ADVERTISEMENT

ವಿಶ್ವವಿದ್ಯಾಲಯಗಳಲ್ಲಿ ಸೌಲಭ್ಯ, ಬೋಧಕರ ಸಂಖ್ಯೆ ಹೆಚ್ಚಿಸಿ: ಪ್ರೊ.ಟಿ.ಪಿ. ಸಿಂಗ್

ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರೊ.ಟಿ.ಪಿ. ಸಿಂಗ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 9:45 IST
Last Updated 18 ಜನವರಿ 2025, 9:45 IST
<div class="paragraphs"><p>ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್‌ ಹಾಲ್‌ನಲ್ಲಿ ಶನಿವಾರ ನಡೆದ 105ನೇ ಘಟಿಕೋತ್ಸವದಲ್ಲಿ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ, ಮಾಜಿ ಸಂಸದ ಎ.ಸಿ. ಷಣ್ಮುಗಂ ಹಾಗೂ ಉದ್ಯಮಿ ಶಾಹೀನ್ ಮಜೀದ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. </p></div>

ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್‌ ಹಾಲ್‌ನಲ್ಲಿ ಶನಿವಾರ ನಡೆದ 105ನೇ ಘಟಿಕೋತ್ಸವದಲ್ಲಿ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ, ಮಾಜಿ ಸಂಸದ ಎ.ಸಿ. ಷಣ್ಮುಗಂ ಹಾಗೂ ಉದ್ಯಮಿ ಶಾಹೀನ್ ಮಜೀದ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

   

ಪ್ರಜಾವಾಣಿ ಚಿತ್ರ

ಮೈಸೂರು: ‘ವಿಕಸಿತ ಭಾರತ-2047ರ ಗುರಿ ಸಾಧಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಮೂಲಸೌಲಭ್ಯಗಳ ವೃದ್ಧಿ ಹಾಗೂ ಬೋಧಕರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಂಶೋಧನಾ ಪ್ರಾಧ್ಯಾಪಕ ಪ್ರೊ.ಟಿ.ಪಿ. ಸಿಂಗ್ ಒತ್ತಾಯಿಸಿದರು.

ADVERTISEMENT

ಇಲ್ಲಿನ ಕ್ರಾಫರ್ಡ್ ಹಾಲ್‌ನಲ್ಲಿ ಶನಿವಾರ ನಡೆದ ಮೈಸೂರು ವಿಶ್ವವಿದ್ಯಾಲಯದ 105ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಾಷಣ ಮಾಡಿದ ಅವರು, ‘ಲಭ್ಯ ಮಾನವ ಸಂಪನ್ಮೂಲಕ್ಕೆ ಗುಣಮಟ್ಟದ ಹಾಗೂ ಪರಿಣಾಮಕಾರಿ ತರಬೇತಿ ನೀಡಿ ಸದ್ಬಳಕೆ ಮಾಡಿಕೊಳ್ಳಬೇಕು. ಅದರ ಲಾಭ ದೇಶದ ಪ್ರಗತಿಗೆ ಲಭ್ಯವಾಗುವಂತೆಯೂ ನೋಡಿಕೊಳ್ಳಬೇಕು’ ಎಂದರು.

‘ಅಮೆರಿಕ ಸೇರಿದಂತೆ ವಿವಿಧೆಡೆ ಹಲವು ಅತ್ಯಾಧುನಿಕ ‌ಕಂಪನಿಗಳ ನೇತೃತ್ವವನ್ನು ಭಾರತೀಯರೇ ವಹಿಸಿದ್ದಾರೆ. ಇದು ನಮ್ಮವರ ಗುಣಮಟ್ಟ ಹಾಗೂ ಸಾಮರ್ಥ್ಯವನ್ನು ತೋರಿಸುತ್ತದೆ’ ಎಂದರು.

