ಮೈಸೂರು: ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ಪ್ರೀಮಿಯರ್ ಸ್ಟುಡಿಯೋ ಇತಿಹಾಸದ ಪುಟಗಳನ್ನು ಸೇರಿದೆ. ಶುಕ್ರವಾರ ಕಟ್ಟಡ ನೆಲಸಮ ಕಾರ್ಯ ಆರಂಭವಾಗಿದ್ದು, ಇಲ್ಲೊಂದು ಅಪಾರ್ಟ್‌ಮೆಂಟ್ ತಲೆ ಎತ್ತಲಿದೆ.
ಒಂದು ಕಾಲಕ್ಕೆ ಏಷ್ಯಾದಲ್ಲೇ ಅತಿದೊಡ್ಡ 2ನೇ ಸ್ಟುಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಲ್ಲಿ 750ಕ್ಕೂ ಹೆಚ್ಚು ಚಿತ್ರಗಳು ಚಿತ್ರೀಕರಣಗೊಂಡಿವೆ. ಭಾರತೀಯ ಭಾಷೆಗಳಷ್ಟೇ ಅಲ್ಲದೇ, ಹಲವು ವಿದೇಶಿ ಚಿತ್ರಗಳೂ ಇಲ್ಲಿ ಚಿತ್ರೀಕರಣಗೊಂಡಿವೆ.
ದಕ್ಷಿಣ ಭಾರತದ ಅತಿ ಸುಸಜ್ಜಿತ ಸ್ಟುಡಿಯೋ ಎಂದು ಪ್ರಸಿದ್ಧಿಯಾಗಿದ್ದ ನಗರದ ಸರಸ್ವತಿಪುರಂನಲ್ಲಿ ಇದ್ದ ನವಜ್ಯೋತಿ ಸ್ಟುಡಿಯೋ ಮುಚ್ಚಿದ ಬಳಿಕ ಎಂ.ಎನ್.ಬಸವರಾಜಯ್ಯ ಅವರು ಅರಮನೆಗೆ ಸೇರಿದ ಚಿತ್ತರಂಜನ್ ಮಹಲಿನಲ್ಲಿ ಮೊದಲಿಗೆ ಪ್ರೀಮಿಯರ್ ಸ್ಟುಡಿಯೋ ಆರಂಭಿಸಿದರು.ನಂತರ, 1954ರ ಹೊತ್ತಿಗೆ ಜಯಲಕ್ಷ್ಮಿಪುರಂನ ಸುಮಾರು 10 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ 7 ಅಂತಸ್ತುಗಳುಳ್ಳ ಬೃಹತ್ ಸ್ಟುಡಿಯೋ ನಿರ್ಮಾಣಗೊಂಡಿತು. ಒಂದೇ ಬಾರಿಗೆ 7 ಚಿತ್ರಗಳನ್ನು ಚಿತ್ರೀಕರಿಸುವಷ್ಟು ಸೌಲಭ್ಯಗಳಿದ್ದವು. ಡೆವಲಪಿಂಗ್, ಪ್ರಿಂಟಿಂಗ್, ಸಂಕಲನ, ಪ್ರದರ್ಶನಮಂದಿರ, 3 ಮಿಚೆಲ್ ಹಾಗೂ ಏರಿಫ್ಲೆಕ್ಸ್ ಕ್ಯಾಮೆರಾ ಹೀಗೆ ಸಕಲ ಸೌಲಭ್ಯಗಳನ್ನು ಈ ಸ್ಟುಡಿಯೋ ಹೊಂದಿತ್ತು.
