ADVERTISEMENT

ರಾಜ್ಯ ಮುಕ್ತ ವಿಶ್ವವಿದ್ಯಾಲಯ: ಬೋಧಕ ಹುದ್ದೆ ಭರ್ತಿಗೆ ತರಾತುರಿ

ಸ್ಥಳೀಯವಾಗಿ ಪ್ರಕಟಣೆ ನೀಡಿದ ಮುಕ್ತ ವಿ.ವಿ: ಆಕಾಂಕ್ಷಿಗಳ ಅನುಮಾನ

ಕೆ.ಓಂಕಾರ ಮೂರ್ತಿ
Published 4 ಆಗಸ್ಟ್ 2021, 20:41 IST
Last Updated 4 ಆಗಸ್ಟ್ 2021, 20:41 IST
ಪ್ರೊ.ಎಸ್‌.ವಿದ್ಯಾಶಂಕರ್‌
ಪ್ರೊ.ಎಸ್‌.ವಿದ್ಯಾಶಂಕರ್‌   

ಮೈಸೂರು: ರಾಜ್ಯ ಮುಕ್ತ ವಿಶ್ವವಿದ್ಯಾಲಯವು ತರಾತುರಿಯಲ್ಲಿ ತಾತ್ಕಾಲಿಕ ಬೋಧಕರ ಹುದ್ದೆ ಭರ್ತಿ ಮಾಡಲು ಮುಂದಾಗಿರುವುದು ಅನುಮಾನಗಳಿಗೆ ದಾರಿ ಮಾಡಿದೆ.

24 ವಿಭಾಗಗಳಿಗೆ ಗುತ್ತಿಗೆ ಆಧಾರದಲ್ಲಿ ಸಹಾಯಕ ಪ್ರಾಧ್ಯಾಪಕರನ್ನು ನೇರ ಸಂದರ್ಶನದ ಮೂಲಕ ನೇಮಿಸಲು ಜುಲೈ 28ರಂದು ನೇಮಕಾತಿ ಅಧಿಸೂಚನೆ ಹೊರಡಿಸಿದ್ದ ವಿಶ್ವವಿದ್ಯಾಲಯವು ಐದು ದಿನ ತಡವಾಗಿ, ಆ.2ರಂದು ಸ್ಥಳೀಯವಾಗಿ ಜಾಹೀರಾತು ನೀಡಿತ್ತು. ಇದೇ 10ರಿಂದ ಸಂದರ್ಶನ ನಿಗದಿಯಾಗಿದ್ದು, ಸ್ಥಳವನ್ನು ವೆಬ್‌ಸೈಟ್‌ನಲ್ಲಿ 9ರಂದು ಪ್ರಕಟಿಸುವುದಾಗಿ ಹೇಳಿದೆ. ತರಾತುರಿಯ ಈ ಪ್ರಕ್ರಿಯೆಗೆ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

‘ರಾಜ್ಯವ್ಯಾಪಿ ಕಾರ್ಯನಿರ್ವಹಿಸುವ ವಿಶ್ವವಿದ್ಯಾಲಯವು ಮೈಸೂರಿನ ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ಮಾತ್ರ ಜಾಹೀರಾತು ನೀಡಿ ನೇಮಕಾತಿ ವಿಚಾರ
ವನ್ನು ಮರೆಮಾಚಲು ಯತ್ನಿಸಿದೆ. ಹಣ ಪಡೆದು ನೇಮಕ ಮಾಡಲು ಮುಂದಾಗಿದೆ’‌ ಎಂದು ಹೆಸರು ಬಹಿರಂಗಪಡಿಸಲು ಬಯಸದ ಆಕಾಂಕ್ಷಿಗಳು ಬಳಿ ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಸಿಬ್ಬಂದಿ ಕೊರತೆ: ‘11 ಹೊಸ ಕೋರ್ಸ್‌ ಆರಂಭಿಸಿದ್ದು,ಬೋಧಕ ಸಿಬ್ಬಂದಿ ಕೊರತೆಯಿದೆ. ತಿಂಗಳೊಳಗೆ ಹುದ್ದೆ ಭರ್ತಿ ಮಾಡುವುದಾಗಿ ಯುಜಿಸಿಗೆ ಪತ್ರ ಬರೆದಿದ್ದು, ಈಗಾಗಲೇ ವಿಳಂಬವಾಗಿದೆ. ಹುದ್ದೆಗೆ ಪರಿಗಣಿಸುವಂತೆ ಅಭ್ಯರ್ಥಿಗಳು ಒತ್ತಡ ತರುತ್ತಿದ್ದಾರೆ. ಜಾಹೀರಾತು ನೀಡುವ ಮುನ್ನವೇ ಹಲವರಿಗೆ ಗೊತ್ತಾಗಿದೆ’ ಎಂದು ಪ್ರೊ.ಎಸ್‌.ವಿದ್ಯಾಶಂಕರ್‌ ‘ಪ್ರಜಾವಾಣಿ‌’‌ಗೆ ಪ್ರತಿಕ್ರಿಯಿಸಿದರು.

‘ಮೂರು ವರ್ಷಗಳ ಅವಧಿಯ ಹುದ್ದೆಯ ಗುತ್ತಿಗೆಯನ್ನು ಪ್ರತಿ ವರ್ಷ ನವೀಕರಿಸಲಾಗುವುದು. ವೇತನವನ್ನು ನಿಗದಿಪಡಿಸಿಲ್ಲ. ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕಿದ್ದು, ಸಾಮಾನ್ಯವಾಗಿ ₹ 45 ಸಾವಿರದವರೆಗೆ ವೇತನ ನೀಡಲಾಗುತ್ತದೆ’ ಎಂದರು. ‌

ಹುದ್ದೆಗಳು ಯಾವುವು?: ಇಂಗ್ಲಿಷ್, ಹಿಂದಿ, ಸಂಸ್ಕೃತ, ತೆಲುಗು, ಉರ್ದು, ಇತಿಹಾಸ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಸಾರ್ವಜನಿಕ ಆಡಳಿತ, ಸಮಾಜ ವಿಜ್ಞಾನ ಮತ್ತು ಮಾನವ ವಿಜ್ಞಾನ, ನಿರ್ವಹಣಾಶಾಸ್ತ್ರ, ಶಿಕ್ಷಣ, ಭೌತವಿಜ್ಞಾನ, ಸೂಕ್ಷ್ಮಜೀವಾಣು ವಿಜ್ಞಾನ, ಬಯೋ ಟೆಕ್ನಾಲಜಿ ಮತ್ತು ಪ್ರಾಣಿ ವಿಜ್ಞಾನ, ರಸಾಯನ ವಿಜ್ಞಾನ, ಬಯೋ ಕೆಮಿಸ್ಟ್ರಿ, ಮನೋವಿಜ್ಞಾನ, ಪರಿಸರ ವಿಜ್ಞಾನ, ಆಹಾರ ವಿಜ್ಞಾನ, ಭೂಗೋಳ ವಿಜ್ಞಾನ, ಗಣಕಯಂತ್ರ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಗಣಿತ ಮತ್ತು ಸಸ್ಯ ವಿಜ್ಞಾನ ವಿಭಾಗಗಳಿಗೆ ಗುತ್ತಿಗೆ ಆಧಾರ ಮೇಲೆ ನೇಮಕ ಮಾಡಿಕೊಡಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.