ADVERTISEMENT

ಭಾವನೆಗೆ ಧಕ್ಕೆ ಆಗದಂತೆ ನಡೆದುಕೊಳ್ಳಲಿ: ಯದುವೀರ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 23:26 IST
Last Updated 21 ಸೆಪ್ಟೆಂಬರ್ 2025, 23:26 IST
ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌
ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌   

ಮೈಸೂರು: ‘ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟನೆಯ ವೇದಿಕೆಯಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದ ರೀತಿ ನಡೆದುಕೊಳ್ಳಲಿ. ಅದೇ ಅವರು ನಮಗೆ ನೀಡುವ ಸ್ಪಷ್ಟೀಕರಣ’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

‘ಭುವನೇಶ್ವರಿ ಹಾಗೂ ಕನ್ನಡ ಬಾವುಟದ ಬಗ್ಗೆ ಬಾನು ಅವರು ಆಡಿದ್ದ ಮಾತುಗಳ ಕಾರಣಕ್ಕೆ, ನಾವು ಅವರು ದಸರಾ ಉದ್ಘಾಟಿಸುವುದನ್ನು ವಿರೋಧಿಸಿದ್ದೆವು. ಅವರು ಆ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಈಗ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ವೇಳೆ ಅವರು ಗೌರವದಿಂದ ನಡೆದುಕೊಳ್ಳಲಿ’ ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದಸರಾ ರಾಜಕೀಯ ಮೀರಿದ ಆಚರಣೆ. ಆದರೆ, ಉದ್ಘಾಟನೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಜನರು ಗಮನಿಸುತ್ತಿದ್ದಾರೆ. ಮುಂದೆ ಅವರೇ ಉತ್ತರ ಕೊಡುವ ಕಾಲ ಬರಲಿದೆ’ ಎಂದು ಹೇಳಿದರು.

ADVERTISEMENT

ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ನಾವು ಬಾನು ಮುಷ್ತಾಕ್ ನಡವಳಿಕೆಗಳ ವಿರುದ್ದ ಧ್ವನಿ ಎತ್ತಿರುವುದು ನಿಜ. ಆದರೆ, ನಮ್ಮೂರಿನಲ್ಲೇ ನಾಡಹಬ್ಬ ನಡೆದಿದೆ. ಹೀಗಾಗಿ, ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇವೆ. ಬಾನು ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ಕುತೂಹಲವಂತೂ ಇದ್ದೇ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.