ADVERTISEMENT

ಜನ ಸಂಕಲ್ಪ ಯಾತ್ರೆ ಬದಲು ಬಿಜೆಪಿ ಕ್ಷಮೆಯಾಚನೆ ಯಾತ್ರೆ ಮಾಡಲಿ: ಸಲೀಂ ಅಹಮ್ಮದ್

ಸಂವಿಧಾನ ಬಚಾವೋ' ಪಾದಯಾತ್ರೆಗೆ ಚಾಲನೆ ನೀಡಿದ ಸಲೀಂ ಅಹಮ್ಮದ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 8:41 IST
Last Updated 28 ನವೆಂಬರ್ 2022, 8:41 IST
   

ಚಿತ್ರದುರ್ಗ: ಚುನಾವಣೆ ಸಮೀಪಿಸಿದ್ದರಿಂದ ಬಿಜೆಪಿಗೆ ಮತದಾರರು ನೆನಪಾಗಿದ್ದಾರೆ. ಜನ ಸಂಕಲ್ಪ ಯಾತ್ರೆಯ ಬದಲು ಕ್ಷಮೆಯಾಚನೆ ಯಾತ್ರೆ ಮಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಕುಟುಕಿದರು.

ಕಾಂಗ್ರೆಸ್ ಹಮ್ಮಿಕೊಂಡಿರುವ ಸಂವಿಧಾನ ಬಚಾವೋ ಪಾದಯಾತ್ರೆಗೆ ತಾಲ್ಲೂಕಿನ ಮದಕರಿಪುರದಿಂದ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಬಿಜೆಪಿಯ ಭ್ರಷ್ಟ ಆಡಳಿತಕ್ಕೆ ಜನರು ನಲುಗಿ ಹೋಗಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆ ಜನರನ್ನು‌ ಹೈರಾಣ ಮಾಡಿವೆ. ಅತಿವೃಷ್ಟಿಯಿಂದ ಬೆಳೆ ಹಾಳಾದಾಗ ಬಿಜೆಪಿ ನಾಯಕರು ಎಲ್ಲಿ ಹೋಗಿದ್ದರು ಎಂಬುದನ್ನು ರೈತರು ಮರೆತಿಲ್ಲ. ರೈತರಿಗೆ ಸಹಾಯ ಮಾಡದ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರು ಬದಲಾವಣೆ ಬಯಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ' ಎಂದು ಹೇಳಿದರು.

ADVERTISEMENT

'ಬಿಜೆಪಿ‌ ಸಂವಿಧಾನ ಬದಲಾವಣೆ ಮಾಡುವ ಷಡ್ಯಂತ್ರ ರೂಪಿಸಿದೆ. ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸಂವಿಧಾನದ ಉಳಿಸಲು ಬದ್ಧವಾಗಿದೆ. ಬಿಜೆಪಿ ಷಡ್ಯಂತ್ರವನ್ನು ಬಯಲಿಗೆ ಎಳೆಯಲಿದೆ' ಎಂದು ಹೇಳಿದರು.

ಸಮಾಜದ ಶಾಂತಿ, ನೆಮ್ಮದಿಯನ್ನು ಬಿಜೆಪಿ ಹಾಳು ಮಾಡುತ್ತಿದೆ. ಭಾರತವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ರಾಹುಲ್ ಗಾಂಧಿ ಅವರು ಭಾರತವನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಭಾರತ್ ಜೋಡೊ ಯಾತ್ರೆಯ ಮುಂದುವರಿದ ಭಾಗವಾಗಿ ಸಂವಿಧಾನ ಬಚಾವೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪ್ರತಿ‌ ವಿಧಾನಸಭಾ ಕ್ಷೇತ್ರದಲ್ಲಿ ಐದು ದಿನದ ಕಾರ್ಯಕ್ರಮ ನಡೆಯಲಿದೆ. ಪಕ್ಷದ 17 ವಿಭಾಗದ ಎಲ್ಲ ಕಾರ್ಯಕರ್ತರು ಪಾಲ್ಗೊಳ್ಳಲ್ಲಿದ್ದಾರೆ' ಎಂದು ಹೇಳಿದರು.

ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಂವಿಧಾನದ ಪ್ರಸ್ತಾವನೆ ಓದಿದರು. ರಾಜ್ಯಸಭೆಯ ಮಾಜಿ ಸದಸ್ಯ ಎಚ್.ಹನುಮಂತಪ್ಪ,
ಕೆಪಿಸಿಸಿ ಉಪಾಧ್ಯಕ್ಷರಾದ ಎಚ್.ಆಂಜನೇಯ, ಬಿ.ಎನ್.ಚಂದ್ರಪ್ಪ, ಎಸ್.ಸಿ ಘಟಕದ ಅಧ್ಯಕ್ಷ ಧರ್ಮಸೇನಾ, ಮುಖಂಡರಾದ ಸಚಿನ್ ಮೇಘಾ, ಜಿ.ಎಸ್.ಮಂಜುನಾಥ್, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.