ADVERTISEMENT

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ: ಆಗ್ರಹ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 8:05 IST
Last Updated 1 ಅಕ್ಟೋಬರ್ 2020, 8:05 IST
ಉತ್ತರ ಪ್ರದೇಶದಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಮೈಸೂರಿನಲ್ಲಿ ಬುಧವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು (ಎಡಚಿತ್ರ). ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್‌ ಅವರ ವರ್ಗಾವಣೆ ಖಂಡಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಘೋಷಣೆ ಕೂಗಿದರು
ಉತ್ತರ ಪ್ರದೇಶದಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಮೈಸೂರಿನಲ್ಲಿ ಬುಧವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು (ಎಡಚಿತ್ರ). ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್‌ ಅವರ ವರ್ಗಾವಣೆ ಖಂಡಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಘೋಷಣೆ ಕೂಗಿದರು   

ಮೈಸೂರು: ಉತ್ತರ ಪ್ರದೇಶ ರಾಜ್ಯದ ಹತ್ರಾಸ್‌ನಲ್ಲಿ ಪರಿಶಿಷ್ಟ ಜಾತಿಯ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಅಖಿಲ ಭಾರತೀಯ ಮಹಿಳಾ ಸಾಂಸ್ಕೃತಿಕ ಸಂಘಟನೆ, ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌, ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್ಸ್‌ ಆರ್ಗನೈಸೇಷನ್‌ ಪ್ರತಿಭಟನೆ ನಡೆಸಿದವು.

ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಸೇರಿದ ವಿವಿಧ ಸಂಘಟನೆಗಳ ಸದಸ್ಯರು, ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

‘ದೇಶದಲ್ಲಿನ ಮಹಿಳೆಯರ ಶೋಚ ನೀಯ ಮತ್ತು ವಾಸ್ತವ ಪರಿಸ್ಥಿತಿಯನ್ನು ಇಂಥ ಕೃತ್ಯಗಳು ಪದೇಪದೇ ಬಿಚ್ಚಿಡುತ್ತಿವೆ. ಇದೊಂದು ಕರಾಳ ದಿನ. ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರ ಮಹಿಳೆಯರು ಹಾಗೂ ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗುತ್ತಿವೆ.ಭಾರತೀಯ ಸಂಸ್ಕೃತಿಯ ಹರಿಕಾರರು ಎಂದು ಹೇಳಿಕೊಳ್ಳುವವರು ಮಹಿಳೆಯರ ಬಗ್ಗೆ ಯಾವುದೇ ರೀತಿಯ ಕಾಳಜಿ ಹೊಂದಿಲ್ಲ’ ಎಂದು ಪ್ರತಿಭಟನಕಾರರು ಹರಿಹಾಯ್ದರು.

ADVERTISEMENT

‘ಮೃಗೀಯ ವರ್ತನೆಯನ್ನು ಎಲ್ಲರೂ ಖಂಡಿಸಬೇಕು. ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಅಪರಾಧಿಗಳೊಂದಿಗೆ ನಿಂತಿರುವುದು ಅತ್ಯಂತ ನೋವು ತರಿಸುವ ವಿಚಾರ. ಈ ಪ್ರಕರಣವನ್ನು ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅಶ್ಲೀಲ ಸಿನಿಮಾ, ಸಾಹಿತ್ಯ, ಡ್ರಗ್ಸ್‌, ಮದ್ಯವನ್ನು ನಿಷೇಧಿಸಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಎಂಎಸ್‌ಎಸ್‌ ರಾಜ್ಯ ಉಪಾಧ್ಯಕ್ಷೆ ಪಿ.ಎಸ್.ಸಂಧ್ಯಾ, ಜಿಲ್ಲಾ ಕಾರ್ಯದರ್ಶಿ ಸೀಮಾ, ಎಐಡಿವೈಒ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌, ಸುನೀಲ್, ಕಲಾವತಿ, ಎಐಡಿಎಸ್‌ಒನ ಆಸಿಯಾ ಬೇಗಂ, ಚಂದ್ರಕಲಾ ಇದ್ದರು.

ಏಕಾಂಗಿ ಧರಣಿ: ಯುವತಿ ಅತ್ಯಾಚಾರ ಖಂಡಿಸಿ ಮೈಸೂರು ನಾಯ ಕರ ವೇದಿಕೆಯ ಪಡುವಾರಹಳ್ಳಿ ರಾಮಕೃಷ್ಣ ಏಕಾಂಗಿ ಧರಣಿ ನಡೆಸಿದರು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಯುವತಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.