ADVERTISEMENT

10.15 ಲಕ್ಷ ಕ್ವಿಂಟಲ್ ಭತ್ತ–ರಾಗಿ ಖರೀದಿ

ರೈತರಿಂದ 1.5 ಲಕ್ಷ ಕ್ವಿಂಟಲ್‌ ರಾಗಿ ಖರೀದಿ ಬಾಕಿ: ₹ 22 ಕೋಟಿ ನಗದು ಪಾವತಿ

ಡಿ.ಬಿ, ನಾಗರಾಜ
Published 3 ಏಪ್ರಿಲ್ 2021, 5:12 IST
Last Updated 3 ಏಪ್ರಿಲ್ 2021, 5:12 IST

ಮೈಸೂರು: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಜಿಲ್ಲೆಯಲ್ಲಿ ಇದೂವರೆಗೂ 10.15 ಲಕ್ಷ ಕ್ವಿಂಟಲ್‌ ಭತ್ತ ಹಾಗೂ ರಾಗಿಯನ್ನು ರೈತರಿಂದ ನೇರವಾಗಿ ಖರೀದಿಸಲಾಗಿದೆ.

ಈಗಾಗಲೇ ತಾವು ಬೆಳೆದ ರಾಗಿ, ಭತ್ತ ಮಾರಾಟ ಮಾಡಿರುವ ಬೆಳೆಗಾರರಲ್ಲಿ ಕೆಲವರ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗಿದೆ. ಇಲ್ಲಿಯ ತನಕ ₹ 22 ಕೋಟಿ ಪಾವತಿಸಿದ್ದು, ಉಳಿದ ರೈತರಿಗೂ ಹಣ ಪಾವತಿಸುವ ಪ್ರಕ್ರಿಯೆ ನಡೆದಿದೆ.

‘ಜಿಲ್ಲೆಯ 18,178 ಭತ್ತದ ಬೆಳೆಗಾರರು ಎಂಎಸ್‌ಪಿ ಯೋಜನೆಯಡಿ ಭತ್ತ ಮಾರಲಿಕ್ಕೆ ನೋಂದಾಯಿಸಿಕೊಂಡಿದ್ದರು. ಇದರಲ್ಲಿ 16,730 ರೈತರು ತಾವು ಬೆಳೆದಿದ್ದ 6.46 ಲಕ್ಷ ಕ್ವಿಂಟಲ್‌ ಭತ್ತವನ್ನು ನವೆಂಬರ್‌ನಿಂದ ಮಾರ್ಚ್‌ ಅವಧಿಯಲ್ಲಿ ಮಾರಿದ್ದಾರೆ’ ಎಂದುಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಪಿ.ಶಿವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ರಾಗಿ ಖರೀದಿ ಕೇಂದ್ರವೂ ನವೆಂಬರ್‌ನಲ್ಲೇ ಆರಂಭಗೊಂಡಿದ್ದವು. ಆದರೆ, ಸುಗ್ಗಿ ಮುಗಿದಿದ್ದೇ ಜನವರಿ ಆರಂಭದಲ್ಲಿ. ರಾಗಿ ಮಾರಾಟಕ್ಕಾಗಿ 18,508 ರೈತರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ ಮಾರ್ಚ್‌ ಅಂತ್ಯದವರೆಗೂ 14,516 ರೈತರು 3,69,459 ಕ್ವಿಂಟಲ್‌ ರಾಗಿಯನ್ನು ಸರ್ಕಾರ ಸೂಚಿಸಿದ ಏಜೆನ್ಸಿಗೆ ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ರಾಗಿ ಮಾರಾಟಕ್ಕಾಗಿ ನೋಂದಾಯಿಸಿಕೊಂಡಿದ್ದ ಹಲವು ರೈತರು ಇನ್ನೂ ಮಾರಿಲ್ಲ. ಜಿಲ್ಲೆಯಲ್ಲಿನ ನಾಲ್ಕು ಸಾವಿರ ರೈತರಿಗೆ ಅನುಕೂಲವಾಗಲಿ ಎಂದು ಸರ್ಕಾರ ರಾಗಿ ಖರೀದಿ ಅವಧಿಯನ್ನು ಮಾತ್ರ ಏ.30ರವರೆಗೂ ವಿಸ್ತರಿಸಿದೆ. ಈ ಅವಧಿಯಲ್ಲಿ ನಮ್ಮಲ್ಲಿನ ಲೆಕ್ಕಾಚಾರದಂತೆ 1 ಲಕ್ಷದಿಂದ ಒಂದೂವರೆ ಲಕ್ಷ ಕ್ವಿಂಟಲ್‌ ರಾಗಿ ಖರೀದಿಯಾಗಬೇಕಿದೆ’ ಎಂದು ಅವರು ಹೇಳಿದರು.

