ADVERTISEMENT

ಮೈಸೂರು: ಸ್ಪಂದಿಸದ ಅಧಿಕಾರಿಗಳು, ಕೆಲವೆಡೆ ಕಾರ್ಡ್‌ಗೆ ₹10 ವಸೂಲಿ

ಪಡಿತರ ವಿತರಣೆಯ ಅಂಕಿ–ಅಂಶದಲ್ಲಿ ರಾಜ್ಯದಲ್ಲೇ 4ನೇ ಸ್ಥಾನ ಮೈಸೂರಿಗೆ; ಸಾಮಾಜಿಕ ಅಂತರ ಅಷ್ಟಕ್ಕಷ್ಟೇ...

ಡಿ.ಬಿ, ನಾಗರಾಜ
Published 10 ಏಪ್ರಿಲ್ 2020, 19:30 IST
Last Updated 10 ಏಪ್ರಿಲ್ 2020, 19:30 IST
ಹೂಟಗಳ್ಳಿಯ ನ್ಯಾಯಬೆಲೆ ಅಂಗಡಿಯೊಂದರ ಮುಂಭಾಗ ಪಡಿತರಕ್ಕಾಗಿ ಸರತಿ ಸಾಲಿನಲ್ಲಿದ್ದ ಜನರು
ಹೂಟಗಳ್ಳಿಯ ನ್ಯಾಯಬೆಲೆ ಅಂಗಡಿಯೊಂದರ ಮುಂಭಾಗ ಪಡಿತರಕ್ಕಾಗಿ ಸರತಿ ಸಾಲಿನಲ್ಲಿದ್ದ ಜನರು   

ಮೈಸೂರು: ಲಾಕ್‌ಡೌನ್‌ನ ಸಂಕಷ್ಟದಲ್ಲಿ ಸಿಲುಕಿರುವ ಬಡ ಕುಟುಂಬಗಳಿಗೆ ಆಸರೆಯಾಗಲು ರಾಜ್ಯ ಸರ್ಕಾರದ ಸೂಚನೆಯಂತೆ ಆಹಾರ ಇಲಾಖೆ ಏಪ್ರಿಲ್‌, ಮೇ ತಿಂಗಳ ಪಡಿತರವನ್ನು ಒಟ್ಟಿಗೆ ವಿತರಿಸುತ್ತಿದೆ. ಲಭ್ಯವಿರುವ ಅಂಕಿ–ಅಂಶಗಳ ಪ್ರಕಾರ ಈ ಪಡಿತರ ವಿತರಣೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ನಾಲ್ಕನೇ ಸ್ಥಾನ ಪಡೆದಿದೆ.

ಆದರೆ ನಗರವೂ ಸೇರಿದಂತೆ ಜಿಲ್ಲೆಯ ನಗರ/ಪಟ್ಟಣ/ಗ್ರಾಮೀಣ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿಗಳು ಸೇರಿದಂತೆ ಆಹಾರ ಇಲಾಖೆ ಸಿಬ್ಬಂದಿಯ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

‘ನಿತ್ಯವೂ ಬೆಳಿಗ್ಗೆ 7ರಿಂದ ರಾತ್ರಿ 8 ಗಂಟೆಯವರೆಗೂ ಬಾಗಿಲು ತೆರೆದು ನ್ಯಾಯಬೆಲೆ ಅಂಗಡಿಗಳು ಪಡಿತರ ವಿತರಿಸಬೇಕು ಎಂದು ಆಹಾರ ಇಲಾಖೆ ಸೂಚಿಸಿದ್ದರೂ, ಕೆಲ ಅಂಗಡಿ ಮಾಲೀಕರು ನಾಲ್ಕೈದು ದಿನದೊಳಗೆ ಪಡಿತರ ತೆಗೆದುಕೊಂಡು ಹೋಗಬೇಕು. ನಂತರ ಬಂದವರಿಗೆ ವಿತರಿಸಲ್ಲ ಎಂದು ಮೌಖಿಕವಾಗಿ ಹುಕುಂ ಹೊರಡಿಸಿದ್ದಾರೆ. ಇದರಿಂದ ಪಟ್ಟಣ/ಗ್ರಾಮೀಣ ಪ್ರದೇಶದ ಬಹುತೇಕ ನ್ಯಾಯಬೆಲೆ ಅಂಗಡಿಗಳ ಮುಂಭಾಗ ಜನದಟ್ಟಣೆ ಜಮಾಯಿಸುತ್ತಿದೆ.’

