
ಧರ್ಮಾಪುರ: ಸಮೀಪದ ರತ್ನಪುರಿಯಲ್ಲಿ ಶನಿವಾರ ಆಂಜನೇಯ ಸ್ವಾಮಿ ಕೊಂಡೋತ್ಸವ, ಭಾನುವಾರ ಜಮಾಲ್ ಬೀಬಿ ಗಂಧೋತ್ಸವ ನಡೆಯಲಿದೆ.
ಗ್ರಾಮಸ್ಥರು ಕಳೆದ 62 ವರ್ಷಗಳಿಂದ ಎರಡೂ ಉತ್ಸವಗಳನ್ನು ಯಾವುದೇ ಗಲಾಟೆಗಳಿಲ್ಲದೇ ಆಚರಿಸಿಕೊಂಡು ಬರುತ್ತಿದ್ದಾರೆ.
ಹಿಂದೂ ಸಮುದಾಯದವರು ನಡೆಸುವ ಆಂಜನೇಯ ಉತ್ಸವ, ಕೊಂಡೋತ್ಸವ ಹಾಗೂ ಮೆರವಣಿಗೆಯಲ್ಲಿ ಮುಸ್ಲಿಮರು ಪಾಲ್ಗೊಳ್ಳುತ್ತಾರೆ. ಜಮಾಲ್ ಬೀಬಿ ಅಮ್ಮನವರ ಗಂಧೋತ್ಸವದಲ್ಲಿ ಹಿಂದೂಗಳು ಭಾಗವಹಿಸುತ್ತಾರೆ.
ಧರ್ಮಾಪುರದ ಗ್ರಾಮಸ್ಥರು ಶನಿವಾರ ಆಂಜನೇಯ ಸ್ವಾಮಿಯ ಕೊಂಡೋತ್ಸವ ನಡೆಸಿಕೊಡಲಿದ್ದಾರೆ. ಬೆಳಿಗ್ಗೆ 7ಕ್ಕೆ ದೇವಿ ಕೆರೆಯಿಂದ ಪೂಜಾ ಕಾರ್ಯಕ್ರಮಗಳನ್ನು ಮುಗಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿಕೊಂಡು 9 ಗಂಟೆಗೆ ಕೊಂಡೋತ್ಸವ ನಡೆಯಲಿದೆ. ನಂತರ ಮಹಾಮಂಗಳಾರತಿ ನಡೆಯಲಿದೆ. ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಗುತ್ತದೆ.
ಭಾನುವಾರ ಉರುಸ್: ಸಮೀಪದ ಕುಡಿ ನೀರು ಮುದ್ದನಹಳ್ಳಿಯಿಂದ ಗಂಧವನ್ನು ಮೆರವಣಿಗೆಯಲ್ಲಿ ತಂದು, ಮಸೀದಿಗೆ ಪೂಜೆ ಸಲ್ಲಿಸಿ ಭಾನುವಾರ ರಾತ್ರಿ ಗಂಧೋತ್ಸವ ನಡೆಯಲಿದೆ.
ಜಾತ್ರೆ ಪ್ರಯುಕ್ತ ಶನಿವಾರ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿ, ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
‘ರತ್ನಪುರಿಯಲ್ಲಿ ಎಲ್ಲಾ ಸಮುದಾಯದವರು ಅಣ್ಣ ತಮ್ಮಂದಿರಂತೆ ವಾಸಿಸುತ್ತಿದ್ದು, 60 ವರ್ಷಗಳಿಂದ ಸೌಹಾರ್ದದಿಂದ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ’ ಎಂದು ಆಂಜನೇಯ ಸ್ವಾಮಿ ಜಾತ್ರಾ ಸಮಿತಿ ಅಧ್ಯಕ್ಷ ಪ್ರಭಾಕರ್ ತಿಳಿಸಿದರು.
‘ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ ಹಾಗೂ ಜಮಾಲ್ ಬೀಬಿ ಅಮ್ಮನವರ ಗಂಧೋತ್ಸವದಲ್ಲಿ ಹಿಂದೂ ಹಾಗೂ ಮುಸ್ಲಿಮರು ಒಟ್ಟಾಗಿ ಭಾಗವಹಿಸಿ ಮಾದರಿಯಾಗಿದ್ದೇವೆ’ ಎಂದು ಜಮಾಲ್ ಬೇಬಿ ಅಮ್ಮನವರ ಸಮಿತಿ ಅಧ್ಯಕ್ಷ ಅಜ್ಗರ್ ಪಾಷ ಹೇಳಿದರು.