‘ದೇಶದ ಆರ್ಥಿಕ ಬೆಳವಣಿಗೆಗೆ ವಿಶ್ವವಿದ್ಯಾಲಯಗಳ ಪಾತ್ರ ಮಹತ್ವದ್ದಾಗಿದೆ. ಈ ಕಾರಣದಿಂದ ವಿಶ್ವವಿದ್ಯಾಯಗಳ ಬಲವರ್ಧನೆ ಮಾಡಬೇಕು ಹಾಗೂ ಹೆಚ್ಚಿನ ಅನುದಾನವನ್ನು ಒದಗಿಸಬೇಕು’ ಎಂದು ಹೇಳಿದರು.

ಈಗ ‘ಪ್ರತಿಭಾ ಲಾಭ’

‘ಉತ್ತಮ ಅವಕಾಶಕ್ಕಾಗಿ ನಮ್ಮವರು ವಿದೇಶಗಳಿಗೆ ಹೋಗುತ್ತಿದ್ದ ಕಾಲವೊಂದಿತ್ತು. ಈ ಪ್ರತಿಭಾ ಫಲಾಯನವು ನಮ್ಮನ್ನು ಚಿಂತೆಗೀಡು ಮಾಡಿತ್ತು. ಈ ನಷ್ಟವನ್ನು ತಪ್ಪಿಸಲು ಪ್ರಯತ್ನಿಸಿದ್ದೂ ಉಂಟು. ಆದರೆ, ಇದು ಜಾಗತಿಕ ವಿದ್ಯಮಾನವಾದ್ದರಿಂದ ನಮ್ಮಿಂದ ತ‍ಪ್ಪಿಸಲಾಗಿರಲಿಲ್ಲ. ಈಗ ಅದು ಬದಲಾಗಿದೆ. ಅದನ್ನು ‘ಪ್ರತಿಭಾ ಲಾಭ’ ಎಂದು ಕರೆಯುತ್ತಿದ್ದೇವೆ. ಈ ಪ್ರತಿಭೆಗಳು ಜಗತ್ತಿಗಾಗಿ ಭಾರತಲ್ಲಿ ಸಿದ್ಧವಾದವು ಎಂಬಂತಾಗಿದೆ. ಭಾರತವೀಗ ಜಗತ್ತಿನ ಸಿಇಒಗಳನ್ನು ತಯಾರಿಸುವ ಕಾರ್ಖಾನೆ ಎಂದು ಹೆಸರು ಗಳಿಸಿದೆ. ಇದು ಸಂತಸದ ಬೆಳವಣಿಗೆಯಾಗಿದೆ’ ಎಂದು ಹೇಳಿದರು.

‘ಜಗತ್ತು ಇಂದು ಹಲವು ಅವಕಾಶಗಳ ಸಾಧ್ಯತೆಗಳನ್ನು ತೆರೆಯಲು ಸಿದ್ಧವಾಗಿದೆ. ಅದಕ್ಕೆ ತಕ್ಕಂತೆ ಪದವೀಧರರು ಸಜ್ಜಾಗಬೇಕು. ಈಗ, ಹಿಂದೆಂದಿಗಿಂತಲೂ ಜ್ಞಾನ ಹಾಗೂ ಕೌಶಲಕ್ಕೆ ಹೆಚ್ಚಿನ ಗೌರವ ಲಭ್ಯವಾಗುತ್ತಿದೆ. ಕೌಶಲ ಹೊಂದಿರುವವರಿಗೆ ಪುರಸ್ಕಾರ ದೊರೆಯುತ್ತಿದೆ ’ಎಂದರು.