ADVERTISEMENT

‘ಕೊರೊನಾ ವೈರಾಣು ಸಾಂಕ್ರಾಮಿಕವಾಗಿ ಹಬ್ಬುವ ಆತಂಕದ ನಡುವೆಯೂ, ನ್ಯಾಯಬೆಲೆ ಅಂಗಡಿ ಮಾಲೀಕರ ಮೌಖಿಕ ಹುಕುಂನಿಂದ ಬಡವರು ಪಡಿತರಕ್ಕಾಗಿ ಜಾತ್ರೆಗೆ ಸೇರಿದಂತೆ ಅಂಗಡಿ ಮುಂಭಾಗ ಸೇರುತ್ತಿದ್ದಾರೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ರವಿ ಹೂಟಗಳ್ಳಿ.

‘ಮೈಸೂರಿಗೆ ಹೊಂದಿಕೊಂಡಂತಿರುವ ಹೂಟಗಳ್ಳಿಯಲ್ಲಿ ಮೂರು ನ್ಯಾಯಬೆಲೆ ಅಂಗಡಿಗಳಿವೆ. ಇದರಲ್ಲಿ ಎರಡು ಅಂಗಡಿಗಳು ಇಲಾಖೆಯ ಸೂಚನೆಯಂತೆ ಪಡಿತರ ವಿತರಿಸಿದರೆ, ಇನ್ನೊಂದು ಅಂಗಡಿಯವರು ಪ್ರತಿ ಕಾರ್ಡ್‌ದಾರರು ₹ 10 ಕೊಟ್ಟರೆ ಮಾತ್ರ ಪಡಿತರ ಕೊಡುತ್ತಾರೆ. ಇದನ್ನು ಕಡ್ಡಾಯಗೊಳಿಸಿದ್ದಾರೆ. ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ಪಡಿತರವನ್ನೇ ಕೊಡಲ್ಲ. ನಮ್ಮ ಅಳಲನ್ನು ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದನೆ ಸಿಗದಾಗಿದೆ’ ಎಂಬ ದೂರು ರವಿ (ನಿಂಗಮ್ಮ ಮೊಮ್ಮಗ) ಅವರದ್ದು.

ಗ್ರಾಮೀಣ ಪ್ರದೇಶದ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ತರಲು ಹೋದರೆ, ಸೋಪು, ಊದುಬತ್ತಿಯನ್ನು ಕಡ್ಡಾಯವಾಗಿ ಖರೀದಿಸಲೇಬೇಕು ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಇವನ್ನು ದುಡ್ಡು ಕೊಟ್ಟು ಖರೀದಿಸದಿದ್ದರೆ ಪಡಿತರವನ್ನೇ ಕೊಡದ ದೂರುಗಳು ಸಾಕಷ್ಟು ಕೇಳಿ ಬಂದಿವೆ. ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಹೇಳಿ ವಾಪಸ್‌ ಕಳುಹಿಸುವುದು ನಡೆದಿದೆ.

‘ಪ್ರತಿ ಹಳ್ಳಿಗೂ ಪಡಿತರ ತಲುಪಿಸುವುದಾಗಿ ಆಹಾರ ಇಲಾಖೆಯ ಅಧಿಕಾರಿಗಳು ಹೇಳಿಕೆ ನೀಡಿದರೂ; ಜಿಲ್ಲೆಯ ಬಹುತೇಕ ಗ್ರಾಮಗಳಿಗೆ ಇಂದಿಗೂ ಪಡಿತರ ವಿತರಣೆಯಾಗಿಲ್ಲ. ವಯೋವೃದ್ಧರು ದೂರದ ಊರಲ್ಲಿರುವ ನ್ಯಾಯಬೆಲೆ ಅಂಗಡಿಗೆ ಹೋಗಿ ಎರಡು ತಿಂಗಳ ಪಡಿತರವನ್ನು ಹೊತ್ತು ತರವುದು ಸಾಧ್ಯವಾಗ್ತಿಲ್ಲ. ನಮ್ಮ ನೆರವಿಗೆ ಯಾರೊಬ್ಬರು ಬಾರದಾಗಿದ್ದಾರೆ’ ಎಂಬ ಅಳಲು ಪಿರಿಯಾಪಟ್ಟಣ ತಾಲ್ಲೂಕಿನ ಕುಂದನಹಳ್ಳಿಯ ಶಿವಣ್ಣ ಅವರದ್ದು.