ಬೆಂಗಳೂರಿನಲ್ಲಿ ಓಂಕಾರ್ (ಕರ್ನಾಟಕ) ಸ್ಟುಡಿಯೋ, ಚಾಮುಂಡೇಶ್ವರಿ ಸ್ಟುಡಿಯೋ, ಬಾಲಕೃಷ್ಣ ಅವರ ಅಭಿಮಾನ್ ಸ್ಟುಡಿಯೋ, ಅಬ್ಬಾಯಿನಾಯ್ಡು ಅವರ ಮಧು ಸ್ಟುಡಿಯೋ, ಕಂಠೀರವ ಸ್ಟುಡಿಯೋ, ಸ್ಟುಡಿಯೋ ಸಾಗರ್– ಸುಜಾತ ಸ್ಥಾಪನೆ
ಗೊಂಡ ಬಳಿಕವೂ ಈ ಸ್ಟುಡಿಯೋ ಕಳೆಗುಂದಿರಲಿಲ್ಲ ಎಂಬುದು ವಿಶೇಷ.
ಮರೆಯಲಾರದ ದುರಂತ: ಭವ್ಯತೆಯನ್ನೇ ಮೈಗೂಡಿಸಿಕೊಂಡಿದ್ದ ಪ್ರೀಮಿಯರ್ ಸ್ಟುಡಿಯೋದಲ್ಲಿ 1989ರಲ್ಲಿ ಸಂಜಯ್ ಖಾನ್ ಅವರ ‘ದಿ ಸೋರ್ಡ್ ಆಫ್ ಟಿಪ್ಪು ಸುಲ್ತಾನ್’ ಧಾರಾವಾಹಿ ಚಿತ್ರೀಕರಣಗೊಳ್ಳುತ್ತಿದ್ದ ವೇಳೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 42ಕ್ಕೂ ಅಧಿಕ ಮಂದಿ ಮೃತಪಟ್ಟರು. ಬಳಿಕ ಅವನತಿಯ ದಾರಿ ಹಿಡಿಯಿತು.
ದರ್ಶನ್ ಅಭಿನಯದ ಐರಾವತ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಅಭಿನಯದ ಜಾಗ್ವಾರ್ ಸಿನಿಮಾಗಳು ಚಿತ್ರೀಕರಣಗೊಂಡಿದ್ದೇ ಕೊನೆಯ ಸಿನಿಮಾ.ಇತ್ತೀಚಿನ ದಿನಗಳಲ್ಲಿ ಚಿತ್ರೀಕರಣದಲ್ಲಿ ಬಂದ ಅನೇಕ ತಾಂತ್ರಿಕ ಮಜಲುಗಳು ಸ್ಟುಡಿಯೋವನ್ನು ಮೂಲೆಗುಂಪು ಮಾಡಿದವು. ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಿತ್ರ ನಿರ್ಮಾಪಕರು ನೈಜ ಪರಿಸರದಲ್ಲಿ ಚಿತ್ರೀಕರಿಸುವ ಪರಿಪಾಠ ಬೆಳೆಸಿಕೊಂಡರು. ಇದೆಲ್ಲದರಿಂದ ಚಿತ್ರೀಕರಣ ಇಲ್ಲದೇ ಸ್ಟುಡಿಯೋ ಹಾಳು ಸುರಿಯಲಾರಂಭಿಸಿತು.
‘ಸ್ಟುಡಿಯೋ ಮುಚ್ಚಲು ಮನಸ್ಸಿಲ್ಲ. ದಿನದಿಂದ ದಿನಕ್ಕೆ ನಿರ್ವಹಣಾ ವೆಚ್ಚ ಏರಿಕೆಯಾಗುತ್ತಿದೆ. ಸಿಸಿಮಾ ಚಿತ್ರೀಕರಣಗಳೂ ಕಡಿಮೆಯಾಗಿವೆ. ಚಿತ್ರ ನಿರ್ಮಾಣದ ‘ಟ್ರೆಂಡ್’ಗಳು ಈಗ ಬದಲಾಗಿವೆ. ಹಾಗಾಗಿ, ನೆಲಸಮ ಕಾರ್ಯ ಅನಿವಾರ್ಯ’ ಎಂದು ಸ್ಟುಡಿಯೋ ಮಾಲೀಕ ಬಸವರಾಜಯ್ಯ ಪುತ್ರ ನಾಗಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.