ADVERTISEMENT

ಭೈರಪ್ಪ ಕಾದಂಬರಿಗಳಲ್ಲಿ ಭಾರತೀಯ ಪ್ರಜ್ಞೆ ಜಾಗೃತ

ಎಸ್.ಎಲ್‌.ಭೈರಪ್ಪ ಸಾಹಿತ್ಯೋತ್ಸವ’ದಲ್ಲಿ ಶತಾವಧಾನಿ ಗಣೇಶ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 19:25 IST
Last Updated 19 ಜನವರಿ 2019, 19:25 IST
ಲೇಖಕ ಪ್ರಧಾನ ಗುರುದತ್ತ ಅವರು ‘ಚಿಂತನ–ಮಂಥನ’ ಪುಸ್ತಕ ಬಿಡುಗಡೆ ಮಾಡಿದರು. ಪಿ.ಶೇಷಾದ್ರಿ, ಶೆಫಾಲಿ ವೈದ್ಯ, ಎಸ್‌.ಎಲ್‌.ಭೈರಪ್ಪ, ಶತಾವಧಾನಿ ಆರ್‌.ಗಣೇಶ್, ಡಾ.ಜಿ.ಎಲ್‌.ಶೇಖರ್‌ ಇದ್ದಾರೆ
ಲೇಖಕ ಪ್ರಧಾನ ಗುರುದತ್ತ ಅವರು ‘ಚಿಂತನ–ಮಂಥನ’ ಪುಸ್ತಕ ಬಿಡುಗಡೆ ಮಾಡಿದರು. ಪಿ.ಶೇಷಾದ್ರಿ, ಶೆಫಾಲಿ ವೈದ್ಯ, ಎಸ್‌.ಎಲ್‌.ಭೈರಪ್ಪ, ಶತಾವಧಾನಿ ಆರ್‌.ಗಣೇಶ್, ಡಾ.ಜಿ.ಎಲ್‌.ಶೇಖರ್‌ ಇದ್ದಾರೆ   

ಮೈಸೂರು: ಭೈರಪ್ಪ ಅವರ ಕಾದಂಬರಿಗಳು ವಿಶ್ವದ ತತ್ವಗಳನ್ನು ಭಾರತೀಯವಾದ ನೆಲೆಯಲ್ಲಿ ಓದುಗರ ಮುಂದಿಟ್ಟಿವೆ. ಅವರ ಸಾಹಿತ್ಯದ ಶರೀರ ಭಾರತೀಯ ಮತ್ತು ಕನ್ನಡದ್ದು. ಆದರೆ ಆತ್ಮ ವೈಶ್ವಿಕವಾದದ್ದು ಹಾಗೂ ಮಾತಿಗೆ ಮೀರಿದ ರಸಭಾವಗಳದು ಎಂದು ಲೇಖಕ ಶತಾವಧಾನಿ ಆರ್‌.ಗಣೇಶ್ ಬಣ್ಣಿಸಿದರು.

ಎಸ್‌.ಎಲ್‌.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ವತಿಯಿಂದ ಮೈಸೂರಿನಲ್ಲಿ ಎರಡು ದಿನ ಆಯೋಜಿಸಿರುವ ‘ಎಸ್.ಎಲ್‌.ಭೈರಪ್ಪ ಸಾಹಿತ್ಯೋತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು. ಭೈರಪ್ಪ ಅವರ ಕಾದಂಬರಿಗಳಲ್ಲಿ ಬರುವ ಕಥೆ, ಪಾತ್ರಗಳ ಪರಾಮರ್ಶೆ ಮಾಡಿದರು.

‘ಸಾಕ್ಷಿ’ ಕಾದಂಬರಿಯಲ್ಲಿ ಅವರು ತಟಸ್ಥವಾಗಿ ಆದರೆ ಸಹಾನುಭೂತಿಯಿಂದ, ಧೈರ್ಯವಾಗಿ ಆದರೆ ಶಾಂತತೆಯಿಂದ ಒಂದು ವಸ್ತುವನ್ನು ನೋಡಿದ್ದಾರೆ. ಅದನ್ನು ಭಾರತೀಯ ಪ್ರಜ್ಞೆ ಎನ್ನುತ್ತಾರೆ, ಇದು ವಿಶ್ವ ಪ್ರಜ್ಞೆಯೂ ಹೌದು. ಆ ಪ್ರಜ್ಞೆಯನ್ನು ಅವರು ಕಾದಂಬರಿಯಲ್ಲಿ ಧ್ವನಿಸುತ್ತಾ ಹೋಗುತ್ತಾರೆ ಎಂದು ವಿವರಿಸಿದರು.