6 ನ್ಯಾಯಬೆಲೆ ಅಂಗಡಿಗೆ ನೋಟಿಸ್
‘ಸೋಪು, ಊದುಬತ್ತಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದ ಹಾಗೂ ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಗ್ರಾಹಕರಿಗೆ ಪಡಿತರ ಕೊಡದೆ ವಾಪಸ್‌ ಕಳುಹಿಸುತ್ತಿದ್ದ ಜಿಲ್ಲೆಯಲ್ಲಿನ 6 ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್ ಕೊಡಲಾಗಿದೆ’ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಪಿ.ಶಿವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ನ್ಯಾಯಬೆಲೆ ಅಂಗಡಿ ಮುಂಭಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೊಲೀಸರ ನೆರವು ಪಡೆಯಲಾಗಿದೆ. ಆಯಾ ಭಾಗದ ಫುಡ್‌ ಇನ್ಸ್‌ಪೆಕ್ಟರ್‌ಗಳು ಸಹ ಅಂಗಡಿಯವರಿಗೆ ಹಾಗೂ ಗ್ರಾಹಕರಿಗೆ ಈ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ಹೊತ್ತು ತರೋರು ಯಾರು..?
‘ನಮ್ಮನೆಯಲ್ಲಿ ಗಂಡು ಮಕ್ಕಳಿಲ್ಲ. ನಾನು, ಇಬ್ಬರು ಮಕ್ಕಳಷ್ಟೇ ಇರೋದು. ನಮ್ಮೂರಿನಿಂದ 3 ಕಿ.ಮೀ. ದೂರ ಇರುವ ಪುಢಾನಹಳ್ಳಿಯಲ್ಲಿ ನ್ಯಾಯಬೆಲೆ ಅಂಗಡಿಯಿದೆ. ಎರಡು ತಿಂಗಳ ಪಡಿತರವನ್ನು ನನ್ನಿಂದ ಹೊತ್ತು ತರೋದು ಸಾಧ್ಯವೇ ? ನಮ್ಮೂರಲ್ಲೇ ಅಕ್ಕಿ–ಗೋಧಿ ಕೊಡಿ ಎಂದು ಅಧಿಕಾರಿಗಳಿಗೆ ಗೋಗರೆದರೂ ಕಿಂಚಿತ್ ಸ್ಪಂದಿಸುತ್ತಿಲ್ಲ. ನಿತ್ಯವೂ ಫೋನ್ ಮಾಡಿ ಸಂಕಟ ಹೇಳಿಕೊಂಡರೂ ಪ್ರಯೋಜನವಾಗದಾಗಿದೆ’ ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಕುಂದನಹಳ್ಳಿಯ ಸಾಕಮ್ಮ ಅಲವತ್ತುಕೊಂಡರು.

ಮೈಸೂರು ಜಿಲ್ಲೆಯ ಪಡಿತರ ಚಿತ್ರಣ

1011: ನ್ಯಾಯಬೆಲೆ ಅಂಗಡಿಗಳು ಜಿಲ್ಲೆಯಲ್ಲಿ

1010: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ

7,06,197: ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌

4,47,697: ಬಿಪಿಎಲ್ ಕುಟುಂಬಗಳಿಗೆ ಪಡಿತರ ವಿತರಣೆ

50,444:ಕುಟುಂಬಗಳಿಗೆ ಅಂತ್ಯೋದಯ ಕಾರ್ಡ್‌

ಆಧಾರ: ಆಹಾರ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.