ADVERTISEMENT

ಮೈಸೂರು: ಮದ್ಯದಂಗಡಿ ಮುಂದೆ ಶವ ಇಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 16:19 IST
Last Updated 27 ನವೆಂಬರ್ 2020, 16:19 IST
ಮೈಸೂರು ತಾಲ್ಲೂಕಿನ ರಮ್ಮನಹಳ್ಳಿ ಸಮೀಪ ಸ್ಥಳೀಯರು ಮದ್ಯದಂಗಡಿ ಎದುರು ಮೃತಪ‍ಟ್ಟ ಮಹದೇವು ಅವರ ಶವವಿರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು
ಮೈಸೂರು ತಾಲ್ಲೂಕಿನ ರಮ್ಮನಹಳ್ಳಿ ಸಮೀಪ ಸ್ಥಳೀಯರು ಮದ್ಯದಂಗಡಿ ಎದುರು ಮೃತಪ‍ಟ್ಟ ಮಹದೇವು ಅವರ ಶವವಿರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ಮೈಸೂರು: ತಾಲ್ಲೂಕಿನ ರಮ್ಮನಹಳ್ಳಿಯ ಉಗ್ರನರಸಿಂಹ ಮದ್ಯದಂಗಡಿ ಸಮೀಪ ಸ್ಥಳೀಯ ನಿವಾಸಿ ಮಹದೇವು ಅವರಿಗೆ ವಾಹನವೊಂದು ಡಿಕ್ಕಿ ಹೊಡೆದು ಮೃತಪಟ್ಟರು. ಅಪಘಾತಕ್ಕೆ ಮದ್ಯ ಸೇವಿಸಿದ್ದೇ ಕಾರಣ ಎಂದು ಆರೋಪಿಸಿದ ಸ್ಥಳೀಯರು ಶುಕ್ರವಾರ ಮದ್ಯದಂಗಡಿ ಮುಂದೆ ಕೆಲಕಾಲ ಶವವಿರಿಸಿ ಪ್ರತಿಭಟನೆ ನಡೆಸಿದರು. ಗ್ರಾಮದ ಸಮೀಪ ವೈನ್‌ಸ್ಟೋರ್ ಬೇಡ, ಈ ಕೂಡಲೇ ಬಾರ್‌ನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ‘ಅಪಘಾತಕ್ಕೂ, ಮದ್ಯದಂಗಡಿಗೂ ಸಂಬಂಧ ಇಲ್ಲ. ಸಾಕಷ್ಟು ದೂರದಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ವಾಹನವು ವೇಗವಾಗಿ ಹಾದು ಹೋಗಿದೆ. ಮೃತಪಟ್ಟ ವ್ಯಕ್ತಿಯೂ ಮದ್ಯ ಸೇವಿಸಿದ್ದರು ಎನ್ನುವುದಕ್ಕೆ ಆಧಾರ ಇಲ್ಲ. ವೈದ್ಯಕೀಯ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಬಕಾರಿ ಇಲಾಖೆಯ ಉಪ ಆಯುಕ್ತ ಮಾದೇಶ್‌, ‘ಈ ಹಿಂದೆಯೂ ಮದ್ಯದಂಗಡಿ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಬೇರೆಡೆ ಸ್ಥಳಾಂತರ ಮಾಡುವಂತೆ ಸೂಚನೆಯನ್ನೂ ನೀಡಲಾಗಿತ್ತು. ಆದರೆ, ನ್ಯಾಯಾಲಯವು ಅದೇ ಜಾಗದಲ್ಲಿ ಮದ್ಯದಂಗಡಿ ಮುಂದುವರಿಯಬೇಕು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಂದರೆ ಅದನ್ನು ಪೊಲೀಸರು ನಿಭಾಯಿಸಬೇಕು ಎಂದು ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.