ರಸ್ತಾವ ಕೊಡಿ ಎಂದು ಸುಮಲತಾ ಅವರನ್ನು ಕೇಳಿದ್ದೇನೆ. ಇದು ತಪ್ಪೇ ಎಂದು ಪ್ರಶ್ನಿಸಿದರು.

ADVERTISEMENT

‘ನಾನು ಯಾವ ಸ್ಟಾರೂ ಅಲ್ಲ. ನನಗೆ ಬಂದು ಮತ ಹಾಕಲು ಯಾವ ಅಭಿಮಾನಿಗಳೂ ಇಲ್ಲ. ನನಗೆ ನನ್ನ ಕೆಲಸವೇ ಶ್ರೀರಕ್ಷೆ’ ಎಂದರು.

ಯಾವವ ರಸ್ತೆಗಳು ಯಾರರ ವ್ಯಾಪ್ತಿಗೆ ಬರುತ್ತದೆ ಎಂಬ ಕನಿಷ್ಠ ಜ್ಞಾನ ಇಲ್ಲದೇ ಮಾತನಾಡಿದರೆ ಕೇವಲ ಅಪದ್ಧ ಮಾತುಗಳಷ್ಟೇ ಹೊರಬರುತ್ತವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.