ADVERTISEMENT

ಪುನೀತಾಭಿಮಾನ: ಹಲವು ಸೇವಾ ಕಾರ್ಯ

ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆ, ಕೊಡುಗೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 13:23 IST
Last Updated 17 ಮಾರ್ಚ್ 2023, 13:23 IST
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದ ಎದುರಿನ ರಸ್ತೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಅವರ ಹುಟ್ಟುಹಬ್ಬದ ಅಂಗವಾಗಿ ಶುಕ್ರವಾರ ಅನ್ನಸಂತರ್ಪಣೆ ಮಾಡಿದರು
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದ ಎದುರಿನ ರಸ್ತೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಅವರ ಹುಟ್ಟುಹಬ್ಬದ ಅಂಗವಾಗಿ ಶುಕ್ರವಾರ ಅನ್ನಸಂತರ್ಪಣೆ ಮಾಡಿದರು   

ಮೈಸೂರು: ಖ್ಯಾತ ಚಲನಚಿತ್ರ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಲವು ಸೇವಾ ಕಾರ್ಯಗಳ ಮೂಲಕ ಶುಕ್ರವಾರ ಆಚರಿಸಿದರು.

ನಗರದ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯ ದೇವಾಲಯದ ಆವರಣ, ದೇವರಾಜ ಅರಸು ರಸ್ತೆ, ನಂಜರಾಜ ಬಹದ್ದೂರ್‌ ಛತ್ರದ ಎದುರಿನ ರಸ್ತೆ, ಶಿವರಾಂ ಪೇಟೆ ಹೀಗೆ... ಹಲವು ಕಡೆಗಳಲ್ಲಿ ಕಟೌಟ್‌ಗಳನ್ನು ಮತ್ತು ಸ್ಪೀಕರ್‌ಗಳಲ್ಲಿ ಅವರ ಚಿತ್ರದ ಮತ್ತು ಅವರು ಹಾಡಿರುವ ಹಾಡುಗಳನ್ನು ಹಾಕಿ ನೆಚ್ಚಿನ ನಟನನ್ನು ನೆನೆದರು. ಅಭಿಮಾನಿಗಳು, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನೂ ನಡೆಸಿದರು.

ಕೋಟೆ ಆಂಜನೇಯ ದೇವಾಲಯದ ಆವರಣದಲ್ಲಿ ಸೇರಿದಂತೆ ಅಲ್ಲಲ್ಲಿ ರಕ್ತ ದಾನ ಶಿಬಿರವೂ ನಡೆಯಿತು. ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳ ಬಳಗ ಹಾಗೂ ಪ್ರಜ್ಞಾವಂತ ನಾಗರಿಕರ ವೇದಿಕೆಯಿಂದ ಚೆಲುವಾಂಬ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು. ನಂತರ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸಲಾಯಿತು.

ADVERTISEMENT

ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ:

ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಪುನೀತ್ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಸಾಹಿತಿ ಬನ್ನೂರು ರಾಜು ಮಾತನಾಡಿ, ‘ತಮ್ಮ ಬಣ್ಣದ ಬದುಕಿನ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿ, ಕನ್ನಡ ಚಿತ್ರರಂಗಕ್ಕೊಂದು ಹೊಸ ಪವರ್ ನೀಡಿದ ನಟ ಪುನೀತ್ ರಾಜಕುಮಾರ್. ಅವರು ಕನ್ನಡವಿರುವವರೆಗೂ ಶಾಶ್ವತವಾಗಿ ಕನ್ನಡಿಗರ ಮನದಲ್ಲಿ ಇದ್ದೇ ಇರುತ್ತಾರೆ’ ಎಂದರು.

‘ರಾಜಕುಮಾರ್ ಅವರು ಕನ್ನಡಕ್ಕೊಬ್ಬರೇ ರಾಜಕುಮಾರ್ ಆಗಿದ್ದರೆ, ಅವರ ಪುತ್ರ ಪುನೀತ್ ರಾಜಕುಮಾರ್ ತಂದೆಯನ್ನೂ ಮೀರಿಸಿದರು. ಅವರು ರಾಜಕಾರಣಿಗಳಂತೆ ಪ್ರಣಾಳಿಕೆ ಇಟ್ಟುಕೊಂಡು, ತುತ್ತೂರಿ ಊದಿಕೊಂಡು ಜನ ಸೇವೆ ಮಾಡಿದವರಲ್ಲ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತೆ ಸೇವಾ ಕಾರ್ಯದಲ್ಲಿ ತೊಡಗಿದ್ದರು. ಕೇವಲ ಚಿತ್ರನಟನಾಗಿರದೆ ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ಹೃದಯವಂತರಾಗಿದ್ದರು’ ಎಂದು ನೆನೆದರು.

‘ನಗರದ ಮಹಿಳೆಯರ ಪುನರ್ವಸತಿ ಕೇಂದ್ರ ಶಕ್ತಿಧಾಮ ಸೇರಿದಂತೆ ಅನೇಕ ಸೇವಾ ಸಂಸ್ಥೆಗಳಿಗೆ ಜೀವಧಾತುವಾಗಿದ್ದರು. ದೊಡ್ಮನೆ ಹುಡುಗನಾಗಿ ಚಿಕ್ಕ ವಯಸ್ಸಿನಲ್ಲೇ ಕೊಡುವ ಗುಣವನ್ನು ಮೈಗೂಡಿಸಿಕೊಂಡಿದ್ದ ಅವರು ಅಲ್ಪಾಯುಷ್ಯದಲ್ಲೇ ಕನ್ನಡ ನಾಡು ಕಂಡರಿಯದಂತಹ ಅಪಾರ ಸಾಧನೆ ಮಾಡಿ ಹೋಗಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್ ಕುಮಾರ್ ಉದ್ಘಾಟಿಸಿದರು. ಕಾಂಗ್ರೆಸ್ ಮುಖಂಡ ಎಂ.ಪ್ರದೀಪ್ ಕುಮಾರ್, ಚಲನಚಿತ್ರ ನಿರ್ಮಾಪಕ ಸಿದ್ದರಾಜು, ಚಿತ್ರ ನಟ ಸುಪ್ರೀತ್, ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಮಾತನಾಡಿದರು.

ಶಾಲಾ ಮಕ್ಕಳು ಹಾಗೂ ನೆರೆದಿದ್ದವರಿಗೆ ಕೇಕ್ ವಿತರಿಸಲಾಯಿತು.

ಸಂಸ್ಕೃತಿ ಚಿಂತಕ ರಘುರಾಮ್ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಅಕ್ಕನ ಬಳಗ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಎಂ.ಜಿ.ಸುಗುಣಾವತಿ, ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ಕಾಂಗ್ರೆಸ್ ಮುಖಂಡ ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.