ADVERTISEMENT

ಧರ್ಮ ಸಂಘರ್ಷದಿಂದ ಭಯದ ವಾತಾವರಣ: ಬಿ.ಶಿವಸ್ವಾಮಿ ಕಳವಳ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:08 IST
Last Updated 27 ಅಕ್ಟೋಬರ್ 2025, 4:08 IST
ಮೈಸೂರಿನ ರೋಟರಿ ಪಶ್ಚಿಮ ಶಾಲೆ ಸಭಾಂಗಣದಲ್ಲಿ ಭಾನುವಾರ ಸನ್ವಿತಿ ಪ್ರಕಾಶನ ಆಯೋಜಿಸಿದ್ದ ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ 
ಮೈಸೂರಿನ ರೋಟರಿ ಪಶ್ಚಿಮ ಶಾಲೆ ಸಭಾಂಗಣದಲ್ಲಿ ಭಾನುವಾರ ಸನ್ವಿತಿ ಪ್ರಕಾಶನ ಆಯೋಜಿಸಿದ್ದ ಪುಸ್ತಕ ಬಿಡುಗಡೆ, ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ    

ಮೈಸೂರು: ‘ಪ್ರಸ್ತುತ ಸಮಾಜದಲ್ಲಿ ಧರ್ಮ ಸಂಘರ್ಷ ನಡೆಯುತ್ತಿದ್ದು, ಭಯದ ವಾತಾವರಣ ಉಂಟಾಗುತ್ತಿದೆ’ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರಾಜ್ಯ ಕೆಎಎಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ. ಶಿವಸ್ವಾಮಿ ಕಳವಳ ವ್ಯಕ್ತಪಡಿಸಿದರು. 

ಬೋಗಾದಿಯ ಸನ್ವಿತಿ ಪ್ರಕಾಶನವು ಸರಸ್ವತಿಪುರಂನ ರೋಟರಿ ಪಶ್ಚಿಮ ಶಾಲೆ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃತಿ ಬಿಡುಗಡೆ, ಕನ್ನಡ ಕಾವ್ಯಸಂಭ್ರಮ ಹಾಗೂ ರಾಜ್ಯ ಮಟ್ಟದ ಸನ್ವಿತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಘರ್ಷ ನಿವಾರಣೆ ಆಗಬೇಕಾದರೆ ಅಕ್ಷರಗಳ ಮೂಲಕ ಅರಿವು ಮೂಡಿಸಬೇಕು. ಸಾಮರಸ್ಯ, ಸಮಾನತೆಯ ಸಮಾಜ ನಿರ್ಮಾಣವಾಗಬೇಕು’ ಎಂದು ಆಶಿಸಿದರು.

ADVERTISEMENT

‘ಸಾಹಿತ್ಯ ಜೀವ ಹಾಗೂ ಜನ ಪರವಾಗಿದ್ದರೆ ಮೌಲ್ಯ ಹೆಚ್ಚು. ಇದರಿಂದ ಮಾನವೀಯ ಮೌಲ್ಯಗಳು ಕೂಡ ಹೆಚ್ಚಾಗುತ್ತವೆ’ ಎಂದು ಪ್ರತಿಪಾದಿಸಿದರು. 

ಎಲ್ಲರಿಗೂ ಸಿದ್ಧಿಸದು: ‘ಸಾಹಿತ್ಯ ರಚನೆ ಕೂಡ ಕಲೆ. ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ. ಯಾರಿಗೆ ಅಧ್ಯಯನ, ಆಸಕ್ತಿ ಇದೆಯೋ ಅವರಿಗೆ ಸಿದ್ದಿಸುತ್ತದೆ. ಪ್ರತಿ ಮನೆಯಲ್ಲೂ ಗ್ರಂಥ ಭಂಡಾರ ಇರಬೇಕು. ಪೋಷಕರು ಮಕ್ಕಳಿಗೆ ಮೊಬೈಲ್‌ ಫೋನ್‌ ಕೊಡುವ ಬದಲು ಪುಸ್ತಕ ಓದುವ ಅಭಿರುಚಿ ಬೆಳೆಸಬೇಕು. ಇದರಿಂದ ಸಾಧನೆ ಮಾಡಲು ಅನುಕೂಲ ಆಗುತ್ತದೆ. ಬಿಡುವಿನ ವೇಳೆ ಮಕ್ಕಳೊಂದಿಗೆ ಮಾತನಾಡಬೇಕು. ಆಗ ಮಾತ್ರ ಮಾನವೀಯ ಸಂಬಂಧ, ಜೀವನ ಸಂಬಂಧ, ಮಾನವೀಯ ಮೌಲ್ಯಗಳು ಬೆಳೆಯಲು ಸಾಧ್ಯ’ ಎಂದು ತಿಳಿಸಿದರು.

ಬಸಪ್ಪ ಸಿ. ಸಾಲುಂಡಿ ಅವರ ‘ಹೊನ್ನೇರು’ ಪರಿಷ್ಕೃತ ಕವನಸಂಕಲನ ಹಾಗೂ ‘ಕರುನಾಡ ಕಾರಂತಜ್ಜ’ ಸಂಪಾದಿತ ಕೃತಿ ಬಿಡುಗಡೆ ಮಾಡಿದ ಸಾಹಿತಿ ಟಿ. ಸತೀಶ್‌ ಜವರೇಗೌಡ, ‘ಬೋಧಕ ವರ್ಗದವರು ಬೋಧನೆ, ಸಂಶೋಧನೆ ಹಾಗೂ ಅಧ್ಯಯನಶೀಲತೆಯಿಂದ ದೂರವಾಗುತ್ತಿದ್ದಾರೆ’ ಎಂದು ವಿಷಾದಿಸಿದರು.

