
ಮೈಸೂರು: ‘ರನ್ನನ ಗದಾಯುದ್ಧ ಕಾವ್ಯವು ಮನುಷ್ಯ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವ ಪ್ರಕ್ರಿಯೆಯನ್ನು ಮನೋಜ್ಞವಾಗಿ ಬಿಂಬಿಸುತ್ತದೆ’ ಎಂದು ಪ್ರೊ.ಎಸ್.ಡಿ.ಶಶಿಕಲಾ ಅಭಿಪ್ರಾಯಪಟ್ಟರು.
ಇಲ್ಲಿನ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟನೆಗೊಂಡ ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗದ ಪ್ರಚಾರೋಪನ್ಯಾಸ ಮಾಲೆಯಲ್ಲಿ ‘ರನ್ನನ ಗದಾಯುದ್ಧ– ಅಸ್ತಿತ್ವದ ಚಹರೆಗಳು ಮತ್ತು ಪ್ರಶ್ನೆಗಳು’ ಕುರಿತು ಮಾತನಾಡಿದರು.
‘ಕಾವ್ಯದಲ್ಲಿ ಕವಿಯ ತನ್ನ ಅಸ್ತಿತ್ವವನ್ನು ಪರಿಚಯಿಸುತ್ತಲೇ ತನ್ನ ಪೋಷಕರಾದ ಚಾಲುಕ್ಯ ಚಕ್ರವರ್ತಿಗಳ ಅಸ್ತಿತ್ವವನ್ನು ಪರಿಚಯಿಸುತ್ತಾನೆ. ಚಾಲುಕ್ಯ ದೊರೆ ಸತ್ಯಾಶ್ರಯನನ್ನು ಭೀಮನಿಗೆ ಹೋಲಿಸಿ ಕಾವ್ಯ ಬರೆಯುತ್ತಾನೆ. ಆದರೆ ಇಡೀ ಕಾವ್ಯದ ಪ್ರಮುಖ ಪಾತ್ರವಾಗಿ ದುರ್ಯೋಧನ ಪ್ರಸ್ತುತಗೊಳ್ಳುತ್ತಾನೆ’ ಎಂದು ವಿವರಿಸಿದರು.
‘ಭೀಮನ ಪರಿಚಯವು ಆತನ ಪ್ರತಿಜ್ಞೆಗಳಿಂದ ಉಂಟಾದ ಅಸ್ತಿತ್ವವಾಗಿದೆ. ಹಾಗೆಯೇ ದ್ರೌಪದಿಯ ಅಸ್ತಿತ್ವವು ಭೀಮನು ಆಕೆಗಾಗಿ ಮಾಡಲ್ಪಟ್ಟ ಕಾರ್ಯಗಳಲ್ಲಿ ನಿಂತಿವೆ. ಇನ್ನೂ ಮೂಲಕ್ಕೆ ಹೋದರೆ ಅವಳ ಅಸ್ತಿತ್ವದ ಅನನ್ಯತೆ ಇರುವುದು ದುರ್ಯೋಧನನ ಸಾವಿನಲ್ಲಿ. ಈ ಎಲ್ಲ ಸನ್ನಿವೇಶದಲ್ಲಿ ಪಾತ್ರಗಳು ಎದುರಿಸುವ ಪ್ರಶ್ನೆಗಳು, ತಲ್ಲಣಗಳು ಅಧ್ಯಯನ ಯೋಗ್ಯವಾಗಿವೆ. ಮನುಷ್ಯನ ಭಾವನೆಗಳನ್ನು ಅರಿಯುವಲ್ಲಿ ಪ್ರಸ್ತುತವಾಗುತ್ತವೆ’ ಎಂದರು.
ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಮಾತನಾಡಿ, ‘ಪ್ರಚಾರೋಪನ್ಯಾಸ ಮಾಲೆ ಪ್ರಸಾರಾಂಗದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇಲ್ಲಿನ ಜ್ಞಾನವನ್ನು ಉಪನ್ಯಾಸ, ಪ್ರಕಟಣೆ ಮೂಲಕ ಪ್ರಸಾರ ಮಾಡುವುದು ಇದರ ಆಶಯ. ವಿಶ್ವಮಟ್ಟದಲ್ಲಿ ಇದು ಮೈಸೂರು ವಿಶ್ವವಿದ್ಯಾಲಯದ ಪ್ರಯೋಗ ಎಂದೇ ಹೆಸರುವಾಸಿಯಾಗಿದೆ. ಈ ಮಾಲೆಯಲ್ಲಿ ಈಗಾಗಲೇ 435ಕ್ಕೂ ಅಧಿಕ ಗ್ರಂಥಗಳು ಪ್ರಕಟವಾಗಿದೆ’ ಎಂದರು.
‘ಕವಿ ಕುವೆಂಪು ಆಲೋಚನೆಯಲ್ಲಿ ಆರಂಭಗೊಂಡ ಪ್ರಸಾರಾಂಗವು ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಜ್ಞಾನ ಹರಡುವ ಉದ್ದೇಶ ಹೊಂದಿದೆ. ಎಲ್ಲರನ್ನು ತಲುಪಲು ಸದಾ ಪ್ರಯತ್ನಿಸುತ್ತಿದೆ’ ಎಂದರು.
ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸ ಮಾಲೆ ಉದ್ಘಾಟಿಸಿದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ್ ಮಾತನಾಡಿ ‘ಪ್ರಸಾರಾಂಗವು ಹೆಚ್ಚಿನ ಕಾರ್ಯಾಗಾರಗಳನ್ನು ಆಯೋಜಿಸಲು ಮುಂದಾದರೆ ‘ರೂಸಾ’ದಿಂದ ಅಗತ್ಯ ಅನುದಾನ ನೀಡಲಾಗುವುದು. ಪುಸ್ತಕ ಪ್ರಕಟಣೆಗೂ ಸಹಕರಿಸಲಾಗುವುದು’ ಎಂದು ಭರವಸೆ ನೀಡಿದರು. ‘ಪ್ರಕಟಗೊಂಡ ಅನೇಕ ಪುಸ್ತಕಗಳನ್ನು ಬಳಸದೇ ಇರುವುದು ಕಂಡುಬಂದಿದೆ. ಅಗತ್ಯವುಳ್ಳವರಿಗೆ ಇದನ್ನು ತ್ವರಿತವಾಗಿ ತಲುಪಿಸಲು ಕ್ರಮವಹಿಸಬೇಕು. ವಿಶ್ವವಿದ್ಯಾಲಯ ಅಧೀನ ಕಾಲೇಜುಗಳಿಗೆ ನೀಡಲು ಅವಕಾಶವಿದ್ದು ಸೂಕ್ತ ಯೋಜನೆ ತಯಾರಿಸಬೇಕು. ಹಾಗೆಯೇ ಇಲ್ಲಿನ ಪುಸ್ತಕಗಳನ್ನು ಪರಿಚಯಿಸಲು ಒಂದು ಕಾರ್ಯಾಗಾರವೂ ಅಗತ್ಯ’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.