ADVERTISEMENT

ನಿವೃತ್ತ ಮೇಜರ್ ಜನರಲ್ ಸಿ.ಕೆ.ಕರುಂಬಯ್ಯ ನಿಧನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 9:39 IST
Last Updated 4 ಜನವರಿ 2024, 9:39 IST
<div class="paragraphs"><p>ಸಿ.ಕೆ.ಕರುಂಬಯ್ಯ</p></div>

ಸಿ.ಕೆ.ಕರುಂಬಯ್ಯ

   

ಮೈಸೂರು: ನಿವೃತ್ತ ಮೇಜರ್ ಜನರಲ್ ಸಿ.ಕೆ.ಕರುಂಬಯ್ಯ ವಯೋಸಹಜ ಅನಾರೋಗ್ಯದಿಂದ ಗುರುವಾರ ಬೆಳಿಗ್ಗೆ 7.45ರಲ್ಲಿ ತಾಲ್ಲೂಕಿನ ಹೆಮ್ಮನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ನಿಧನರಾದರು.

ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ADVERTISEMENT

ಮಡಿಕೇರಿಯಲ್ಲಿ 1936ರ ಡಿ.3ರಂದು ಡಾ.ಸಿ.ಬಿ.ಕಾರಿಯಪ್ಪ ಪುತ್ರರಾಗಿ ಜನಿಸಿದ ಅವರು, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಹತ್ತಿರದ ಸಂಬಂಧಿ. ಮಡಿಕೇರಿಯ ಸೆಂಟ್ರಲ್ ಪ್ರೌಢಶಾಲೆ, ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು, 1957ರಲ್ಲಿ ಡೆಹ್ರಾಡೂನ್ ನ ಭಾರತೀಯ ಮಿಲಿಟರಿ ಅಕಾಡೆಮಿಗೆ ಸೇರಿದರು.

ಮರಾಠ ಲಘು ಪದಾತಿದಳದ 5ನೇ ಬೆಟಾಲಿಯನ್ ನಲ್ಲಿ ಸೇನಾ ಸೇವೆ ಆರಂಭಿಸಿದರು. ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾದ ಸೇನೆ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ರಾಜಸ್ಥಾನ ಗಡಿಯಲ್ಲಿ ಹೋರಾಟ ನಡೆಸಿ ಪಾಕ್ ನ ಹಲವು ಗ್ರಾಮಗಳನ್ನು ವಶಪಡಿಸಿಕೊಂಡಿದ್ದರು.

1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಸಾವಿರಾರು ಪಾಕ್ ಯೋಧರ ಶರಣಾಗತಿಗೆ ಕಾರಣರಾಗಿದ್ದರು. ಅಲ್ಲದೇ ಮಗುರಾದಲ್ಲಿ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಪಾಕಿಸ್ತಾನದ 300 ಟ್ರಕ್ ಗಳನ್ನು ವಶಕ್ಕೆ ಪಡೆದಿದ್ದರು. ಅವರು ಮುನ್ನಡೆಸಿದ್ದ ಪಡೆಗೆ ರಾಷ್ಟ್ರಪತಿ ಗೌರವ ದೊರೆತಿತ್ತು. ಕರುಂಬಯ್ಯ‌ ಅವರಿಗೆ ಸೇನಾ ಪದಕವೂ ಸಿಕ್ಕಿತ್ತು.

1972ರಲ್ಲಿ ಉತ್ತರ ಪ್ರದೇಶದ ಜಹಾಂಗೀರಾಬಾದ್ ದಂಗೆಯನ್ನು ಹತ್ತಿಕ್ಕಿದ್ದರು. ಸಿಕ್ಕಿಂನ ನಾತೂಲಾದಲ್ಲಿ ಇವರ ಬೆಟಾಲಿಯನ್ ಗೆ ಬ್ಲ್ಯಾಕ್ ಕ್ಯಾಟ್ ಟ್ರೋಫಿ ಸಿಕ್ಕಿತ್ತು.

ವೆಲ್ಲಿಂಗ್ಟನ್ ನ ರಕ್ಷಣಾ ಸೇವೆಗಳ ಸ್ಟಾಫ್ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಬೆಳಗಾವಿ ಹಾಗೂ ಹಿಮಾಚಲ ಪ್ರದೇಶದ ಯೋಲ್ ಸೇನಾ ಶಾಲೆಗಳ ಸ್ಟೇಷನ್ ಕಮಾಂಡರ್ ಹಾಗೂ ಕಂಟೋನ್ಮೆಂಟ್ ಬೋರ್ಡ್ ಅಧ್ಯಕ್ಷರಾಗಿದ್ದರು.

ಲಡಾಖ್ ನಲ್ಲಿ 121 ಇನ್ ಫ್ಯಾನ್ಟ್ರಿ ಬ್ರಿಗೇಡ್ ಗ್ರೂಪ್ ಮುನ್ನಡೆಸಿದ್ದ ಕರುಂಬಯ್ಯ, ಹೆಚ್ಚುವರಿ ಮಿಲಿಟರಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. 35 ವರ್ಷ ಭಾರತೀಯ ಸೇನೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ 1991ರ ಡಿ.31ರಂದು ನಿವೃತ್ತರಾಗಿದ್ದರು.

ನಿವೃತ್ತಿ ನಂತರ ಕೆ.ಹೆಮ್ಮನಹಳ್ಳಿ ತೋಟದ ಮನೆಯಲ್ಲಿ ಕಳೆದ 30 ವರ್ಷದಿಂದ ವಾಸವಿದ್ದರು. ಮೈಸೂರು ಗ್ರಾಹಕ ಪರಿಷತ್ತಿನ ಸದಸ್ಯರಾಗಿದ್ದ ಅವರು, ನಾಗರಿಕ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಮೈಸೂರು ಸ್ಪೋರ್ಟ್ಸ್ ಕ್ಲಬ್, ಹಿರಿಯ ನಾಗರಿಕರ ವೇದಿಕೆಯ ಸದಸ್ಯರೂ ಆಗಿದ್ದರು.

ಕುಕ್ಕರಹಳ್ಳಿ ಕೆರೆ, ಪೂರ್ಣಯ್ಯ ನಾಲೆ ಸೇರಿದಂತೆ ನಗರದ ಜಲಮೂಲಗಳು, ವನ್ಯಜೀವಿ ಸಂರಕ್ಷಣೆಗೂ ದುಡಿದಿದ್ದರು.

ಮೃತರ ಅಂತ್ಯಕ್ರಿಯೆ ನಾಳೆ (ಜ.5) ಮಧ್ಯಾಹ್ನ ವಿಜಯನಗರದ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.