ಮೈಸೂರು: ಜಿಲ್ಲೆಯಲ್ಲಿ ಮೈಸೂರು ಮಹಾ ನಗರಪಾಲಿಕೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು ಗ್ರಂಥಾಲಯ ಇಲಾಖೆಗೆ ಪಾವತಿಸಬೇಕಾದ ‘ಸೆಸ್’ ಬಾಕಿ ಬರೋಬ್ಬರಿ ₹22.86 ಕೋಟಿಗೆ ಏರಿಕೆಯಾಗಿದೆ.
ಪಾಲಿಕೆ ಒಂದರಿಂದಲೇ ಬರಬೇಕಾದ ಬಾಕಿ ₹20 ಕೋಟಿಗೆ ತಲುಪಿದೆ. ಈಚೆಗೆ ಆಯಾ ವರ್ಷದ ‘ಸೆಸ್’ ಪಾವತಿಸಲಾಗುತ್ತಿದೆಯೇ ಹೊರತು, ಹಳೆಯ ಬಾಕಿಯ ಲೆಕ್ಕ ಚುಕ್ತಾ ಆಗುತ್ತಿಲ್ಲ! ಸಾರ್ವಜನಿಕರಿಂದ ಸಂಗ್ರಹಿಸಲಾದ ಹಣವನ್ನು ಕಾಲಕಾಲಕ್ಕೆ ಸಂದಾಯ ಮಾಡುವುದು ಸಮರ್ಪಕವಾಗಿ ನಡೆದಿಲ್ಲದಿರುವುದು ‘ಬಾಕಿಯ ಗುಡ್ಡ’ ಬೆಳೆಯಲು ಕಾರಣವಾಗಿದೆ.
ಅನುದಾನದ ಕೊರತೆಯ ಕಾರಣದಿಂದ ಗ್ರಂಥಾಲಯ ಅಭಿವೃದ್ಧಿ ಮೊದಲಾದ ಚಟುವಟಿಕೆಗಳಿಗೆ ಹೊಡೆತ ಬಿದ್ದಿದೆ.
ಹಲವು ವರ್ಷಗಳಿಂದ ಬಾಕಿ: ‘ಹಲವು ವರ್ಷಗಳಿಂದಲೂ ಬಾಕಿ ಇದೆ. ಈ ಸೆಸ್ ಅನ್ನು ಪ್ರತಿ ವರ್ಷ ಶೇ 25ರಂತೆ ಪಾವತಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯಿಂದಲೇ ಆದೇಶಿಸಲಾಗಿತ್ತು. 4 ವರ್ಷದ ಹಿಂದಿನ ಆದೇಶದ ಪಾಲನೆಯೂ ಆಗಿಲ್ಲ. ಇಲಾಖೆಯಿಂದ ಪತ್ರಗಳ ಮೇಲೆ ಪತ್ರ ಬರೆಯಲಾಗುತ್ತಿದೆ. ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲೂ ಚರ್ಚೆಯಾಗುತ್ತಿದೆ. ಆದರೆ, ಇದರಿಂದ ಪ್ರಯೋಜನವೇನೂ ಆಗುತ್ತಿಲ್ಲ’ ಎನ್ನುತ್ತಾರೆ ಅಧಿಕಾರಿಗಳು.
‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ (ಮುಡಾ) ಬಾಕಿ ಇದೆ. ಆದರೆ, ಎಷ್ಟು ಬಾಕಿ ಇದೆ ಎಂಬ ಮಾಹಿತಿಯನ್ನೇ ಒದಗಿಸುತ್ತಿಲ್ಲ. ಆದರೆ, ವಾರ್ಷಿಕ ₹50 ಲಕ್ಷದಿಂದ ₹60 ಲಕ್ಷದವರೆಗೆ ಪಾವತಿಸುತ್ತಿದ್ದಾರೆ. ನಗರಪಾಲಿಕೆಯಿಂದ ಕಳೆದ ಎರಡು ವರ್ಷಗಳಿಂದ ಆಯಾ ವರ್ಷದ ಸರಾಸರಿ ₹3 ಕೋಟಿಯಿಂದ ₹4 ಕೋಟಿ ಸಂದಾಯವಾಗುತ್ತಿದೆ. ಗ್ರಂಥಾಲಯ ಸೆಸ್ ದೊಡ್ಡ ಪ್ರಮಾಣದಲ್ಲಿ ಬಾಕಿ ಇರುವ ವಿಷಯವು ವಿಧಾನಸಭೆಯ ಅರ್ಜಿ ಸಮಿತಿಯ ಮುಂದೆಯೂ ಮಂಡನೆಯಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ವ್ಯಾಪ್ತಿಗೆ ಬರುವ 13 ನಗರ ಸ್ಥಳೀಯ ಸಂಸ್ಥೆಗಳಿಂದ (ಎಚ್.ಡಿ. ಕೋಟೆ, ಸರಗೂರು, ತಿ.ನರಸೀಪುರ, ಬನ್ನೂರು, ನಂಜನಗೂಡು, ಪಿರಿಯಾಪಟ್ಟಣ, ಕೆ.ಆರ್. ನಗರ, ಹುಣಸೂರು, ಹೂಟಗಳ್ಳಿ, ಬೋಗಾದಿ, ಶ್ರೀರಾಂಪುರ, ಕಡಕೊಳ ಹಾಗೂ ರಮ್ಮನಹಳ್ಳಿ) ಡಿಸೆಂಬರ್ ಅಂತ್ಯಕ್ಕೆ ₹2.86 ಕೋಟಿ ಗ್ರಂಥಾಲಯ ಸೆಸ್ ಬಾಕಿ ಇದೆ.
