ADVERTISEMENT

ಮೈಸೂರು | 3.28 ಕೋಟಿ ಕೆ.ಜಿ ’ಎಲೆ ತಂಬಾಕು’ ಮಾರಾಟ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 15:55 IST
Last Updated 4 ಡಿಸೆಂಬರ್ 2023, 15:55 IST
<div class="paragraphs"><p>ತಂಬಾಕು ಹರಾಜು ಪ್ರಕ್ರಿಯೆ</p></div>

ತಂಬಾಕು ಹರಾಜು ಪ್ರಕ್ರಿಯೆ

   

ಸಂಗ್ರಹ ಚಿತ್ರ

ಮೈಸೂರು: ರಾಜ್ಯದಲ್ಲಿರುವ ತಂಬಾಕು ಮಂಡಳಿಯ ಎಲ್ಲಾ 10 ಹರಾಜು ಮಾರುಕಟ್ಟೆಗಳಲ್ಲಿ ಎಫ್‌ಸಿವಿ ತಂಬಾಕಿನ ಹರಾಜು ಸ್ಥಿರವೇಗದಲ್ಲಿ ಪ್ರಗತಿಯಲ್ಲಿದೆ.

ADVERTISEMENT

‘ಡಿ.1ರವರೆಗೆ 46 ಹರಾಜು ಹರಾಜು ದಿನಗಳು ‍ಪೂರ್ಣಗೊಂಡಿವೆ. ‍ಪ್ರತಿ ಕೆ.ಜಿ.ಗೆ ಸರಾಸರಿ ₹ 242.96ರಂತೆ 3.28 ಕೋಟಿ ಕೆ.ಜಿ. ‘ಎಲೆ ತಂಬಾಕು’ ಮಾರಾಟವಾಗಿದೆ. ಮಂಡಳಿ ಅಂದಾಜು ಮಾಡಿರುವ 8.12 ಕೋಟಿ ಕೆ.ಜಿ. ಉತ್ಪಾದನೆಯಲ್ಲಿ ಶೇ 40.38ರಷ್ಟು ‘ಎಲೆ ತಂಬಾಕಿನ’ ಮಾರಾಟ ಪೂರ್ಣಗೊಂಡಿದೆ’ ಎಂದು ಮಂಡಳಿಯ ಮೈಸೂರು ಹಾಗೂ ಪಿರಿಯಾಪಟ್ಟಣದ ಪ್ರಾದೇಶಿಕ ನಿರ್ದೇಶಕ ಜಿ.ಬುಲ್ಲಿ ಸುಬ್ಬರಾವ್ ತಿಳಿಸಿದ್ದಾರೆ.

‘ಉತ್ತಮ ದರ್ಜೆಯ ತಂಬಾಕಿನ ಸರಾಸರಿ ಬೆಲೆ ₹ 250.81 ಇದ್ದರೆ, ಮಧ್ಯಮ ದರ್ಜೆಗೆ ರಾಸರಿ ಬೆಲೆ ₹ 246.50 ಮತ್ತು ಕೆಳ ದರ್ಜೆಗೆ ಸರಾಸರಿ ₹ 232.80 ಇದೆ. ಈಗ ಮಾರಾಟ ಮಾಡಿರುವ ತಂಬಾಕು ಪ್ರಮಾಣದಲ್ಲಿ ಕೆಳ ದರ್ಜೆಯ ತಂಬಾಕಿನ ಸರಾಸರಿ ಬೆಲೆಯು ಹಿಂದಿನ ಬೆಳೆ ಋತುವಿಗೆ ಹೋಲಿಸಿದರೆ ₹14.27 ಹೆಚ್ಚಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಮಂಡಳಿಯು ಎಲ್ಲಾ ಹರಾಜು ಮಾರುಕಟ್ಟೆಗಳಲ್ಲಿ ತಂಬಾಕು ಹುಡಿ ಹರಾಜು ಪ್ರಾರಂಭಿಸಿದೆ ಮತ್ತು ಇಲ್ಲಿಯವರೆಗೆ ಪ್ರತಿ ಕೆ.ಜಿ.ಗೆ ₹134.60ರ ಸರಾಸರಿಯಂತೆ 11 ಲಕ್ಷ ಕೆ.ಜಿ. ಹುಡಿ ತಂಬಾಕು ಮಾರಾಟವಾಗಿದೆ. ಡಿ.1ರಂತೆ ಹುಡಿಗೆ ಹರಾಜಿನಲ್ಲಿ ಪ್ರತಿ ಕೆ.ಜಿ.ಗೆ ₹ 202 ಅತ್ಯಧಿಕ ಬೆಲೆ ದಾಖಲಾಗಿದೆ’ ಎಂದು ಹೇಳಿದ್ದಾರೆ.

‘2024-25ನೇ ಋತುವಿನಲ್ಲಿ ರಸಗೊಬ್ಬರ ಸಂಗ್ರಹ ಮತ್ತು ಆರಂಭಿಕ ಪೂರೈಕೆಗೆ ನೋಂದಾಯಿತ ಬೆಳೆಗಾರರಿಂದ ಬ್ರಾಂಡ್‌ವಾರು ಇಂಡೆಂಟ್‌ಗಳನ್ನು ಪಡೆಯಲಾಗುತ್ತಿದೆ. ಎಲ್ಲಾ ಬೆಳೆಗಾರರು ರಸಗೊಬ್ಬರಗಳ ಅಗತ್ಯವನ್ನು ಡಿ.15ರೊಳಗೆ ಸಂಬಂಧಪಟ್ಟ ಮಾರುಕಟ್ಟೆಗಳಲ್ಲಿ ಸಲ್ಲಿಸಬೇಕು. ರೈತರು ತಮ್ಮ ಎಫ್.ಸಿ.ವಿ. ತಂಬಾಕು ಎಲೆ ಅಥವಾ ಹುಡಿಯನ್ನು ಹರಾಜು ಮಾರುಕಟ್ಟೆಯ ಹೊರಗೆ ಮಾರಬಾರದು. ಹರಾಜು ಮಾರುಕಟ್ಟೆಗಳಲ್ಲೇ ಮಾರಬೇಕು’ ಎಂದು ಕೋರಿದ್ದಾರೆ.

‘ಸಕಾಲದಲ್ಲಿ ಮಳೆ ಬೀಳದೆ ತಂಬಾಕು ಇಳುವರಿ ನಿರೀಕ್ಷಿತ ಮಟ್ಟಕ್ಕೆ ಬಂದಿಲ್ಲ’ ಎಂದು ಹೇಳಿದ್ದಾರೆ.

‘ಅಕ್ರಮ ಮಾರಾಟ ನಿಷೇಧಿಸಲಾಗಿದೆ. ಅಕ್ರಮ ವ್ಯಾಪಾರ– ವಹಿವಾಟು ಕಂಡುಬಂದಲ್ಲಿ ಜಾಗೃತ ದಳದ ಮೊ.ಸಂಖ್ಯೆ: 94484–91384 ಸಂಪರ್ಕಿಸಿ ಮಾಹಿತಿ ನೀಡಬೇಕು’ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.