ADVERTISEMENT

ಆರ್‌ಎಸ್ಎಸ್‌ ಸಂವಿಧಾನ ವಿರೋಧಿ: ಸಿದ್ದರಾಮಯ್ಯ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 5:50 IST
Last Updated 19 ಅಕ್ಟೋಬರ್ 2025, 5:50 IST
ಮೈಸೂರಿನ ಮಾನಸಗಂಗೋತ್ರಿಯಲ್ಲಿ ಶನಿವಾರ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ ಅವರು ವಿವಿಧ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು. ಪ್ರೊ.ಎಸ್‌.ನರೇಂದ್ರಕುಮಾರ್, ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಕೆ.ಹರೀಶ್ ಗೌಡ, ವಿಧಾನಪರಿಷತ್‌ ಸದಸ್ಯ ಕೆ.ಶಿವಕುಮಾರ್‌ ಹಾಜರಿದ್ದರು
ಮೈಸೂರಿನ ಮಾನಸಗಂಗೋತ್ರಿಯಲ್ಲಿ ಶನಿವಾರ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ ಅವರು ವಿವಿಧ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು. ಪ್ರೊ.ಎಸ್‌.ನರೇಂದ್ರಕುಮಾರ್, ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಕೆ.ಹರೀಶ್ ಗೌಡ, ವಿಧಾನಪರಿಷತ್‌ ಸದಸ್ಯ ಕೆ.ಶಿವಕುಮಾರ್‌ ಹಾಜರಿದ್ದರು   

ಮೈಸೂರು: ‘ಸಮಾಜದ ಪರಿವರ್ತನೆಯನ್ನು ಸಾವರ್ಕರ್ ಅನುಯಾಯಿಗಳು ಬಯಸುವುದಿಲ್ಲ. ಆರ್‌ಎಸ್ಎಸ್ ಎಂದಿಗೂ ಸಂವಿಧಾನ ವಿರೋಧಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

ಇಲ್ಲಿನ ಮಾನಸಗಂಗೋತ್ರಿಯಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ರಜತ ಮಹೋತ್ಸವ ಮತ್ತು ನೂತನ ಜ್ಞಾನದರ್ಶನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

‘ಸಮಾಜದ ಪರವಾಗಿ ಇರುವವರ ಜೊತೆ ನಿಮ್ಮ ಸಹವಾಸವಿರಲಿ. ಸಮಾಜ ಸುಧಾರಣೆಯ ವಿರೋಧಿಗಳು ಮತ್ತು ಸನಾತನಿಗಳ ಸಹವಾಸ ಮಾಡಬೇಡಿ’ ಎಂದು ಎಚ್ಚರಿಸಿದರು.

ADVERTISEMENT

‘ಪ್ರಪಂಚದ ಎಲ್ಲಾ ಸಂವಿಧಾನಗಳನ್ನು ಅಧ್ಯಯನ ಮಾಡಿ ನಮ್ಮ ದೇಶದ ಪರಿಸ್ಥಿತಿ, ಸಾಮಾಜಿಕ ಸ್ಥಿತಿಗತಿಗೆ ಬೇಕಾದ ಶ್ರೇಷ್ಠ ಸಂವಿಧಾನವನ್ನು ಅಂಬೇಡ್ಕರ್‌ ನೀಡಿದ್ದಾರೆ. ಆದರೆ ಇದನ್ನು ಮನುವಾದಿಗಳು, ಗೋಲ್ವಾಲ್ಕರ್‌, ಸಾವರ್ಕರ್‌ ವಿರೋಧಿಸಿದ್ದರು. ಈ ಬಗ್ಗೆ ಅಂಬೇಡ್ಕರ್‌ ಸಂಶೋಧನಾ ಸಂಸ್ಥೆ ವಿದ್ಯಾರ್ಥಿಗಳಿಗೆ ತಿಳಿಸಬೇಕು’ ಎಂದರು.

ಅಪಪ್ರಚಾರ:

‘ಅಂಬೇಡ್ಕರ್ ಸಂವಿಧಾನ ಬರೆದಿಲ್ಲ, ಮೀಸಲಾತಿ ಮುಂದುವರಿಸಬಾರದು ಎಂದಿದ್ದರು, ಕಾಂಗ್ರೆಸ್‌ನಿಂದಾಗಿ ಚುನಾವಣೆ ಸೋತರು ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಾರೆ. ಆದರೆ, ಅಂಬೇಡ್ಕರ್ ಅವರೇ ತಮ್ಮ ಸೋಲಿಗೆ ಸಾವರ್ಕರ್ ಮತ್ತು ಕಮ್ಯುನಿಸ್ಟ್ ಪಕ್ಷ ಕಾರಣ ಎಂದಿದ್ದರು. ಸಂವಿಧಾನ ಸಭೆಯನ್ನು ಗಮನಿಸಿದರೆ ಅಂಬೇಡ್ಕರ್‌ ಶ್ರಮ ತಿಳಿಯುತ್ತದೆ. ಜಾತಿ ಇರುವವರೆಗೂ ಮೀಸಲಾತಿ ಇರಬೇಕು’ ಎಂದು ತಿಳಿಸಿದರು.