ADVERTISEMENT

‘ವೇದಾಂತ, ಮೀಮಾಂಸೆ, ಇತಿಹಾಸ, ಸಮಾಜಶಾಸ್ತ್ರವನ್ನು ಓದಿಕೊಳ್ಳದೆಯೂ ಭೈರಪ್ಪ ಅವರ ಕೃತಿಗಳನ್ನು ಓದಿದರೆ ಅದು ಖುಷಿ ಕೊಡುತ್ತದೆ. ಅವರ ಕೃತಿಗಳನ್ನು ಯಾವ ರೀತಿಯಿಂದ ನೋಡಿದರೂ ಸ್ವಾರಸ್ಯ ಎನಿಸುತ್ತದೆ. ಇಡೀ ದೇಶದ ತಲ್ಲಣವನ್ನು ‘ತಂತು’ ಕಾದಂಬರಿಯಲ್ಲಿ ನೋಡಬಹುದು. ಆಧುನಿಕ ಕಾಲದ ಮಹಾಭಾರತ ಎಂದು ಆ ಕಾದಂಬರಿಯನ್ನು ನಂಬಿಕೊಂಡಿದ್ದೇನೆ’ ಎಂದರು.

ಕಾಳಿದಾಸನ ‘ಮೇಘದೂತ’ ಇದ್ದಂತೆ ಭೈರಪ್ಪ ಅವರ ‘ಜಲಪಾತ’ ಕಾದಂಬರಿ. ಪ್ರತಿ ಅಕ್ಷರಗಳಲ್ಲಿ ಕಾವ್ಯ ಪ್ರೀತಿ ತುಂಬಿಕೊಂಡಿದೆ. ’ಜಲಪಾತ’ ಕಾದಂಬರಿಯಲ್ಲಿ ಸೃಷ್ಟಿಯನ್ನು ಮೂರು ವಿಧಗಳಲ್ಲಿ ತೆಗೆದುಕೊಂಡಿದ್ದಾರೆ. ನಿಸರ್ಗದಲ್ಲಿ ಸೃಷ್ಟಿ, ಗಂಡು– ಹೆಣ್ಣು, ಪ್ರಾಣಿ ಪಕ್ಷಿಗಳ ಹಂತದಲ್ಲಿ ಸೃಷ್ಟಿ ಮತ್ತು ಕಲಾ ಸೃಷ್ಟಿ ಅದರಲ್ಲಿದೆ. ಒಂದೇ ಕೃತಿಯಲ್ಲಿ ಈ ಮೂರು ರೀತಿಯ ಸೃಷ್ಟಿಯನ್ನು ಯಾರೂ ಪರಿಭಾವಿಸಿಲ್ಲ. ಈ ರೀತಿಯ ಕೆಲವು ಅಂಶಗಳನ್ನು ಮೇಘದೂತದಲ್ಲಿ ಕಾಣಬಹುದು ಎಂದು ತಿಳಿಸಿದರು.

ಭೈರಪ್ಪ ಅವರು ನಿರ್ದಾಕ್ಷಿಣ್ಯದಿಂದ ಬರೆಯುತ್ತಾರೆ. ಸನಾತನ ಧರ್ಮದ ಕುರಿತು ಚಿಕಿತ್ಸಕ ರೀತಿಯಲ್ಲಿ ಬರೆದಿದ್ದಾರೆ. ಈ ರೀತಿಯಲ್ಲಿ ಚಿಕಿತ್ಸಕವಾದ ವಿಶ್ಲೇಷಣೆ ಬೇರೆ ಧರ್ಮದ ಲೇಖಕರು ಅವರ ಮತಗಳ ಮೇಲೆ ಮಾಡಿಕೊಂಡಿಲ್ಲ. ಭೈರಪ್ಪನವರು ಸನಾತನ ಧರ್ಮದ ಬಗ್ಗೆ ಅಂದಾಭಿಮಾನದಿಂದ ವರ್ತಿಸುತ್ತಿದ್ದಾರೆ ಎನ್ನುವವರು ಇದನ್ನು ಗಮನಿಸಬೇಕು ಎಂದರು.

ಭೈರಪ್ಪ ಅವರ ಜತೆಗಿನ ಸಂದರ್ಶನಗಳ ಸಂಕಲನ ‘ಚಿಂತನ ಮಂಥನ’ ಪುಸ್ತಕವನ್ನು ಲೇಖಕ ಪ್ರಧಾನ ಗುರುದತ್ತ ಬಿಡುಗಡೆ ಮಾಡಿದರು. ಪುಣೆಯ ಲೇಖಕಿ ಶೆಫಾಲಿ ವೈದ್ಯ, ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಲೇಖಕ ಕೃಷ್ಣೇಗೌಡ, ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ.ಜಿ.ಎಲ್‌.ಶೇಖರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.