ADVERTISEMENT

ಮನೆಗಳ ಬಗ್ಗೆ ಅವರಿಗೇನು ಗೊತ್ತು? : ಹರ್ಷಿಕಾಗೆ ಸಾ.ರಾ.ಮಹೇಶ್ ತಿರುಗೇಟು

ಹರ್ಷಿಕಾ ಹೇಳಿಕೆಗೆ ಸಚಿವ ಸಾ.ರಾ.ಮಹೇಶ್‌ ತಿರುಗೇಟು

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 14:37 IST
Last Updated 16 ಜೂನ್ 2019, 14:37 IST
ಸಾ.ರಾ. ಮಹೇಶ್
ಸಾ.ರಾ. ಮಹೇಶ್   

ಮೈಸೂರು: ಕೊಡಗು ಸಂತ್ರಸ್ತರಿಗಾಗಿ ನಿರ್ಮಿಸಿರುವ ಮನೆಗಳ ಗುಣಮಟ್ಟ ಸರಿಯಿಲ್ಲ ಎಂದು ಹೇಳಿಕೆ ನೀಡಿರುವ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹರ್ಷಿಕಾ ಯಾರು? ಈಗ ಏನಾಗಿದ್ದಾರೆ? ಸಿನಿಮಾದ ಬಗ್ಗೆ ಏನಾದರೂ ಹೇಳಿದರೆ ಒಪ್ಪಬಹುದಿತ್ತು. ಅವರು ಯಾವಾಗ ತಾಂತ್ರಿಕ ತಜ್ಞರಾದರು ಎಂಬುದು ಗೊತ್ತಿಲ್ಲ. ಏನು ಓದಿದ್ದಾರೆ ಎಂಬುದೂ ತಿಳಿದಿಲ್ಲ’ ಎಂದರು.

ಮನೆಗಳು ಕಳಪೆಯಾಗಿವೆ. ಕೊಡಗು ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಮನೆ ನಿರ್ಮಿಸಿಕೊಡಬೇಕು ಎಂದು ಹರ್ಷಿಕಾ ಹೇಳಿರುವುದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.

ADVERTISEMENT

ಕೊಡಗು ಜಿಲ್ಲೆಗೆ ‘ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಕು’ ಎನ್ನುವ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೊಡಗಿನಲ್ಲಿರುವ ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ₹ 100 ಕೋಟಿ ಬಿಡುಗಡೆ ಮಾಡಿದೆ. ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಸರ್ಕಾರ ಕ್ರಮ ಕೈಗೊಂಡಿರುವಾಗ ಅಭಿಯಾನದ ಅಗತ್ಯ ಏನಿತ್ತು’ ಎಂದು ಪ್ರಶ್ನಿಸಿದರು.

‘ಕೆಲವರು ಪ್ರಚಾರಕ್ಕಾಗಿ ಹೀಗೆ ಮಾಡುತ್ತಾರೆ. ಸರ್ಕಾರ ಕ್ರಮ ಕೈಗೊಳ್ಳಲು ಮುಂದಾದ ಬಳಿಕ ಅಭಿಯಾನ ನಡೆಸುತ್ತಾರೆ. ಆ ಬಳಿಕ ನಮ್ಮ ಒತ್ತಡದಿಂದ ಕೆಲಸ ಆಯಿತು ಎಂದು ಕೊಚ್ಚಿಕೊಳ್ಳುತ್ತಾರೆ’ ಎಂದು ವ್ಯಂಗ್ಯವಾಡಿದರು.

ಪ್ರಶ್ನಿಸುವ ಹಕ್ಕು ನನಗೂ ಇದೆ: ಹರ್ಷಿಕಾ ಪ್ರತ್ಯುತ್ತರ

ಸಾ.ರಾ.ಮಹೇಶ್‌ ಮಾಡಿರುವ ಟೀಕೆಗೆ ಹರ್ಷಿಕಾ ಪ್ರತ್ಯುತ್ತರ ನೀಡಿದ್ದು, ‘ನಾನು ಎಂಜಿನಿಯರ್‌. ಬಿ.ಇ. ಪದವೀಧರೆಯಾಗಿದ್ದು, ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದೇನೆ’ ಎಂದಿದ್ದಾರೆ.

‘ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ಸಿನಿಮಾದವರಿಗೆ ಏನೆಲ್ಲಾ ಮಾಡಲು ಸಾಧ್ಯ ಎಂಬುದನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.

‘ಕೊಡಗಿನಲ್ಲಿ ನಿರ್ಮಿಸಿರುವ ಮನೆಗಳು ಕೆಟ್ಟದಾಗಿವೆ. ಅದಕ್ಕೆ ಸರ್ಕಾರ ಒಳ್ಳೆಯ ಮನೆಗಳನ್ನು ಕಟ್ಟಿಸಿಕೊಡಲಿ ಎಂದಿದ್ದೆ. ನಾನು ಕೊಡಗಿನ ಮನೆಮಗಳು. ಭಾರತದ ಪ್ರಜೆಯಾಗಿ ಪ್ರಶ್ನಿಸುವ ಹಕ್ಕು ನನಗೂ ಇದೆ’ ಎಂದು ಫೇಸ್‌ಬುಕ್‌ ವಿಡಿಯೊದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.