ಹಿನ್ನಡೆ ಆಗುತ್ತಿದೆ: ‘ಗ್ರಂಥಾಲಯ ಸೆಸ್ ಬಾಕಿ ಇರುವುದರಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ. ಪಾವತಿಸುವಂತೆ ಪತ್ರ ವ್ಯವಹಾರ ನಡೆಸಲಾಗುತ್ತಿದೆ’ ಎಂದು ಸಾರ್ವಜನಿಕ ಗ್ರಂಥಾಲಯಗಳ ಉಪ ನಿರ್ದೇಶಕ ಬಿ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಗರದ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳ ಕಟ್ಟಡಗಳು ಶೇ 95ರಷ್ಟು ನಗರಪಾಲಿಕೆಯ ಮಾಲೀಕತ್ವದವು. ಅಲ್ಲೆಲ್ಲ ಸೌಲಭ್ಯ ಕಲ್ಪಿಸುವುದು ಹಾಗೂ ದುರಸ್ತಿ ಕೆಲಸವನ್ನು ಪಾಲಿಕೆಯೇ ನಿರ್ವಹಿಸಬೇಕಾಗುತ್ತದೆ. ಅವರ ಅನುಮತಿ ಇಲ್ಲದೇ ನಾವೇನೂ ಮಾಡಿಕೊಡಲಾಗದು. ದುರಸ್ತಿ ಮಾಡಿಕೊಡಿ ಅಥವಾ ಮಾಲೀಕತ್ವ ನಮಗೇ ವಹಿಸಿಕೊಡಿ, ಬಾಕಿ ಸೆಸ್ ಪಾವತಿಸಿ ಎಂದು ಕೋರಿದ್ದೇವೆ. ಅದೆಲ್ಲವೂ ಆದಲ್ಲಿ ನಿರ್ವಹಣೆ, ದುರಸ್ತಿ, ವಿಸ್ತರಣೆ–ತೆರಿಗೆಯನ್ನೆಲ್ಲಾ ನಾವೇ ನೋಡಿಕೊಳ್ಳುತ್ತೇವೆ ಎಂದೂ ತಿಳಿಸಿದ್ದೇವೆ’ ಎಂದು ಮಾಹಿತಿ ನೀಡಿದರು.
ನಗರ ಕೇಂದ್ರ ಗ್ರಂಥಾಲಯದ ವ್ಯಾಪ್ತಿಯಲ್ಲಿ 35 ಗ್ರಂಥಾಲಯಗಳು, ಒಂದು ಮೊಬೈಲ್ ವ್ಯಾನ್ ಇದೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ವ್ಯಾಪ್ತಿಯಲ್ಲಿ 25 ಇವೆ. 3 ಅಲೆಮಾರಿ, 3 ಕೊಳಚೆ, 3 ಜೈಲು (ಕೇಂದ್ರ ಕಾರಾಗೃಹ ಮೈಸೂರು, ನಂಜನಗೂಡು ಹಾಗೂ ಕೆ.ಆರ್.ನಗರ) ಗ್ರಂಥಾಲಯಗಳಿವೆ. ನಗರ ಸಶಸ್ತ್ರ, ಜಿಲ್ಲಾ ಸಶಸ್ತ್ರ ಪಡೆ ಹಾಗೂ ಕೆಎಸ್‌ಆರ್‌ಪಿಯಲ್ಲೂ ಗ್ರಂಥಾಲಯ ಇವೆ.
ಮಹಾನಗರಪಾಲಿಕೆಯಿಂದ ಗ್ರಂಥಾಲಯ ಸೆಸ್ ಬಾಕಿ ಇರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದುಶೇಖ್ ತನ್ವೀರ್ ಆಸೀಫ್ ಆಯುಕ್ತ ಮಹಾನಗರಪಾಲಿಕೆ ಮೈಸೂರು
ನಮ್ಮ ಆರ್ಥಿಕ ಸಂಪನ್ಮೂಲದಲ್ಲಿ ಶೇ 50ರಷ್ಟು ಹಣ ವೇತನಕ್ಕೇ ಹೋಗುತ್ತಿದೆ. ಗ್ರಂಥಾಲಯ ಸೆಸ್ ಬಾಕಿ ಸಂದಾಯವಾದರೆ ಬಹಳಷ್ಟು ಅನುಕೂಲವಾಗುತ್ತದೆಬಿ.ಮಂಜುನಾಥ್ ಸಾರ್ವಜನಿಕ ಗ್ರಂಥಾಲಯಗಳ ಉಪ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.