ADVERTISEMENT

ಎಚ್.ಡಿ.ಕೋಟೆ: ಹಕ್ಕಿ ವಲಸೆಗೂ ಮಳೆಯ ತೊಂದರೆ

ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣದ ಪಟ್ಟೆತಲೆ ಹೆಬ್ಬಾತುಗಳು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 2:42 IST
Last Updated 15 ಡಿಸೆಂಬರ್ 2021, 2:42 IST
ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನಲ್ಲಿ ಕಂಡುಬಂದ ಪಟ್ಟೆತಲೆ ಹೆಬ್ಬಾತುಗಳು (ಬಾರ್ ಹೆಡೆಡ್ ಗೀಸ್)
ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನಲ್ಲಿ ಕಂಡುಬಂದ ಪಟ್ಟೆತಲೆ ಹೆಬ್ಬಾತುಗಳು (ಬಾರ್ ಹೆಡೆಡ್ ಗೀಸ್)   

ಎಚ್.ಡಿ.ಕೋಟೆ: ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಪ್ರತಿವರ್ಷ ಕಂಡು ಬರುತ್ತಿದ್ದ ಪಟ್ಟೆತಲೆಯ ಹೆಬ್ಬಾತುಗಳು (ಬಾರ್‌ ಹೆಡೆಡ್ ಗೀಸ್) ನವೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಕಾಣದಾಗಿವೆ.

ಜಲಾಶಯದ ಅಕ್ಕಪಕ್ಕದ ರೈತರ ಜಮೀನುಗಳಲ್ಲಿ ಕಟಾವು ಮಾಡಿದ ಭತ್ತದ ಗದ್ದೆಗಳಲ್ಲಿ ಕಾಳುಗಳನ್ನು ತಿನ್ನುವ ಮೂಲಕ ಗೂಡು ಕಟ್ಟಿಕೊಂಡು ಸಂತಾನೋತ್ಪತ್ತಿ ಮಾಡಿಕೊಳ್ಳುತ್ತಿದ್ದವು. ಆದರೆ, ಈ ಬಾರಿ ಭತ್ತದ ಕಟಾವು ಸಹ ಇನ್ನೂ ಮುಗಿದಿಲ್ಲ. ನವೆಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭತ್ತ ಕಟಾವು ಪ್ರಕ್ರಿಯೆ ತಡವಾಯಿತು. ಇದರಿಂದ ವಲಸೆ ಪಕ್ಷಿಗಳಿಗೆ ತೊಂದರೆಯಾಗಿದೆ.

‘ಸಾಮಾನ್ಯವಾಗಿ ಹಿಮ ಹೆಚ್ಚಿರುವ ಭಾಗದಲ್ಲಿ ವಾಸಿಸುವ ಈ ಪಕ್ಷಿಗಳು ನವೆಂಬರ್ ತಿಂಗಳಲ್ಲಿಹಿಮಾಲಯ, ನೇಪಾಳ, ಚೀನಾದಿಂದ ಬರುತ್ತವೆ. ಇಲ್ಲಿನ ಹವಾಮಾನ ಚಳಿಯಿಂದ ಕೂಡಿದ್ದರೂ ಹಿಮಾಲಯದಷ್ಟು ಹೆಚ್ಚಾಗಿ ಇರುವುದಿಲ್ಲ. ಮಳೆಗಾಲ ಆರಂಭಕ್ಕೆ ಮುಂಚಿತವಾಗಿ ಇಲ್ಲಿಂದ ಪ್ರಯಾಣ ಬೆಳೆಸುತ್ತವೆ’ ಎಂದು ವನ್ಯಜೀವಿ ಛಾಯಾಗ್ರಾಹಕ ಜಿ.ಎಸ್.ರವಿಶಂಕರ್ ಹೇಳುತ್ತಾರೆ.

ADVERTISEMENT

ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಗದ್ದೆಯಲ್ಲಿ ಆಹಾರವನ್ನು ತಿನ್ನುತ್ತವೆ. ನಂತರ ಬಿಸಿಲು ಹೆಚ್ಚಾಗುತ್ತಿದ್ದಂತೆ ಕಬಿನಿ ಹಿನ್ನೀರು ಸೇರಿದಂತೆ ಸುತ್ತಮುತ್ತಲಿನ ಕೆರೆಗಳಲ್ಲಿ ಆಶ್ರಯ ಪಡೆಯುತ್ತವೆ. ಪುನಃ ಸಂಜೆ 5 ಗಂಟೆ ಹೊತ್ತಿಗೆ ಭತ್ತದ ಗದ್ದೆಗೆ ಹೋಗುತ್ತವೆ.

ಹಿಕ್ಕೆಯಿಂದ ಗೊಬ್ಬರ: ಒಂದೊಂದು ಗುಂಪಿನಲ್ಲಿ ಸಾವಿರಾರು ಬಾತುಗಳು ದಿನಕ್ಕೆ ನಾಲ್ಕರಿಂದ 5 ಗಂಟೆ ಗದ್ದೆಯಲ್ಲಿ ಇರುವುದರಿಂದ ಇವುಗಳ ಹಿಕ್ಕೆ ಜಮೀನಿಗೆ ಉತ್ತಮ ಗೊಬ್ಬರವಾಗುತ್ತದೆ.

‘ಚಳಿಗಾಲದ ಸಮಯದಲ್ಲಿ ಪಕ್ಷಿಗಳಿಗೆ ಹಿಮ ಪ್ರದೇಶಗಳಲ್ಲಿ ಅತಿಯಾದ ಹಿಮ ಬೀಳುವುದರಿಂದ ಆಹಾರ ಸಿಗುವುದಿಲ್ಲ. ಹಾಗಾಗಿ ಆಹಾರ ಮತ್ತು ಅತ್ಯುತ್ತಮ ಹವಾಮಾನಕ್ಕಾಗಿ ನಮ್ಮ ಕಡೆಗೆ ವಲಸೆ ಬರುತ್ತವೆ’ ಎಂದು ರೈತ ಪ್ರಭಾಕರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.