ADVERTISEMENT

ಸನ್ನಡತೆ: ಗುರು, ಪಾಠಶಾಲೆ ಅಗತ್ಯ

ಬರಡಪುರ ಮಹಾಂತೇಶ್ವರ ಮಠದಲ್ಲಿ 34ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 14:11 IST
Last Updated 8 ಫೆಬ್ರುವರಿ 2023, 14:11 IST
ಜಯಪುರ ಹೋಬಳಿಯ ಬರಡನಪುರ ಮಹಾಂತೇಶ್ವರ ಮಠದ 34ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಶಾಸಕ ಜಿ.ಟಿ.ದೇವೇಗೌಡ ಇದ್ದಾರೆ
ಜಯಪುರ ಹೋಬಳಿಯ ಬರಡನಪುರ ಮಹಾಂತೇಶ್ವರ ಮಠದ 34ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಶಾಸಕ ಜಿ.ಟಿ.ದೇವೇಗೌಡ ಇದ್ದಾರೆ   

ಜಯಪುರ: ‘ಮಾನವ ಸನ್ನಡತೆಯ ಮಾರ್ಗದಲ್ಲಿ ಸಾಗಬೇಕೆಂದರೆ ಗುರುಗಳು ಹಾಗೂ ಪಾಠಶಾಲೆ ಅಗತ್ಯವಾಗಿದೆ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಬರಡನಪುರ ಗ್ರಾಮದ ಮಹಾಂತೇಶ್ವರ ಮಠದಲ್ಲಿ ಬುಧವಾರ ನಡೆದ 34ನೇ ಪುಣ್ಯಾರಾಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಠ ಮಾನ್ಯಗಳು ಭಕ್ತರಿಗಾಗಿ ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ, ಸಮಾಜಮುಖಿ ಸೇವೆ ಮಾಡುತ್ತಾ ಬಂದಿವೆ’ ಎಂದರು.

ADVERTISEMENT

ವಿರಕ್ತ ಮಠದ ಶ್ರೀಕಂಠಸ್ವಾಮಿ ಮಾತನಾಡಿ, ‘ಕಾಯಕ ಮಾಡುವುದೇ ಪರಮ ಧರ್ಮ’ ಎಂದು ಹೇಳಿದರು.

‘ಉದಾತ್ತ ಮಾನವೀಯ ಮೌಲ್ಯಗಳು ಇಂದು ಮರೆಯಾಗುತ್ತಿರುವುದು ವಿಷಾದನೀಯ’ ಎಂದರು.

ಕುಂದೂರು ಮಠದ ಶರತ್ಚಂದ್ರ ಸ್ವಾಮೀಜಿ ಮಾತನಾಡಿ, ‘ಲೋಕದ ಡೊಂಕನ್ನು ತಿದ್ದುವುದನ್ನು ಬಿಟ್ಟು ನಮ್ಮನ್ನು ನಾವು ಶುದ್ಧೀಕರಿಸಿಕೊಳ್ಳಬೇಕು. ಕಾಯಕ ನಿಷ್ಠೆಗೆ ಒತ್ತು ಕೊಡಬೇಕು. ಈ ನಿಟ್ಟಿನಲ್ಲಿ ಮಠಗಳು ಧರ್ಮವನ್ನು ಉಳಿಸಿ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬೆಳೆಸುತ್ತಿವೆ’ ಎಂದು ತಿಳಿಸಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ‘ಮಠಗಳು ಸಮಾಜವನ್ನು ತಿದ್ದುವಂತಹ ಕೆಲಸ ಮಾಡುತ್ತಿರುವುದರಿಂದಲೇ ನಾಡಿನ ಸಂಸ್ಕೃತಿ ಇನ್ನೂ ಉಳಿದಿದೆ. ಬಸವಣ್ಣ ಸಾಮಾಜಿಕ ಸಮಾನತೆಯ ಸಂದೇಶ ಸಾರಿದ್ದರು. ಅವರ ಸಂದೇಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ರಾಜಕಾರಣದಲ್ಲಿ ನಾನು ಕೂಡ ಸನ್ಯಾಸಿ ಇದ್ದಂತೆ ಇದ್ದೇನೆ. ಯಾವುದೇ ಅಧಿಕಾರದ ಆಸೆಗೆ ಜೋತು ಬೀಳದೆ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಧಾರ್ಮಿಕ ಕೇಂದ್ರಗಳ ಬೆಳವಣಿಗೆಗೆ ಒತ್ತು ನೀಡಲು ಸರ್ಕಾರದಿಂದ ಸಿಎ ನಿವೇಶನಗಳನ್ನು ಮಂಜೂರು ಮಾಡಿಸಿದ್ದೇನೆ. ಎಲ್ಲ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ವಿಶೇಷವಾಗಿ ವೀರಶೈವ ಲಿಂಗಾಯತ ಸಮಾಜವನ್ನು ಪ್ರೀತಿಸುತ್ತೇನೆ. ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ವೀರಶೈವ ಸಮಾಜದ ಮುಖಂಡರು’ ಎಂದು ಹೇಳಿದರು.

