
ಮೈಸೂರು: ‘ಪರಿಸರದ ನಾಶ ಮತ್ತು ಭಾಷೆಯ ಕುಸಿತ ಸಮಾಜದ ದೊಡ್ಡ ಸಮಸ್ಯೆಯಾಗಿದ್ದು, ಆದರೆ ಅದರ ಬಗ್ಗೆ ನಾವು ಮೌನವಾಗಿದ್ದೇವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಬೇಸರಿಸಿದರು.
ಜಗನ್ನಾಥ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರ (ಜೆಸಿಎಸಿ)ವು ಶುಕ್ರವಾರದಿಂದ ಆಯೋಜಿಸಿರುವ ‘ಉತ್ತರಾಯಣ’ ಕಲೆ ಮತ್ತು ಸಾಂಸ್ಕೃತಿಕ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಜಾಗತಿಕ ಬೆಳವಣಿಗೆ ಬಳಿಕ ಜಗತ್ತಿನ ಅನೇಕ ಭಾಷೆ ಮರೆಯಾಗುತ್ತಿವೆ. ಕೇಂದ್ರ ಸರ್ಕಾರದ ವರದಿಯ ಪ್ರಕಾರ 1947ರಿಂದ 2011ರವರೆಗೆ ದೇಶದಲ್ಲಿ 254 ಭಾಷೆಗಳು ಕಣ್ಮರೆಯಾಗಿವೆ. 19,568 ಭಾಷೆಗಳಿದ್ದು, ರಾಜ್ಯದೊಳಗೆ ಕನ್ನಡದೊಂದಿಗೆ 230 ಭಾಷೆಗಳು ಬದುಕುತ್ತಿವೆ. ಪೆನ್ಸಿಲ್‌ವೆನಿಯೊ ವಿಶ್ವವಿದ್ಯಾಲಯವು ಈಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಮುಂದಿನ 70 ವರ್ಷದಲ್ಲಿ ಜಗತ್ತಿನ ಶೇ 92 ಜನರ ಭಾಷೆಗಳು ಹಿನ್ನೆಲೆಗೆ ಸರಿದು, ಶೇ 8ರಷ್ಟು ಜನರ ಭಾಷೆಗಳು ಮುನ್ನಲೆಗೆ ಬರುತ್ತವೆ ಎಂದು ತಿಳಿಸಿದ್ದು, ಇದು ಆತಂಕಕಾರಿ’ ಎಂದರು.
‘ಭಾಷೆ ಕುಸಿತ ಹಾಗೂ ಜಗತ್ತಿನ ಆರ್ಥಿಕ ಬೆಳವಣಿಗೆಗೂ ಗಾಢವಾದ ಸಂಬಂಧವಿದೆ. ಜಗತ್ತಿನ ಶೇ 92 ಜನರ ಸಂಪತ್ತು ಕೇವಲ ಶೇ 8 ಜನರ ಮೇಲಿರುತ್ತದೆ. ಹೀಗೆ ಸಂಪತ್ತು ಕ್ರೋಢೀಕರಣವಾಗುತ್ತಿದ್ದಂತೆ, ಪ್ರಭಾವಿ ಭಾಷೆಗಳು ಸೃಜನಶೀಲತೆ ಕಳೆದುಕೊಂಡು, ಜಾಹೀರಾತಿನ ಭಾಷೆಗಳಾಗುತ್ತವೆ. ಪ್ರಸ್ತುತ ಅನೇಕ ಭಾಷೆಗಳು ಆ ಹಾದಿಯಲ್ಲಿದ್ದು, ನಾವು ಭಾಷೆಗಳ ಸಾವಿಗೆ ಸಾಕ್ಷಿಯಾಗುತ್ತಿದ್ದೇವೆ. ಈ ಕ್ಲಿಷ್ಟ ಸಮಯದಲ್ಲಿ ಭಾಷೆಗಿರುವ ಆಯಾಮಗಳನ್ನು ತೆರೆದಿಡುವ ಕಾರ್ಯ ಆಗಬೇಕಿದೆ’ ಎಂದು ಹೇಳಿದರು.
