
ಮೈಸೂರಿನ ಜೆಎಸ್ಎಸ್ ಫಾರ್ಮಸಿ ಕಾಲೇಜಿನಲ್ಲಿ ಸೋಮವಾರ ನಡೆದ ದುಂಡು ಮೇಜಿನ ಸಭೆಯಲ್ಲಿ ಜಪಾನ್ ಪ್ರತಿನಿಧಿಗಳಾದ ಬ್ರಿಟ್ನಿ ಪಾರ್ಟಿನ್, ಟೊಕುಹಿರೊ ಅರಕಾವ, ಜೊಟಾರೊ ಸುನಹಾರಾ ಹಾಗೂ ಕೆಂಟ ಮಿಯೊಮೊಟೊ ಅವರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿನಂದಿಸಿದರು.
–ಪ್ರಜಾವಾಣಿ ಚಿತ್ರ
ಮೈಸೂರು: ‘ದೃಷ್ಟಿದೋಷವುಳ್ಳವರಿಗೆ ಅನುಕೂಲವಾಗುವಂತೆ ಔಷಧಗಳ ಮೇಲೆ ಕ್ಯುಆರ್ ಕೋಡ್ ಆಧಾರಿತ ಮಾಹಿತಿ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಲ್ಲಿನ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ಸೋಮವಾರ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಹಾಗೂ ಜಪಾನ್‌ನ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜಿಕಾ) ಸಹಯೋಗದಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.
‘ಜಪಾನ್‌ನಲ್ಲಿ ದೃಷ್ಟಿವಂಚಿತರಿಗೆ ಇಂತಹ ವ್ಯವಸ್ಥೆ ಬಳಕೆಯಲ್ಲಿದೆ. ಔಷಧದ ವಿವರ ಧ್ವನಿ ಮೂಲಕ ಸಿಗುತ್ತದೆ. ಭಾರತದಲ್ಲೂ ಜಪಾನ್ ಹಾಗೂ ಜೆಎಸ್ಎಸ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಬಗ್ಗೆ ಅಧ್ಯಯನ ನಡೆದಿರುವುದು ಉತ್ತಮ ಬೆಳವಣಿಗೆ. ಈ ಕ್ರಮದಿಂದ ಔಷಧ, ಅದರ ಬಳಕೆ, ಬೆಲೆ, ಅವಧಿ ಎಲ್ಲವೂ ದೃಷ್ಟಿವಂಚಿತರಿಗೂ ತಿಳಿಯಲಿದೆ. ಅನ್ಯರನ್ನು ಅವಲಂಬಿಸುವುದು ತಪ್ಪಲಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ’ ಎಂದರು.
‘ಔಷಧಗಳ ಮೇಲೆ ಕ್ಯುಆರ್ ಕೋಡ್ ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲಿಸಲಾಗುವುದು. ಫಾರ್ಮಾ ಕಂಪನಿಗಳೊಂದಿಗೆ ಚರ್ಚಿಸಲಾಗುವುದು. ಇದರಿಂದ ಕಂಪನಿಗಳಿಗೆ ಹೆಚ್ಚುವರಿ ವೆಚ್ಚ ಬೀಳುವುದಿಲ್ಲ. ಕಂಪನಿಗಳು ಮುಂದೆ ಬಂದರೆ ನೆರವು ಒದಗಿಸಲಾಗುವುದು’ ಎಂದರು.
ಕಾಲೇಜಿನ ಸಿಬ್ಬಂದಿ ಹರ್ಷ ಚಲಸಾನಿ, ‘ಜಪಾನ್‌ನ ಮಾದರಿ ಅನುಸರಿಸಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ 513 ಮಂದಿ ದೃಷ್ಟಿವಂಚಿತರ ಸಮೀಕ್ಷೆ ನಡೆಸಿದ್ದು, ಅವರಲ್ಲಿ 485 ಮಂದಿ ಮೊಬೈಲ್ ಬಳಸುತ್ತಿದ್ದು, ಕ್ಯುಆರ್ ಕೋಡ್ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ’ ಎಂದರು.
ಜಪಾನ್ ಪ್ರತಿನಿಧಿ ಬ್ರಿಟ್ನಿ ಪಾರ್ಟಿನ್, ‘ಜಪಾನ್‌ನ ಕೆಲವು ಪ್ರಸಿದ್ಧ ಕಂಪನಿಗಳು ಉತ್ಪನ್ನಗಳ ಮೇಲೆ ಕ್ಯುಆರ್ ಕೋಡ್ ಮುದ್ರಿಸುತ್ತಿದ್ದು, ಔಷಧಗಳ ಸಮಗ್ರ ಮಾಹಿತಿ ನೀಡುತ್ತಿವೆ. ಆದರೆ ಸರ್ಕಾರ ಕಡ್ಡಾಯಗೊಳಿಸಿಲ್ಲ. ತಂತ್ರಜ್ಞಾನ ಬಳಸಿ ಉತ್ತಮ ವೈದ್ಯಕೀಯ ಸೇವೆ ಒದಗಿಸುವುದೇ ಉದ್ದೇಶ’ ಎಂದು ವಿವರಿಸಿದರು.
ಯೋಜನೆಯ ಸಾಧ್ಯತೆಗಳ ಕುರಿತು ಜಪಾನ್ ಪ್ರತಿನಿಧಿಗಳಾದ ಟೊಕುಹಿರೊ ಅರಕಾವ, ಜೊಟಾರೊ ಸುನಹಾರಾ, ಕೆಂಟ ಮಿಯೊಮೊಟೊ ವಿವರಿಸಿದರು.
ಜೆಎಸ್‌ಎಸ್ ಎಎಚ್‌ಇಆರ್ ಕುಲಪತಿ ಡಾ.ಎಚ್.ಬಸನಗೌಡಪ್ಪ, ಕುಲಸಚಿವ ಡಾ. ಬಿ. ಮಂಜುನಾಥ, ಕಾಲೇಜು ಪ್ರಾಂಶುಪಾಲ ಡಾ. ಟಿ.ಎಂ. ಪ್ರಮೋದ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರಸ್ವಾಮಿ ಪಾಲ್ಗೊಂಡರು.
ದೃಷ್ಟಿವಂಚಿತರು ಜೀವನ ನಡೆಸಲು ಸಾಕಷ್ಟು ಸವಾಲು ಎದುರಿಸುತ್ತಿದ್ದಾರೆ. ಅವರು ಇತರರ ಮೇಲೆ ಅವಲಂಬಿಸುವುದನ್ನು ತಪ್ಪಿಸಲು ಈ ತಂತ್ರಜ್ಞಾನವು ಸಹಕಾರಿ ಆಗಲಿದೆ-ಡಾ. ಎಚ್. ಬಸನಗೌಡಪ್ಪ, ಕುಲಪತಿ ಜೆಎಸ್‌ಎಸ್ ಎಎಚ್‌ಇಆರ್