‘2013ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ತಳೂರು ಗ್ರಾಮದ ವೀರಶೈವ ಮುಖಂಡರು ₹ 5ಸಾವಿರ ನೀಡಿ ಆಶೀರ್ವದಿಸಿದ್ದರು’ ಎಂದು ನೆನೆದರು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪತ್ತಿನ ಸಹಕಾರಿ ಮಹಾಮಂಡಳದ ಅಧ್ಯಕ್ಷೆ ಲಲಿತಾ ಜಿ.ಟಿ.ದೇವೇಗೌಡ ನವ ಜೋಡಿಗಳಿಗೆ ಮಾಂಗಲ್ಯ ವಿತರಿಸಿದರು.

ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಉಚಿತವಾಗಿ ನಡೆಸಲಾಯಿತು. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಬಸವರಾಜು ಮತ್ತು ಸರ್ವೋತ್ತಮ ಪ್ರಶಸ್ತಿ ಪುರಸ್ಕೃತ ಎಚ್.ಎಸ್.ಪ್ರಸಾದ್ ಮತ್ತು ಅರ್ಕಾ ಪ್ರತಿಷ್ಠಾನದ ಶ್ರೀನಿವಾಸ ಗುರೂಜಿ ಅವರನ್ನು ಸುತ್ತೂರು ಶ್ರೀಗಳು ಅಭಿನಂದಿಸಿದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಬರಡನಪುರ ಮಹಾಂತೇಶ್ವರ ಮಠದ ಪರಶಿವಮೂರ್ತಿ ಸ್ವಾಮೀಜಿ, ಕನಕಪುರ ದೇಗುಲ ಮಠದ ಚೆನ್ನಬಸವ ಸ್ವಾಮೀಜಿ, ದೇವನೂರು ದಾಸೋಹ ಮಠದ ಮಹಾಂತ ಸ್ವಾಮೀಜಿ, ಮೈಸೂರು ನೀಲಕಂಠ ಮಠದ ಸಿದ್ದಮಲ್ಲ ಸ್ವಾಮೀಜಿ, ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹುಲ್ಲಹಳ್ಳಿ ವಿರಕ್ತ ಮಠದ ಚೆನ್ನಮಲ್ಲ ಸ್ವಾಮೀಜಿ, ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ, ಮಾದಹಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ, ಮೈಸೂರು ಪಂಚಗವಿ ಮಠದ ಗುರುಬಸವಲಿಂಗಸ್ವಾಮೀಜಿ, ದಂಡಿಕೆರೆ ಪಟ್ಟದಮಠ ಬಸವಲಿಂಗ ಸ್ವಾಮೀಜಿ, ಪುರ ಪಟ್ಟದಮಠ ಚಂದ್ರಶೇಖರ ಸ್ವಾಮೀಜಿ, ಸಂಗಮಕ್ಷೇತ್ರ ಕಾರ್ಯಸ್ವಾಮಿ ಮಠದ ಮಹೇಶ್ವರ ಸ್ವಾಮಿ, ಇಮ್ಮಡಿ ಮಡಿವಾಳಸ್ವಾಮಿ, ಶೆಟ್ಟನಾಯಕನಹಳ್ಳಿ ಪಟ್ಟದ ಮಠ ಬಸವಣ್ಣಸ್ವಾಮಿ, ಜಯಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡಿ.ಬಸವಣ್ಣ, ಪಿಡಿಒ ಬಸವಣ್ಣ, ಕಾರ್ಯದರ್ಶಿ ನಾಗವೇಣಿ, ಉದ್ಯಮಿ ಎಸ್.ಶ್ರೀಕಾಂತ್, ಜಗದೀಶ್ ಇದ್ದರು.

ಮಂಗಳವಾರ ರಾತ್ರಿ ಬರಡನಪುರ ಗ್ರಾಮದಲ್ಲಿ ಮಹಾಂತ ಸ್ವಾಮೀಜಿ ಬೆಳ್ಳಿಯ ವಿಗ್ರಹದ ಉತ್ಸವ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಕಲಾ ತಂಡಗಳು ಮೆರುಗು ನೀಡಿದವು. ಶಿವಭಜನೆ ಕಾರ್ಯಕ್ರಮ ನಡೆಯಿತು. ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.