ADVERTISEMENT

ಮಳೆ, ಗಾಳಿ ಅಬ್ಬರ: ಮೈಸೂರಿನ ಜಯಪುರದಲ್ಲಿ ಧರೆಗುರುಳಿದ ವಿದ್ಯುತ್ ಕಂಬ, ಮರಗಳು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 2:05 IST
Last Updated 10 ಅಕ್ಟೋಬರ್ 2020, 2:05 IST
ಜಯಪುರ ಹೋಬಳಿಯ ಮಾರ್ಬಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಗೆ ಮರ, ವಿದ್ಯುತ್ ಕಂಬಗಳು ಧರೆಗುರುಳಿರುವುದು
ಜಯಪುರ ಹೋಬಳಿಯ ಮಾರ್ಬಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಗೆ ಮರ, ವಿದ್ಯುತ್ ಕಂಬಗಳು ಧರೆಗುರುಳಿರುವುದು   

ಜಯಪುರ: ಹೋಬಳಿಯಾದ್ಯಂತ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತಡವಾಗಿ ಬಿತ್ತನೆ ಮಾಡಿರುವ ರೈತರಿಗೆ ವರದಾನವಾದರೆ, ಈಗಾಗಲೇ ರಾಗಿ ಕೊಯ್ಲು ಮಾಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೀರಿಹುಂಡಿ, ಜಯಪುರ, ಮಾರ್ಬಳ್ಳಿ, ಶ್ರೀರಾಂಪುರ, ಹಾರೋಹಳ್ಳಿ, ಉದ್ಬೂರು, ಮದ್ದೂರು, ದೊಡ್ಡಕಾನ್ಯ ವ್ಯಾಪ್ತಿಯ ಗ್ರಾಮಗಳು ಸೇರಿದಂತೆ 3.4 ಸೆಂ.ಮೀ ಮಳೆಯಾಗಿದ್ದು ಹಲವೆಡೆ ಭಾರಿ ಗಾತ್ರದ ಮರಗಳು, ವಿದ್ಯುತ್ ಕಂಬಗಳು ಬಿರುಗಾಳಿ ಸಹಿತ ಭಾರಿ ಮಳೆಗೆ ಧರೆಗುರುಳಿವೆ.

ಮಾರ್ಬಳ್ಳಿ ಗ್ರಾಮದಲ್ಲಿ ತರಕಾರಿ ಬೆಳೆಗಳು, ತೋಟಗಾರಿಕೆ ಬೆಳೆ ಬಾಳೆ ಗಿಡಗಳು ಮುರಿದು ಬಿದ್ದಿದ್ದು, ಕಷ್ಟ ಕಾಲದಲ್ಲೂ ಬೆಳೆಗಳಿಗೆ ಅಪಾರ ಹಾನಿಯುಂಟಾಗಿದೆ ಎಂದು ಮಾರ್ಬಳ್ಳಿ ರೈತ ಕುಮಾರ್ ಸಮಸ್ಯೆ ಹೇಳಿದರು.

ADVERTISEMENT

ಹಿಂಗಾರು ಮಳೆಯ ಅಬ್ಬರಕ್ಕೆ ತೊಗರಿಬೆಳೆ, ಅವರೆ ಮುಂತಾದ ಬೆಳೆಗಳು ಚೇತರಿಕೆ ಪಡೆದುಕೊಂಡಿವೆ. ರೈತರು ಮಳೆಯಾಶ್ರಿತವಾಗಿಯೆ ಟೊಮೊಟೊ ಸಸಿಗಳನ್ನು ನಾಟಿ ಮಾಡಿದ್ದಾರೆ. ಬೆಂಡೇಕಾಯಿ, ಬೀನ್ಸ್‌ ಬೀಜಗಳನ್ನು ಹಾಕಿದ್ದಾರೆ.

ಶುಕ್ರವಾರವೂ ಸಂಜೆಯ ವೇಳೆಗೆ ಆರಂಭವಾದ ಮಳೆಯು, ಸತತವಾಗಿ ಸುರಿಯತ್ತಿದ್ದು, ಹಳ್ಳಕೊಳ್ಳಗಳು ತುಂಬಿಕೊಂಡಿದ್ದು, ಜಮೀನುಗಳಲ್ಲಿ ನೀರು ನಿಂತಿದೆ. ಜಯಪುರ ಗ್ರಾಮವೊಂದರ ತೆಂಗಿನ ಮತ್ತು ಬಾಳೆ ತೋಟಗಳಲ್ಲಿ ಸತತ ಮಳೆಗೆ ನೀರು ನಿಂತು ತೇವಾಂಶ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.