ADVERTISEMENT

ಮಹಿಷ ದಸರಾಕ್ಕೆ ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಕಿಲ್ಲ: ಮಹೇಶ್ ಚಂದ್ರಗುರು

ಮಹಿಷ ದಸರಾ–2021 ನಾಳೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 12:24 IST
Last Updated 4 ಅಕ್ಟೋಬರ್ 2021, 12:24 IST
ಮಹೇಶ್ ಚಂದ್ರಗುರು
ಮಹೇಶ್ ಚಂದ್ರಗುರು   

ಮೈಸೂರು: ‘ನಮ್ಮ ವೋಟುಗಳು ಬೇಕು. ಆದರೆ ನಮ್ಮ ಸಂಸ್ಕೃತಿ ಬೇಡವಾ?’ ಎಂದು ಪ್ರೊ.ಮಹೇಶ್‌ ಚಂದ್ರಗುರು ಸೋಮವಾರ ಇಲ್ಲಿ ಕಿಡಿಕಾರಿದರು.

‘ನಾಡಹಬ್ಬ ದಸರಾಗೆ ನಮ್ಮ ವಿರೋಧವಿಲ್ಲ. ನಾವು ಭಾಗಿಯಾಗುತ್ತೇವೆ. ಆದರೆ, ಬಹುತ್ವದ ಪ್ರತೀಕವಾಗಿರುವ ಮಹಿಷ ದಸರಾಗೆ ಜಿಲ್ಲಾಡಳಿತ ಅನುಮತಿ ನೀಡದಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಮಹಿಷ ದಸರಾ ಆಚರಿಸಲು ಅನುಮತಿ ನೀಡದ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮರ್ಥರು. ತಮ್ಮ ಹುದ್ದೆಗಳಲ್ಲಿ ಮುಂದುವರೆಯಲು ಅನರ್ಹರು. ಅವರ ಸಂಸ್ಕೃತಿಗೆ ಅವರು ಜಿಂದಾಬಾದ್‌ ಹೇಳಿಕೊಳ್ಳಲಿ. ನಮ್ಮ ಸಂಸ್ಕೃತಿಗೆ ನಾವು ಜಿಂದಾಬಾದ್‌ ಹೇಳಿಕೊಳ್ಳುತ್ತೇವೆ’ ಎಂದರು.

ADVERTISEMENT

‘ಕಾಂಗ್ರೆಸ್‌, ಜೆಡಿಎಸ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮಹಿಷ ದಸರಾಗೆ ಯಾವುದೇ ಅಡ್ಡಿಯಿರಲಿಲ್ಲ. ಒಬ್ಬ ಸಂಸದನಿಗಾಗಿ ಬಿಜೆಪಿ ಸರ್ಕಾರ ಅಡ್ಡಿಪಡಿಸುತ್ತಿದೆ. ಸಂವಿಧಾನ ಪಾಲಿಸಬೇಕಾದ ಜಿಲ್ಲಾಧಿಕಾರಿ, ನಗರ ಪೊಲೀಸ್‌ ಆಯುಕ್ತರು ಗುಲಾಮಗಿರಿ ಮಾಡುತ್ತಿದ್ದಾರೆ. ಮಹಿಷ ದಸರಾ ಆಚರಣೆಗೆ ಅನುಮತಿ ಕೊಟ್ಟಿಲ್ಲ’ ಎಂದು ಮಾಜಿ ಮೇಯರ್‌ ಪುರುಷೋತ್ತಮ್‌ ಕಿಡಿಕಾರಿದರು.

‘ನಾವೇನು ದೇಶದ್ರೋಹದ ಕೆಲಸ ಮಾಡುತ್ತಿಲ್ಲ. ಮಹಿಷ ರಾಕ್ಷನಲ್ಲ, ರಕ್ಷಕ. ಮಹಿಷ ದಸರಾ ತಡೆಯೋ ಶಕ್ತಿ ಯಾರಿಗೂ ಇಲ್ಲ. ಆಚರಣೆಗೆ ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಕಿಲ್ಲ. ನಮ್ಮ ಆಚಾರ–ವಿಚಾರ, ಸಂಸ್ಕೃತಿಗೆ ಧಕ್ಕೆ ತರಲು ಮುಂದಾದರೆ ಹೈಕೋರ್ಟ್‌, ಸುಪ್ರೀಂಕೋರ್ಟ್‌ ಮೊರೆ ಹೋಗಬೇಕಾಗುತ್ತದೆ’ ಎಂದು ಮಾಜಿ ಮೇಯರ್‌ ಹೇಳಿದರು.

ಸೋಮಯ್ಯ ಮಲೆಯೂರು, ಸಿದ್ದಸ್ವಾಮಿ, ವಿಷ್ಣು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.