ADVERTISEMENT

ಸಾರ್ವಜನಿಕರ ಕೆಲಸಕ್ಕೆ ತೊಂದರೆ

ನಾಲ್ಕನೇ ದಿನವೂ ಮುಂದುವರಿದ ಪಾಲಿಕೆ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 5:56 IST
Last Updated 12 ಜುಲೈ 2025, 5:56 IST
ಮೈಸೂರಿನ ಮಹಾನಗರ ಪಾಲಿಕೆ ಆವರಣದಲ್ಲಿ ಪಾಲಿಕೆ ನೌಕರರ ಸಂಘ ಹಾಗೂ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತಿನ ಸದಸ್ಯರು ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡ್ಡಿಯೂರಪ್ಪ ಭೇಟಿ ನೀಡಿ ಮಾತನಾಡಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ಮಹಾನಗರ ಪಾಲಿಕೆ ಆವರಣದಲ್ಲಿ ಪಾಲಿಕೆ ನೌಕರರ ಸಂಘ ಹಾಗೂ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತಿನ ಸದಸ್ಯರು ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡ್ಡಿಯೂರಪ್ಪ ಭೇಟಿ ನೀಡಿ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೈಸೂರು ಮಹಾನಗರ ಪಾಲಿಕೆ ನೌಕರರ ಸಂಘ ಹಾಗೂ ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಪರಿಷತ್ತಿನ ಸದಸ್ಯರು ಪಾಲಿಕೆ ಮುಂಭಾಗ ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಅಧಿಕಾರಿಗಳು ಕಚೇರಿಯಲ್ಲಿ ಲಭ್ಯರಿಲ್ಲದ ಕಾರಣ ಸಾರ್ವಜನಿಕರ ಕೆಲಸಗಳೂ ಬಾಕಿ ಉಳಿದಿವೆ.

ಪಾಲಿಕೆಯ ಕೆಳಗೆ 65 ವಾರ್ಡ್‌ಗಳಿದ್ದು, ನೌಕರರು ಕೆಲಸಕ್ಕೆ ತೆರಳದೆ ಮುಷ್ಕರದಲ್ಲಿ ಭಾಗವಹಿಸುತ್ತಿರುವುದರಿಂದ ಅಲ್ಲಿನ ಚಟುವಟಿಕೆ ಸ್ಥಗಿತಗೊಂಡಿದೆ. ಕಂದಾಯ, ಇ– ಖಾತೆ, ಜನನ– ಮರಣ ಪತ್ರ, ಆಸ್ತಿ ತೆರಿಗೆ ಪಾವತಿಗೆ ಬರುವ ಸಾರ್ವಜನಿಕರು ಮನೆಗೆ ವಾಪಸ್‌ ತೆರಳಿದರು. ಪೌರ ಕಾರ್ಮಿಕರೂ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದರಿಂದ ಕಸ ವಿಲೇವಾರಿಯಲ್ಲೂ ವ್ಯತ್ಯಯವಾಗಿದೆ.

ಯಡಿಯೂರಪ್ಪ ಭೇಟಿ: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು. ಬಳಿಕ ಮಾತನಾಡಿ, ‘ಮೈಸೂರು ಮುಖ್ಯಮಂತ್ರಿಗಳ ಕ್ಷೇತ್ರ, ಇಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರದ ಪ್ರತಿನಿಧಿಗಳು, ಅಧಿಕಾರಿಗಳು ಬಂದು ಅಹವಾಲು ಸ್ವೀಕರಿಸದೆ ಕುಂಭಕರ್ಣ ನಿದ್ದೆಯಲ್ಲಿ ಇರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ‘ಮೈಸೂರು ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ನೀಡಿದೆ. ಇಲ್ಲಿನ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು. ಪಾಲಿಕೆ ನೌಕರರು ತಮ್ಮ ಆರೋಗ್ಯ ಹಾಳು ಮಾಡಿಕೊಂಡು ಇತರರಿಗಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ಅವರ ಆರೋಗ್ಯ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ಆಗ್ರಹಿಸಿದರು.

ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.