ಮೈಸೂರು: ‘ರಾಜೀವ್ ಗಾಂಧಿ ನಮ್ಮನ್ನು ಅಗಲಿ 34 ವರ್ಷ ಕಳೆದರೂ, ಅವರು ದೇಶಕ್ಕೆ ನೀಡಿದ ಕೊಡುಗೆಗಳಿಂದ ಇಂದಿಗೂ ಚಿರಸ್ಥಾಯಿಯಾಗಿ ನಮ್ಮ ನಡುವೆ ಉಳಿದಿದ್ದಾರೆ’ ಎಂದು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ತಿಳಿಸಿದರು.
ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರ 34ನೇ ಸದ್ಭಾವನಾ ಯಾತ್ರೆ ಜ್ಯೋತಿಯನ್ನು ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಬರಮಾಡಿಕೊಂಡು ಮಾತನಾಡಿದರು.
‘ರಾಜೀವ್ ಗಾಂಧಿ ಸಂಪರ್ಕ ಕ್ರಾಂತಿ ಮೂಲಕ ಭಾರತಕ್ಕೆ ತಂತ್ರಜ್ಞಾನದ ಆಧುನಿಕ ಸ್ಪರ್ಶವನ್ನು ಕೊಟ್ಟು, 18 ವರ್ಷಕ್ಕೆ ಮತದಾನದ ಹಕ್ಕನ್ನು ಜಾರಿಗೊಳಿಸಿದರು. 73 ಮತ್ತು 74ನೇ ಸಂವಿಧಾನಾತ್ಮಕ ತಿದ್ದುಪಡಿಗೆ ಅಡಿಗಲ್ಲು ಹಾಕಿದರು. ಇಂದು ಭಾರತ ಭಯೋತ್ಪಾದನೆಯ ವಿರುದ್ಧ ಸಿಡಿದೆದ್ದು ಜಯವನ್ನು ಸಾಧಿಸಿದೆ. ಇದಕ್ಕೆ ಕಾರಣರಾದ ಎಲ್ಲಾ ಸೈನಿಕರಿಗೆ ಕೃತಜ್ಞತೆ ಸಲ್ಲಿಸಬೇಕಾಗಿರುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.
‘ಭಯೋತ್ಪಾದನೆಯು ಅಶಾಂತಿ ಮತ್ತು ಅಸ್ಥಿರತೆಯ ಸಂಕೇತ. ಹೀಗಾಗಿ ರಾಜೀವ್ ಗಾಂಧಿ ಮಡಿದ ದಿನವನ್ನು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ ಎಂದು ಘೋಷಸಿ ಭಯೋತ್ಪಾದನೆಯ ವಿರುದ್ಧ ಸಮರ ಸಾರಿ ಶಾಂತಿ ಮತ್ತು ಸ್ಥಿರತೆಯನ್ನು ರಾಷ್ಟ್ರದಲ್ಲಿ ನಿರ್ಮಾಣ ಮಾಡುವ ಸಂಕಲ್ಪವನ್ನು ಈ ರಥಯಾತ್ರೆ ಹೊಂದಿದೆ’ ಎಂದರು.
ಸದ್ಭಾವನ ಯಾತ್ರಾ ಸಮಿತಿ ರಾಜ್ಯ ಸಂಚಾಲಕ ದೊರೆ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ನಗರ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಗುಡಪ್ಪ, ಶಿವಣ್ಣ, ಡಿಸಿಸಿ ಉಪಾಧ್ಯಕ್ಷ ಎಡತಲೆ ಮಂಜುನಾಥ್, ಪುಷ್ಪಲತಾ ಚಿಕ್ಕಣ್ಣ, ಮಾಜಿ ಮೆಯರ್ ಚಿಕ್ಕಣ್ಣ, ಎಂ. ಶಿವಪ್ರಸಾದ್, ಹುಣಸೂರು ಬಸವಣ್ಣ, ಡೈರಿ ವೆಂಕಟೇಶ್, ಸಾ.ಮಾ ಯೋಗೇಶ್, ನಾಗೇಶ್, ಶಿವಶಂಕರಮೂರ್ತಿ, ನಾಗರಾಜು ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.