‘ಮಾರ್ಚ್‌ ಅಂತ್ಯದವರೆಗೂ ಜಿಲ್ಲೆಯ 31 ಸಾವಿರ ರೈತರು ಎಂಎಸ್‌ಪಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಇದೀಗ ರಾಗಿ ಖರೀದಿ ಅವಧಿ ವಿಸ್ತರಿಸಿರುವುದರಿಂದ ಈ ಸಂಖ್ಯೆ 35 ಸಾವಿರ ತಲುಪುವ ನಿರೀಕ್ಷೆಯಿದೆ’ ಎಂದು ಶಿವಣ್ಣ ತಿಳಿಸಿದರು.

ಅವಧಿ ವಿಸ್ತರಣೆ: ಮಧ್ಯವರ್ತಿಗಳಿಗೆ ವರದಾನ
‘ನಮ್ಮಲ್ಲಿ ಸೆಪ್ಟೆಂಬರ್‌ ಅಂತ್ಯದಲ್ಲೇ ರಾಗಿ ಕೊಯ್ಲು ನಡೆದಿರುತ್ತದೆ. ಅಕ್ಟೋಬರ್‌ನಿಂದ ಫೆಬ್ರುವರಿ ಅಂತ್ಯದವರೆಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ತೆರೆದರೆ ಸಾಕು. ಆದರೆ ಸರ್ಕಾರ ಸಕಾಲಕ್ಕೆ ಆರಂಭಿಸಲ್ಲ’ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ದೂರಿದರು.

‘ಖರೀದಿ ಕೇಂದ್ರ ಮುಂದುವರೆಸಿ ಎಂದು ಯಾವ ರೈತರು, ಸಂಘಟನೆಯೂ ಸರ್ಕಾರಕ್ಕೆ ಬೇಡಿಕೆ ಮಂಡಿಸಿಲ್ಲ. ಆದರೂ ಒಂದು ತಿಂಗಳು ಖರೀದಿಯ ಅವಧಿ ವಿಸ್ತರಿಸಿದೆ. ಇದರಿಂದ ಶೇ 10ರಷ್ಟು ರೈತರಿಗೆ ಮಾತ್ರ ಉಪಕಾರಿಯಾಗಲಿದೆ. ಉಳಿದ ಶೇ 90ರಷ್ಟು ಅನುಕೂಲ ಈಗಾಗಲೇ ರೈತರಿಂದ ಮುಕ್ತ ಮಾರುಕಟ್ಟೆಯಲ್ಲಿ ರಾಗಿ ಖರೀದಿಸಿರುವ ವ್ಯಾಪಾರಿಗಳಿಗೆ ಆಗಲಿದೆ’ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮಧ್ಯವರ್ತಿಗಳಿಗೆ ಅವಕಾಶವೇ ಇರಲ್ಲ
‘ಜಮೀನಿದ್ದ ರೈತರಿಗೂ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಅವಕಾಶವಿರಲ್ಲ. ತಮ್ಮ ಹೊಲದಲ್ಲಿ ರಾಗಿ ಬೆಳೆದಿರಬೇಕು. ಬೆಳೆ ದರ್ಶಕ ಸಮೀಕ್ಷೆಯಲ್ಲಿ ಅದು ನಮೂದಾಗಿರಬೇಕು. ಖರೀದಿ ಕೇಂದ್ರದಲ್ಲಿ ನೋಂದಾಯಿಸಿಕೊಂಡಿರಬೇಕು. ಫ್ರೂಟ್ಸ್‌ ಐಡಿಯಲ್ಲಿ ರೈತರ ಆಧಾರ್‌, ಬ್ಯಾಂಕ್‌ ಖಾತೆ ಲಿಂಕ್‌ ಆಗಿರಬೇಕು. ರೈತನ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಪಾವತಿಯಾಗಲಿದೆ. ಇಲ್ಲಿ ಮತ್ತೊಬ್ಬರ ಪಾತ್ರವೇ ಇರುವುದಿಲ್ಲ. ರೈತರೇ ಸಾಥ್‌ ನೀಡಿದರೆ ಮಾತ್ರ ಮಧ್ಯವರ್ತಿ ಲಾಭ ಗಳಿಸಿಕೊಳ್ಳಬಹುದಷ್ಟೇ’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಪಿ.ಶಿವಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.