‘ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಸನಾತನಿ ಒಬ್ಬ ಶೂ ಎಸೆದಿರುವುದು ಸಮಾಜದಲ್ಲಿ ಪಟ್ಟಭದ್ರರು ಇರುವುದಕ್ಕೆ ಸಾಕ್ಷಿ. ಶೂ ಎಸೆತವನ್ನು ಪ್ರತಿಯೊಬ್ಬರೂ ವಿರೋಧಿಸಬೇಕು. ಆಗ ಮಾತ್ರ ಸಮಾಜ ಬದಲಾವಣೆಯ ಹಾದಿಯಲ್ಲಿದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು’ ಎಂದರು.

‘ನಾನು ಬುದ್ಧ, ಬಸವ, ಅಂಬೇಡ್ಕರ್ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ವೈಚಾರಿಕತೆ, ವೈಜ್ಞಾನಿಕತೆ ಬೆಳೆಯಬೇಕು ಎಂದು ಆಶಿಸುತ್ತೇನೆ. ವಿಜ್ಞಾನ ಓದಿಯೂ ಮೂಢನಂಬಿಕೆ ಆಚರಿಸುವವರಾಗಬೇಡಿ’ ಎಂದು ಹೇಳಿದರು.

‘ಕರ್ನಾಟಕದಲ್ಲಿ ಅಂಬೇಡ್ಕರ್‌ ಹೆಜ್ಜೆಗುರುತುಗಳು’ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ವಿಶ್ವವಿದ್ಯಾಲಯ ಜಾತಿ, ತಾರತಮ್ಯ ಪೋಷಿಸುವ ತಾಣವಾಗಬಾರದು. ಮಾನವೀಯ ವಿಚಾರಗಳನ್ನು ಪಸರಿಸುವ ಕೇಂದ್ರವಾಗಬೇಕು. ಉಪನ್ಯಾಸಕರು ಗುಂಪುಗಾರಿಕೆ, ಅವಕಾಶವಾದಿತನದಲ್ಲಿ ಸಿಲುಕಿದ್ದಾರೆ. ಇದರಿಂದ ವಿದ್ಯಾರ್ಥಿ ಚಳವಳಿಗಳು ಬಲ ಕಳೆದುಕೊಳ್ಳುತ್ತಿವೆ. ಜಾತಿ ಮುನ್ನೆಲೆಗೆ ಬರಲು ಧರ್ಮ ರಾಜಕೀಯ ಕಾರಣವಾಗಿದೆ’ ಎಂದರು.

ಶಾಸಕ‌ ಕೆ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ, ಬಿ.ಆರ್‌.ಅಂಬೇಡ್ಕರ್‌ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಅಧ್ಯಕ್ಷೆ ಡಿ.ಭಾಗ್ಯಲಕ್ಷ್ಮಿ ಶ್ರೀನಿವಾಸ್ ಪ್ರಸಾದ್, ಕೇಂದ್ರದ ನಿರ್ದೇಶಕ ಪ್ರೊ.ಎಸ್‌.ನರೇಂದ್ರಕುಮಾರ್ ಪಾಲ್ಗೊಂಡಿದ್ದರು.

ಗುಲಾಮಗಿರಿ ಮನಸ್ಥಿತಿ ಕಿತ್ತುಹಾಕದ ಹೊರತು ಮನುಷ್ಯರಾಗಲು ಅಂಬೇಡ್ಕರ್‌ವಾದಿಯಾಗಲು ಸಾಧ್ಯವಿಲ್ಲ -ಸಿದ್ದರಾಮಯ್ಯ ಮುಖ್ಯಮಂತ್ರಿ

₹15 ಕೋಟಿ ಅನುದಾನಕ್ಕೆ ಮನವಿ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಜೆ.ಸೋಮಶೇಖರ್‌ ಮಾತನಾಡಿ ‘ಕೇಂದ್ರದಲ್ಲಿ ದಲಿತ ಡಾಕ್ಯುಮೆಂಟೇಷನ್‌ ಸೆಂಟರ್‌ ಅಂಬೇಡ್ಕರ್‌ ಮ್ಯೂಸಿಯಂ ಆರಂಭಿಸಲಾಗಿದ್ದು ಇದರ ಅಭಿವೃದ್ಧಿಗೆ ₹7 ಕೋಟಿ ಹಾಗೂ ಕೇಂದ್ರದ ರಜತ ಮಹೋತ್ಸವ ಆಚರಣೆಗೆ ₹8 ಕೋಟಿ ಸೇರಿ ಒಟ್ಟು ₹15 ಕೋಟಿ ಅನುದಾನ ನೀಡಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.