ADVERTISEMENT

ಮೈಸೂರು: ರಸ್ತೆ ಅಪಘಾತದ ಗಾಯಾಳುವಿಗಾಗಿ ‘ರಕ್ಷಾ ಕ್ಯೂಆರ್’

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 14:16 IST
Last Updated 23 ಜೂನ್ 2023, 14:16 IST
   

ಮೈಸೂರು: ಹೈವೇ ಡಿಲೈಟ್ ಡಿಜಿಟಲ್ ಸೇವಾ ವೇದಿಕೆಯಿಂದ (ಆ್ಯಪ್) ರಸ್ತೆ ಅಪಘಾತಕ್ಕೆ ತುತ್ತಾದವರ ರಕ್ಷಣೆಗಾಗಿ ‘ರಕ್ಷಾ ಕ್ಯೂಆರ್’ ಎಂಬ ನೂತನ ಸೌಲಭ್ಯ ನೀಡಲಾಗುತ್ತಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೈವೇ ಡಿಲೈಟ್ ಆ್ಯಪ್‌ನ ಗ್ರಾಹಕ ಸಂಪರ್ಕಾಧಿಕಾರಿ ಶೋಭಾ ಮಾತನಾಡಿ, ‘ಭಾರತದಲ್ಲಿ ಪ್ರತಿ ವರ್ಷ 1.5 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಸ್ಪಂದಿಸಿದರೆ ಇವರಲ್ಲಿ ಶೇ 50ರಷ್ಟು ಜನರನ್ನು ಬದುಕಿಸಬಹುದು. ಇಂಥ ಸ್ಪಂದನೆಗೆ ರಕ್ಷಾ ಕ್ಯೂಆರ್ ಸಹಕಾರ ನೀಡುತ್ತದೆ’ ಎಂದು ತಿಳಿಸಿದರು.

‘ಇದೊಂದು ಕ್ಯೂಆರ್ ಕೋಡ್ ಆಗಿದ್ದು, ವಾಹನಕ್ಕೆ ಅಂಟಿಸಬಹುದಾಗಿದೆ. ಇದರಲ್ಲಿ ಗಾಡಿ ಮಾಲೀಕರ ಸಂಪೂರ್ಣ ಮಾಹಿತಿಯಿದ್ದು, ತುರ್ತು ಕರೆಗೆ ಅವಕಾಶವಿರುತ್ತದೆ. ವಾಹನ ಅಪಘಾತದ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಕೋಡ್ ಸ್ಕ್ಯಾನ್ ಮಾಡಿ ಅಪಘಾತಕ್ಕೊಳಗಾದ ವ್ಯಕ್ತಿಯ ಮನೆಗೆ ಕರೆ ಮಾಡಬಹುದು. ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯ ತಂಡವು ಕಾರ್ಯನಿರ್ವಹಿಸುತ್ತಾ ಅಪಘಾತದ ಸ್ಥಳ ಹಾಗೂ ಅಗತ್ಯ ಮಾಹಿತಿಯನ್ನು ಸಮೀಪದ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆಗೆ ನೀಡುತ್ತದೆ. ಕರೆ ಮಾಡಿದ ವ್ಯಕ್ತಿಯ ಮಾಹಿತಿಯನ್ನ ಗೋಪ್ಯವಾಗಿಡಲಾಗುತ್ತದೆ. ಕುಟುಂಬದವರಿಗೂ ಮೊಬೈಲ್ ಸಂಖ್ಯೆ ಕಾಣುವುದಿಲ್ಲ’ ಎಂದರು.

ADVERTISEMENT

‘ಆಸಕ್ತರು ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ‘ಹೈವೇ ಡಿಲೈಟ್’ ಎಂಬ ಆ್ಯಪ್ ಬಳಸಿ, ‘ರಕ್ಷಾ ಕ್ಯೂಆರ್ ಕೋಡ್’ ಪಡೆಯಬಹುದು’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆ್ಯಪ್ ಸಿಬ್ಬಂದಿ ಮಲ್ಲಣ್ಣ, ರಕ್ಷಿತ್, ಇಬ್ರಾಹಿಂ, ಮುರಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.