ADVERTISEMENT

ಜೂನ್‌ 4ರಂದು ವಿಧಾನಸೌಧದ ಎದುರು ಪ್ರತಿಭಟನೆ– ಕುರುಬೂರು ಶಾಂತಕುಮಾರ್

​ಪ್ರಜಾವಾಣಿ ವಾರ್ತೆ
Published 20 ಮೇ 2019, 20:11 IST
Last Updated 20 ಮೇ 2019, 20:11 IST

ಮೈಸೂರು: ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸಬೇಕು ಹಾಗೂ ಸಾಲಮನ್ನಾಕ್ಕೆ ಇರುವ ಷರತ್ತುಗಳನ್ನು ಸಡಿಲಿಸಬೇಕು ಎಂದು ಆಗ್ರಹಿಸಿ ಜೂನ್ 4ರಂದು ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಸಾಲ ಮನ್ನಾಕ್ಕೆ ಆಧಾರ್ ಲಿಂಕ್ ಮಾಡುವುದು, ಮನೆಯಲ್ಲಿ ಒಬ್ಬರ ಸಾಲ ಮಾತ್ರ ಮನ್ನಾ, ಸಹಕಾರಿ ಬ್ಯಾಂಕಿನಲ್ಲಿ ಮನ್ನಾ ಆಗಿದ್ದರೆ ವಾಣಿಜ್ಯ ಬ್ಯಾಂಕಿನಲ್ಲಿ ಮನ್ನಾ ಮಾಡುವುದಿಲ್ಲ ಎಂಬ ಷರತ್ತುಗಳನ್ನು ತೆಗೆದು ಹಾಕಬೇಕು ಎಂದು ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಬಾಗಲಕೋಟೆ, ಕಲಬುರ್ಗಿ, ಬೀದರ್ ಮತ್ತು ಬೆಳಗಾವಿ ಜಿಲ್ಲೆಗಳ ಕಬ್ಬು ಬೆಳೆಗಾರರ ₹ 3 ಸಾವಿರ ಕೋಟಿಯಷ್ಟು ಹಣವನ್ನು ಕಾರ್ಖಾನೆ ಮಾಲೀಕರು ಬಾಕಿ ಉಳಿಸಿಕೊಂಡಿದ್ದಾರೆ. ಕೂಡಲೇ, ಈ ಹಣವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕಾಡಂಚಿನ ಹಳ್ಳಿಗಳಲ್ಲಿ ವನ್ಯಜೀವಿಗಳಿಂದ ಕೇವಲ ಬೆಳೆ ಮಾತ್ರ ಹಾಳಾಗುತ್ತಿಲ್ಲ. ಇದರ ಜತೆಗೆ, ರೈತರ ಜೀವಹಾನಿಯೂ ಆಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ‘ಎಲ್ಲ ಜಿಲ್ಲೆಗಳ ರೈತರ ಸಮಸ್ಯೆಗಳನ್ನು ಪಟ್ಟಿ ಮಾಡಲು ಕುರುಬೂರು ಶಾಂತಕುಮಾರ್ ಸೂಚಿಸಿದರು. ಜತೆಗೆ, ಪ್ರತಿಭಟನೆಗೆ ಸುಮಾರು 500 ಮಂದಿ ರೈತರು ಬರುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ವೀರನ್‌ಗೌಡ ಪಾಟೀಲ, ಎಸ್.ಎನ್.ಭನುಮಣ್ಣನವರ್, ಸುರೇಶ್ ಪಾಟೀಲ, ಎಂ.ಡಿ.ಚೇತನ್, ದೇವಕುಮಾರ್, ದೇವರಾಜ್, ಭಾಗ್ಯರಾಜ್, ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.