ಪಿರಿಯಾಪಟ್ಟಣ: ತಾಲ್ಲೂಕಿನ ಆಲನಹಳ್ಳಿಯ ಅಂಬೇಡ್ಕರ್ ಕಾಲೋನಿಗೆ ಹೊಂದಿಕೊಂಡಿರುವ ರಾಜಕಾಲುವೆ ಒತ್ತುವರಿ ತೆರವಿಗೆ ಗುರುವಾರ ಕಂದಾಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಜಕಾಲುವೆಯಲ್ಲಿ ಬರುವ ನೀರು, ಒತ್ತುವರಿಯಿಂದಾಗಿ ಕಾಲೋನಿಯ ಮನೆಗಳಿಗೆ ನುಗ್ಗಿ ಅಪಾರ ತೊಂದರೆ ನೀಡಿತ್ತು.
ಗ್ರಾಮಸ್ಥರು ಈ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಅವರಿಗೆ ದೂರು ನೀಡಿದ್ದರು. ತಹಶೀಲ್ದಾರ್ ಕೆ. ಸುರೇಂದ್ರ ಮೂರ್ತಿ ಅವರು ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳುವತೆ ಆದೇಶಿಸಿದ್ದರು.
ಸರ್ವೆ ಇಲಾಖೆ ಅಧಿಕಾರಿ ಗಿರೀಶ್, ಆರ್ ಐ ಪಾಂಡುರಂಗ, ಹುಣಸವಾಡಿ ಗ್ರಾಮ ಪಂಚಾಯಿತಿ ಪಿಡಿಒ ಮಂಜುನಾಥ್, ಗ್ರಾಮ ಲೆಕ್ಕಿಗರಾದ ಸೋಮಶೇಖರ್ ಮತ್ತು ಸಿದ್ದರಾಜು, ಸಿಬ್ಬಂದಿ ಮಂಜು ದೊಡ್ಡಯ್ಯ ಅವರ ತಂಡ ಒತ್ತುವರಿ ಆಗಿರುವ ಸರ್ಕಾರಿ ಕರಾಬು ಜಾಗವನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿ ಗ್ರಾಮಕ್ಕೆ ಮಳೆ ನೀರು ಹೋಗುವುದನ್ನು ತಡೆಗಟ್ಟಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.