‘ಕಳೆದ ವರ್ಷ ವಿಶ್ವದಾದ್ಯಂತ 2.77 ಲಕ್ಷ ಪಿಎಚ್‌ಡಿ ಪದವಿಗಳು ಪ್ರದಾನವಾಗಿವೆ. ಅದರಲ್ಲಿ ಅಮೆರಿಕದ ಪಾಲು 71,000, ಚೀನಾದ್ದು 56 ಸಾವಿರ, ಭಾರತ 3ನೇ ಸ್ಥಾನದಲ್ಲಿದ್ದು 29 ಸಾವಿರ ಪಿಎಚ್‌ಡಿ ಪದವಿಗಳನ್ನು ನೀಡಿದೆ. ಸಂಶೋಧನಾ ಪ್ರಕಟಣೆಯಲ್ಲೂ ಭಾರತ 3ನೇ ಸ್ಥಾನದಲ್ಲಿದ್ದು, ವರ್ಷದಲ್ಲಿ 2 ಲಕ್ಷ ಪ್ರಕಟಣೆ ಮಾಡಿದೆ. ಚೀನಾ (7 ಲಕ್ಷ) ಹಾಗೂ ಅಮೆರಿಕ (6 ಲಕ್ಷ) ಮೊದಲ ಎರಡು ಸ್ಥಾನ ಪಡೆದಿವೆ. ಇನ್ನೂ ಉತ್ತಮ ಕೆಲಸಕ್ಕಾಗಿ ನಮ್ಮ ವಿಶ್ವವಿದ್ಯಾಲಯಗಳ ಶಿಕ್ಷಣದ ಮೇಲೆ ನಾವು ಹೆಚ್ಚಿನ ಬಂಡವಾಳ ಹಾಕಬೇಕು. ವಿಶೇಷವಾಗಿ ತಾಂತ್ರಿಕ ವಲಯದಲ್ಲಿ ಬಂಡವಾಳ ತೊಡಗಿಸಬೇಕು. ಅಂತೆಯೇ ಬೋಧಕರ ಸಂಖ್ಯೆ ಹೆಚ್ಚಬೇಕು, ಮೂಲಸೌಕರ್ಯ ವೃದ್ಧಿಯಾಗಬೇಕು. ಹಳೆಯ ಮತ್ತು ಪ್ರಸಿದ್ಧಿ ಪಡೆದ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು’ ಎಂದು ಕೋರಿದರು.

ಪ್ರಾಯೋಗಿಕ ಸಂಶೋಧನೆಗೆ ಮಹತ್ವ:

‘ಎಐ (ಕೃತಕ ಬುದ್ಧಿಮತ್ತೆ) ಹಾಗೂ ಎಂಎಲ್‌ (ಮಷಿನ್‌ ಲರ್ನಿಂಗ್‌) ಯಶಸ್ಸು ಪ್ರಯೋಗಾಲಯದಲ್ಲಿ ನಾವು ಒದಗಿಸುವ ದತ್ತಾಂಶದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ, ಪ್ರಾಯೋಗಿಕ ಸಂಶೋಧನೆಗೆ ಮಹತ್ವ ಇದ್ದೇ ಇದೆ’ ಎಂದರು.

20,222 ಮಹಿಳೆಯರು ಹಾಗೂ 11,667 ಪುರುಷರು ಸೇರಿದಂತೆ ಒಟ್ಟು 31,689 ಅಭ್ಯರ್ಥಿಗಳಿಗೆ ವಿವಿಧ ಪದವಿ, 304 ಪಿಎಚ್‌.ಡಿ. ಪದವಿಗಳನ್ನು ಪ್ರದಾನ ಮಾಡಲಾಯಿತು. 216 ಅಭ್ಯರ್ಥಿಗಳು 413 ಚಿನ್ನದ ಪದಕ ಹಾಗೂ 208 ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌, ಕುಲಸಚಿವರಾದ ವಿ.ಆರ್. ಶೈಲಜಾ, ಪ್ರೊ.ಎನ್. ನಾಗರಾಜ್‌ ಪಾಲ್ಗೊಂಡಿದ್ದರು.

ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್‌ ಹಾಲ್‌ನಲ್ಲಿ ಶನಿವಾರ ನಡೆದ 105ನೇ ಘಟಿಕೋತ್ಸವದಲ್ಲಿ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ, ಮಾಜಿ ಸಂಸದ ಎ.ಸಿ. ಷಣ್ಮುಗಂ ಹಾಗೂ ಉದ್ಯಮಿ ಶಾಹೀನ್ ಮಜೀದ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಕುಲಸಚಿವೆ ಪ್ರೊ.ವಿ.ಆರ್. ಶೈಲಜಾ, ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ಪಿ. ಸಿಂಗ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹಾಗೂ ಕುಲಸಚಿವ ಪ್ರೊ.ಎನ್. ನಾಗರಾಜ್‌ ಪಾಲ್ಗೊಂಡಿದ್ದರು– ‍ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.