ADVERTISEMENT

ಐಎಎಸ್‌ ಲಾಬಿಯಿಂದ ರೋಹಿಣಿ ಸಿಂಧೂರಿಗೆ ರಕ್ಷಣೆ: ಸಾ.ರಾ. ಮಹೇಶ್ ಆರೋಪ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2024, 14:41 IST
Last Updated 30 ನವೆಂಬರ್ 2024, 14:41 IST
ಸಾ.ರಾ. ಮಹೇಶ್‌ 
ಸಾ.ರಾ. ಮಹೇಶ್‌    

ಮೈಸೂರು: ‘ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಐಎಎಸ್‌ ಲಾಬಿಯ ಮೂಲಕ ರಕ್ಷಣೆ ನೀಡುತ್ತಿದ್ದು, ಸಿಂಧೂರಿ ಮಾಡಿರುವ ಅಕ್ರಮಗಳ ಕುರಿತ ತನಿಖೆಯ ದಿಕ್ಕು ತಪ್ಪಿಸಲಾಗಿದೆ’ ಎಂದು ಮಾಜಿ ಸಚಿವ, ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ಆರೋಪಿಸಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘2021ರ ಮೇ 9ರಂದು ಅಂದಿನ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಕ್ರಮದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದೆ. 2022ರ ಮೇ 17ರಂದು ಸರ್ಕಾರ ಕಮಿಟಿ ಮಾಡಿತ್ತು. ತನಿಖೆಗೆ ಮುಖ್ಯ ಕಾರ್ಯದರ್ಶಿ ಜಯರಾಮ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದರು. 2022ರ ಜೂನ್‌ 1ರಂದು ಮುಖ್ಯ ಕಾರ್ಯದರ್ಶಿ ನಿವೃತ್ತಿಯಾಗುವ ಒಂದು ದಿನ ಮುಂಚೆ ವಸತಿ ಇಲಾಖೆಯ ರವಿಶಂಕರ್ ಅವರನ್ನು ನೇಮಿಸಲಾಯಿತು. ಕೆಲವೇ ದಿನಗಳ ಅಂತರದಲ್ಲಿ ತನಿಖಾಧಿಕಾರಿಯನ್ನು ಏಕೆ ಬದಲಾಯಿಸಿದ್ದೀರಿ’ ಎಂದು ಪ್ರಶ್ನಿಸಿದರು.

‘ನಗರದ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಿಂದ ಕುರ್ಚಿ, ಮೇಜು ಸೇರಿದಂತೆ 23 ವಸ್ತುಗಳನ್ನು ರೋಹಿಣಿ ತೆಗೆದುಕೊಂಡು ಹೋಗಿದ್ದಾರೆ. ಇದು ಕಳ್ಳತನ ಅಲ್ವೇ?’ ಎಂದು ಪ್ರಶ್ನಿಸಿದ ಅವರು, ‘ಈ ಬಗ್ಗೆ ತನಿಖಾ ವರದಿಯಲ್ಲಿ ಕ್ರಮ ತೆಗೆದುಕೊಳ್ಳುವ ಬದಲು, ₹76 ಸಾವಿರವನ್ನು ವೇತನದಲ್ಲಿ ಕಡಿತಗೊಳ್ಳಲು ಶಿಫಾರಸು ಮಾಡಲಾಗಿದೆ. ಕದ್ದಿರುವ ವಸ್ತುಗಳನ್ನು ಯಾಕೆ ಜಪ್ತಿ ಮಾಡಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ಸರ್ಕಾರದ ಈಗಿನ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿಂದಿನ ಇಬ್ಬರು ಮುಖ್ಯಕಾರ್ಯದರ್ಶಿ ಕೊನೆ ಘಳಿಗೆಯಲ್ಲಿ ಆದೇಶಗಳನ್ನು ಬದಲು ಮಾಡಿದ್ದಾರೆ. ನನ್ನ ವಿರುದ್ಧ ರೋಹಿಣಿ ಮಾಡಿರುವ ಆರೋಪಗಳು ನಿರಾಧಾರ ಎಂಬುದು ತನಿಖೆಯಿಂದ ಸಾಬೀತಾಗಿದೆ. ಆದರೆ, ಆರೋಪ ರುಜುವಾತಾದರೂ ರೋಹಿಣಿ ವಿರುದ್ಧ ಯಾಕೆ ಕ್ರಮ ವಹಿಸುತ್ತಿಲ್ಲ’ ಇದರ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ’ ಎಂದು ಹೇಳಿದರು.

ಜಿ.ಟಿ.ದೇವೇಗೌಡ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಜೆಡಿಎಸ್‌ ಸಭೆಗೆ ದೊಡ್ಡವರೇ ಕರೆಯುತ್ತಾರೆ. ನಮ್ಮದು ಕುಟುಂಬದ ಪಕ್ಷ. ಅಣ್ಣ– ತಮ್ಮಂದಿರ ಮನಸ್ತಾಪ ಸರಿಹೋಗುತ್ತದೆ
-ಸಾ.ರಾ.ಮಹೇಶ್‌, ಜೆಡಿಎಸ್‌ ಕಾರ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.