ADVERTISEMENT

ಈಶ್ವರಪ್ಪ ರಾಜೀನಾಮೆ ನೀಡದಿದ್ದರೆ ರಾಜಭವನಕ್ಕೆ ಮುತ್ತಿಗೆ: ಬಡಗಲಪುರ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 8:29 IST
Last Updated 13 ಏಪ್ರಿಲ್ 2022, 8:29 IST

ಮೈಸೂರು: ‘ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ನೈತಿಕ ಹೊಣೆಹೊತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತಕ್ಷಣವೇ ರಾಜೀನಾಮೆ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇದು ಗಂಭೀರ ವಿಚಾರವಾಗಿದ್ದು, ನಿಷ್ಪಕ್ಷಪಾತ ತನಿಖೆಗೆ ಸರ್ಕಾರ ಮುಂದಾಗಬೇಕು. ಈಶ್ವರಪ್ಪ ರಾಜೀನಾಮೆ ನೀಡದಿದ್ದರೆ, ಮುಖ್ಯಮಂತ್ರಿ ಅವರು ರಾಜೀನಾಮೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ರಾಜೀನಾಮೆ ನೀಡದಿದ್ದರೆ ರೈತ ಸಂಘ ರಾಜಭವನಕ್ಕೆ ಮುತ್ತಿಗೆ ಹಾಕಲಿದೆ’ ಎಂದು ಎಚ್ಚರಿಸಿದರು.

‘ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್‌ ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿತ್ತು. ಪ್ರಧಾನಿ ಅವರು ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಸಂತೋಷ ಪಾಟೀಲ ಬದುಕುಳಿಯುತ್ತಿದ್ದರೋ ಏನೋ. ಪ್ರಧಾನಿಗೆ ಬರೆದಿರುವ ಪತ್ರದ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಲಿ’ ಎಂದು ಒತ್ತಾಯಿಸಿದರು.

ADVERTISEMENT

‘ಬಿಜೆಪಿ ಕಾರ್ಯಕರ್ತನಿಗೆ ಇಂತಹ ಪರಿಸ್ಥಿತಿ ಎದುರಾದರೆ, ಜನಸಾಮಾನ್ಯರು ಏನು ಮಾಡಬೇಕು? ಈ ಘಟನೆ ಬಗ್ಗೆ ಆರ್‌ಎಸ್‌ಎಸ್‌, ಬಜರಂಗದಳದವರು ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಲಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.