ರಂಗಕರ್ಮಿ ಪ್ರಸನ್ನ ಮಾತನಾಡಿ, ‘ನಗರವು ಸಂಸ್ಕೃತಿಗೆ ವಿಮುಖವಾಗಿ ಮಾರುಕಟ್ಟೆಗೆ ಮುಖಮಾಡಿದೆ. ಕೊಂಚವಾದರೂ ಕನ್ನಡ, ಕೈಕಸುಬು ಸಂಸ್ಕೃತಿ ಉಳಿದಿರುವುದು ಗ್ರಾಮೀಣ ಭಾಗದಲ್ಲಿ. ಸಂತರಾದವರೆಲ್ಲರೂ ತಮ್ಮ ಕುಲ ಕಸುಬು ಬಿಡಲಿಲ್ಲ. ಮೇಲ್ಜಾತಿಯಿಂದ ಹೊರಬಂದು ಸಂತರಾದವರು ಭಿಕ್ಷುಕ ವೃತ್ತಿ ಹಿಡಿದು, ತಮ್ಮೊಳಗಿನ ಅಹಂಕಾರ ಮಣಿಸಬೇಕು ಎಂಬ ಸಂದೇಶ ಸಾರಿದರು. ನಾವೆಲ್ಲಾ ಆ ಸಂಸ್ಕೃತಿಯ ಭಾಗಗಳು. ಪರಂಪರೆ ಬಿಟ್ಟು ಸಾಗಬಾರದು’ ಎಂದರು.
‘ನಗರೀಕರಣದಲ್ಲಿ ಜನ ಬುದ್ಧಿ ಪ್ರಣೀತರಷ್ಟೇ ಆಗುತ್ತಿದ್ದಾರೆ. ಅವರಲ್ಲಿನ ಗ್ರಾಮೀಣತೆ, ಶ್ರಮ, ಸಂಸ್ಕೃತಿಯ ಕೊಂಡಿ ಕಳಚಿದ್ದು, ಇದು ಸಂಸ್ಕೃತಿಯ ವಿನಾಶಕ್ಕೆ ಕಾರಣವಾಗುತ್ತದೆ. ಈ ಕೊಂಡಿಯನ್ನು ಬೆಸೆಯುವ ಕೆಲಸವಾಗಬೇಕು’ ಎಂದು ಸಲಹೆ ನೀಡಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಭಾರತ ಸರ್ಕಾರದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ನಿವೃತ್ತ ಅಧಿಕಾರಿ ರವಿ ಜೋಷಿ, ತಾಳವಾದಕ ವಿದ್ವಾನ್ ಅನೂರ್ ಆರ್., ಅನಂತ ಕೃಷ್ಣ ಶರ್ಮ ಭಾಗವಹಿಸಿದ್ದರು.
‘ಎಲ್ಲಾ ಭಾಷೆಗಳನ್ನು ಕಲಿಯಬೇಕು ಆದರೆ ಮಾತೃ ಭಾಷೆಯಲ್ಲಿ ಕಂಡದನ್ನು ಮರೆತರೆ ಕಾಲು ನೆಲದ ಮೇಲೆ ಇರುವುದಿಲ್ಲ. ಆದ್ದರಿಂದಲೇ ಶ್ರೇಷ್ಠ ಬರಹಗಾರರು ಮಾತೃ ಭಾಷೆಯಲ್ಲಿ ಬರೆದರು. ನಂತರ ಅವು ಭಾಷಾಂತರವಾಯಿತು. ಕನ್ನಡದ ಭಾಷೆಯು ಶೇ 3.67 ವೇಗದಲ್ಲಿ ಬೆಳೆಯುತ್ತಿದೆ. ಆದರೆ ಹಿಂದಿ ಶೇ 67 ವೇಗದಲ್ಲಿ ಬೆಳೆಯುತ್ತಿದೆ. ಭಾಷೆಯ ಮಜಲುಗಳನ್ನು ಪರಿಚಯಿಸಲು ಉತ್ತರಾಯಣದಂತಹ ಕಾರ್ಯಕ್ರಮ ಮುಖ್ಯ’ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.