ಓದುವ ಹವ್ಯಾಸ ಬೆಳೆಸಿ: ‘ಶಿಕ್ಷಕರು ಬೋಧನೆ, ಸಂಶೋಧನೆ, ಅಧ್ಯಯನಶೀಲತೆಯಲ್ಲಿ ತೊಡಗಿ ವಿದ್ಯಾರ್ಥಿಗಳಲ್ಲೂ ಓದುವ ಹವ್ಯಾಸ ಬೆಳೆಸಬೇಕು’ ಎಂದು ಹೇಳಿದರು.

ಕೃತಿ ಕುರಿತು ನಿವೃತ್ತ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಮಾತನಾಡಿದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮುಕ್ತ ವಿವಿ ನಿರ್ವಹಣಾ ವಿಭಾಗದ ಅಧ್ಯಕ್ಷ ಪ್ರೊ.ಸಿ. ಮಹದೇವಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು. ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಎನ್‌. ನಾಗೇಂದ್ರ ಮುಖ್ಯ ಅತಿಥಿಯಾಗಿದ್ದರು. ಮೈಮುಲ್‌ ಅಧ್ಯಕ್ಷ ಕೆ.ಈರೇಗೌಡ ಪಾಲ್ಗೊಂಡಿದ್ದರು. 

ಸಾಲಿಗ್ರಾಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕಂಚಿನಕೆರೆ ಗೋವಿಂದೇಗೌಡ ಆಶಯ ಭಾಷಣ ಮಾಡಿದರು. ಸನ್ವಿತಿ ಪ್ರಕಾಶನದ ಸಂಸ್ಥಾಪಕ ಅಧ್ಯಕ್ಷ ಬಸಪ್ಪ ಸಿ.ಸಾಲುಂಡಿ ಸ್ವಾಗತಿಸಿದರು. ಅಂಬಳೆ ಮಹದೇವಸ್ವಾಮಿ ನಿರೂಪಿಸಿದರು. ಮೈಸೂರು ಮಹಾಲಿಂಗ ಪ್ರಾರ್ಥಿಸಿದರು. 

ಇದಕ್ಕೂ ಮುನ್ನ, ಸಾಹಿತಿಗಳಾದ ಎಸ್.ಎಲ್. ಭೈರಪ್ಪ, ಮೊಗಳ್ಳಿ ಗಣೇಶ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 

ಕವಿಗೋಷ್ಠಿ ಪ್ರಶಸ್ತಿ ಪ್ರದಾನ

ಸಾಹಿತಿ ಸುಚಿತ್ರಾ ಹೆಗಡೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಸಿ.ಆರ್‌. ಶ್ರೀಧರ್‌ ಮುಖ್ಯ ಅತಿಥಿಯಾಗಿದ್ದರು. ಕೆ.ಸಿ. ರತ್ನಶ್ರೀ ಶ್ರೀಧರ್‌ ಆಶಯ ಭಾಷಣ ಮಾಡಿದರು. ಎಚ್‌. ನವೀನ್‌ಕುಮಾರ್‌ ಪಾಲ್ಗೊಂಡಿದ್ದರು. ಸರ್ಜಾಶಂಕರ್‌  ಹರಳಿಮಠ- ಕನಕ ಸಾಹಿತ್ಯ ಪ್ರಶಸ್ತಿ ಜೀವನ್ಮುಖಿ ಸುರೇಶ್‌- ಶಿವರಾಮ ಕಾರಂತ ಮಾಧ್ಯಮ ಪ್ರಶಸ್ತಿ ಎಚ್‌.ಕೆ. ಪ್ರಸಾದ್‌- ಶಿಕ್ಷಣ ಎನ್‌.ವಿ. ಮನೋಜ್‌ಕುಮಾರ್‌- ಸಂಶೋಧನೆ ಅಂಬಳೆ ಮಹದೇವಸ್ವಾಮಿ- ಸಾಹಿತ್ಯ ಸಾಲುಂಡಿ ದೊರೆಸ್ವಾಮಿ- ಸಂಘಟನೆ ಅಮ್ಮ ರಾಮಚಂದ್ರ- ಜಾನಪದ ಮೈಸೂರು ಎಂ. ಮಹಾಲಿಂಗ- ಸುಗಮ ಸಂಗೀತ ಕೆ.ಎಂ. ಮಹೇಂದ್ರ ಎಂ. ಶಿವಬೀರಪ್ಪ ಮೌನೇಶ ಬಡಿಗೇರ ಡಿ. ಪದ್ಮನಾಭ ಸಿ. ಮದನ್‌ಕುಮಾರ್‌- ಸಮಗ್ರ ಎಂ.ಎಸ್‌. ಅಪೂರ್ವ- ಭರತನಾಟ್ಯ– ಅವರಿಗೆ ಸನ್ವಿತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.